ನಟ ದರ್ಶನ್‌ನನ್ನು ಜೈಲಿಗೆ ಕಳುಹಿಸಿದ ಮೂವರು ಅಭಿಮಾನಿಗಳು ಜೈಲಿನಿಂದ ಬಿಡುಗಡೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶರಣಾಗಲು ಹೋಗಿದ್ದ ಮೂವರು ನಟ ದರ್ಶನ್ ಹೆಸರನ್ನು ಉಲ್ಲೇಖಿಸಿ ಆತನನ್ನೂ ಜೈಲಿಗೆ ಕಳುಹಿಸಿದ ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ತುಮಕೂರು (ಅ.02): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸರೆಂಡರ್ ಆಗಲು ಹೋಗಿ ಪೊಲೀಸರ ಮುಂದೆ ನಟ ದರ್ಶನ್ ಹೆಸರೇಳಿ, ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 13 ಜನರನ್ನು ಜೈಲಿಗೆ ಕಳುಹಿಸಿದ್ದ ಮೂವರು ಆರೋಪಿಗಳು ಬುಧವಾರ ಗಾಂಧಿ ಜಯಂತಿ ದಿನ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಮೂವರು ಆರೋಪಿಗಳು ರಿಲೀಸ್ ಆಗಿದ್ದಾರೆ. ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಜೈಲಿನಿಂದ ಬಿಡುಗಡೆ ಆಗಿರುವ ಆರೋಪಿಗಳು ಆಗಿದ್ದಾರೆ. ಜಾಮೀನು ಸಿಕ್ಕಿ 10 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಮನೆಯತ್ತ ಹೋಗಿದ್ದಾರೆ. ಕಳೆದ ತಿಂಗಳ ಸೆಪ್ಟೆಂಬರ್ 23 ರಂದು ಮೂವರು ಆರೋಪಿಗಳಿಗೆ ಜಾಮೀನು ಲಭ್ಯವಾಗಿತ್ತು. ಇದರಲ್ಲಿ, ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರು ಆಗಿತ್ತು. ಉಳಿದಂತೆ ಆರೋಪಿ ನಿಖಿಲ್ ನಾಯಕ್ ಹಾಗೂ ಕಾರ್ತಿಕ್ ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು.
ಇದನ್ನೂ ಓದಿ: A 15 ಆರೋಪಿ ಕಾರ್ತಿಕ್‌ಗೆ ಜಾಮೀನು ಸಿಕ್ಕರೂ ಹೊರ ಬರವಂತಿಲ್ಲ; ದರ್ಶನ್‌ನಿಂದ ಎದುರಾದ ಸಂಕಷ್ಟ ಒಂದೆರಡಲ್ಲ ಎಂದು ಬೇಸರ
ಆದರೆ, ಈ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದ್ದರೂ ಶ್ಯೂರಿಟಿದಾರರು ಸಿಗದೇ ಕುಟುಂಬಸ್ಥರು ಪರದಾಡುತ್ತಿದ್ದರು. ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಪರದಾಟ ನಡೆಸಿದ್ದ ಕುಟುಂಬಸ್ಥರು, ಕೊನೆಗೆ ನಿನ್ನೆ ಜಾಮೀನು ಸಿಕ್ಕು 9ನೇ ದಿನಕ್ಕೆ ಪರದಾಡಿ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆದ್ದರಿಂದ ನಿನ್ನೆ ರಾತ್ರಿ ತುಮಕೂರು ಜೈಲಾಧಿಕಾರಿಗೆ ಜಾಮೀನು ಆದೇಶ ಪ್ರತಿ ತಲುಪಿಸಲಾಗಿತ್ತು. ರಾತ್ರಿ ಆಗಿದ್ದರಿಂದ ಆರೋಪಿಗಳನ್ನು ಬಿಡುಗಡೆ ಮಾಡದೇ ಇಂದು ಬೆಳಗ್ಗೆ ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳನ್ನ ಜೈಲಿನಿಂದ ರಿಲೀಸ್ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಮೂವರು ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ. ಅಲ್ಲದೆ ಪೊಲೀಸರಿಗೆ ನಾವು ಈಗಾಗಲೇ ಹೇಳಿಕೆಯನ್ನು ನೀಡಿದ್ದೇವೆ ಎಂದು ತಿಳಿಸಿದರು. ರೇಣುಕಾಸ್ವಾಮಿ ಕೊಲೆ ಕೇಸಿನ ಎ 15 ಆರೋಪಿ ಕಾರ್ತಿಕ್, ಎ 16 ಕೇಶವಮೂರ್ತಿ ಮತ್ತು ಎ17- ನಿಖಿಲ್ ಬಿಡುಗಡೆ ಆದವರಾಗಿದ್ದಾರೆ.
ಕೊಲೆ ಕೇಸಿನಲ್ಲಿ ಸರೆಂಡರ್ ಆಗಲು ಹೋಗಿ, ದರ್ಶನ್ ಹೆಸರು ಬಾಯಿಬಿಟ್ಟರು: ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಥಳಿಸಿ ಕೊಲೆ ಮಾಡಿದ್ದಾರೆ. ಆದರೆ, ಈ ಕೊಲೆ ಕೇಸನ್ನು ತಾವೇ ಮಾಡಿದ್ದಾಗಿ ಒಪ್ಪಿಕೊಂಡು ಪೊಲೀಸರಿಗೆ ಸರೆಂಡರ್ ಆಗಲು 30 ಲಕ್ಷ ರೂ. ಕೊಟ್ಟು ಮೂವರನ್ನು ಜೈಲಿಗೆ ಹೋಗುವಂತೆ ಕಳಿಸಲಾಗಿತ್ತು. ಆಗ ದರ್ಶನ್ ಅಭಿಮಾನಿಗಳಾದ ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಸೇರಿಕೊಂಡು ಕೊಲೆಗೀಡಾದ ರೇಣುಕಾಸ್ವಾಮಿ ಮೃತದೇಹವನ್ನು ಸುಮನಹಳ್ಳಿ ಸೇತುವೆ ಬಳಿ ಬೀಸಾಡಿ ಪೊಲೀಸರಿಗೆ ಸರೆಂಡರ್ ಆಗಿದ್ದರು.
ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಮುಂದೆ ಹೋಗಿ ಎಂದ ಕಂಡಕ್ಟರ್‌ಗೆ ಚಾಕು ಚುಚ್ಚಿದ ಪ್ರಯಾಣಿಕ!
ಆದರೆ, ಪೊಲೀಸರು ಇವರಿಗೆ ಲಾಢಠಿ ರುಚಿ ತೋರಿಸಿದಾಗ ನಟ ದರ್ಶನ್ ಹಾಗೂ ಸಹಚರರು ಹೊಡೆದು ಕೊಲೆ ಮಾಡಿದ್ದು, ತಾವು ಮೃತದೇಹ ಬೀಸಾಡಿ ಸರೆಂಡರ್ ಆಗಲು ಬಂದಿದ್ದೆವು ಎಂಬುದನ್ನು ಬಾಯಿ ಬಿಟ್ಟಿದ್ದಾರೆ. ಇದಾದ ನಂತರ ಪೊಲೀಸರು ನಟ ದರ್ಶನ್ ಸೇರಿದಂತೆ ಒಟ್ಟು 14 ಜನರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಇದೀಗ ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ. ಈಗಾಗಲೇ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಎಲ್ಲರೂ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಯಾರಿಗೂ ಜಾಮೀನು ಮಂಜೂರು ಆಗಿಲ್ಲ.