ನಿವೃತ್ತ ಸಬ್‌ಇನ್‌ಸ್ಪೆಕ್ಟರ್‌ ನಾಗೇಶ್‌ ಎಂಬುವರ ವಿರುದ್ಧ ದೂರು ದಾಖಲು| ಬೆಂಗಳೂರಿನ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ನಾಗೇಶ್‌| ನಾಯಿ ಮೇಲೆ ಕಾರು ಹರಿಸಿದ ನಿವೃತ್ತ ಎಸ್‌ಐ| ಗಂಭೀರವಾಗಿ ಗಾಯಗೊಂಡ ನಾಯಿ| 

ಬೆಂಗಳೂರು(ಜ.27): ಮಲಗಿದ್ದ ಬೀದಿನಾಯಿಯೊಂದರ ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿದ ಆರೋಪದ ಮೇರೆಗೆ ನಿವೃತ್ತ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಪಶು ವೈದ್ಯ ರಮೇಶ್‌ ಎಂಬುವರು ಕೊಟ್ಟ ದೂರಿನ ಮೇರೆಗೆ ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿ ನಿವಾಸಿ ನಿವೃತ್ತ ಸಬ್‌ಇನ್‌ಸ್ಪೆಕ್ಟರ್‌ ನಾಗೇಶ್‌ (65) ಎಂಬುವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. 

ಸಿನಿಮಿಯ ಸ್ಟೈಲ್‌: ಗುಂಡು ಹಾರಿಸಿ ದರೋಡೆಗೆ ಯತ್ನ

ನಗರದ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ನಾಗೇಶ್‌ ಅವರು ಕುಟುಂಬ ಸಮೇತ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯಲ್ಲಿ ನೆಲೆಸಿದ್ದರು. ಭಾನುವಾರ ಮಧ್ಯಾಹ್ನ ನಾಗೇಶ್‌ ಅವರ ಮನೆ ಸಮೀಪವೇ ಬೀದಿ ನಾಯಿಯೊಂದು ಮಲಗಿತ್ತು. ಹಾರನ್‌ ಮಾಡಿದರೂ ಎದ್ದಿಲ್ಲ. ಈ ವೇಳೆ ನಾಗೇಶ್‌ ತಮ್ಮ ಕಾರನ್ನು ನಾಯಿ ಮೇಲೆ ಹರಿಸಿದ್ದಾರೆ. ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿದೆ. ನಿವೃತ್ತ ಪೊಲೀಸ್‌ ಅಧಿಕಾರಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿರುವ ದೃಶ್ಯಾವಳಿ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿತ್ತು.

ಈ ಸಂಬಂಧ ಪಶು ವೈದ್ಯ ರಮೇಶ್‌ ಅವರು ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಗೇಶ್‌ ಅವರಿಗೆ ಈ ಸಂಬಂಧ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಹುಳಿಮಾವು ಠಾಣೆ ಪೊಲೀಸರು ಮಾಹಿತಿ ನೀಡಿದರು.