ಉತ್ತರ ಪ್ರದೇಶ ಮೂಲದ ಇಕ್ಲಾಕ್‌ ಖುರೇಷಿ ಹಲವು ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಬಂದು ನೆಲೆಸಿದ್ದ| ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ತರಕಾರಿ, ಹಣ್ಣು, ಮಾಂಸ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇಕ್ಲಾಕ್‌ ಖುರೇಷಿ| ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಇಕ್ಲಾಕ್‌| 13 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ|

ಬೆಂಗಳೂರು(ಆ.08): ದಶಕದಿಂದ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಇಕ್ಲಾಕ್‌ ಖುರೇಷಿ (45) ಬಂಧಿತ. ಈತ ಹಲವು ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿದ್ದು, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ತರಕಾರಿ, ಹಣ್ಣು, ಮಾಂಸ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ

ಅಂದಿನ ಬಿಬಿಎಂಪಿ ಸದಸ್ಯರೂ ಆಗಿದ್ದ ಶಬನಂ ಬಿಲ್ಡರ್ಸ್‌ ಮಾಲಿಕ ಸಮೀವುಲ್ಲಾಗೆ ವಿದೇಶದಿಂದ ಕರೆ ಮಾಡಿದ್ದ ರವಿ ಪೂಜಾರಿ ಹಫ್ತಾ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡಲು ನಿರಾಕರಿಸಿದಾಗ ತನ್ನ ಸಹಚರರಿಗೆ ಸಮೀವುಲ್ಲಾನನ್ನು ಹತ್ಯೆ ಮಾಡುವಂತೆ ಸೂಚನೆ ನೀಡಿದ್ದ.

ಭೂಗತ ಪಾತಕಿ ರವಿಪೂಜಾರಿ ವಿರುದ್ಧ ನಾಲ್ಕನೇ ಚಾರ್ಜ್‌ಶೀಟ್‌

2007ರ ಫೆ.15ರಂದು ತಿಲಕ್‌ನಗರ ಶಬನಂ ಬಿಲ್ಡರ್‌ ಕಚೇರಿಗೆ ನುಗ್ಗಿದ ಮುಸುಕುಧಾರಿ ದುಷ್ಕರ್ಮಿಗಳು ನೌಕರರಾದ ಶೈಲಜಾ ಮತ್ತು ಕಾರು ಚಾಲಕ ರವಿ ಎಂಬುವರನ್ನು ಗುಂಡಿಕ್ಕಿ ಕೊಂದಿದ್ದರು. ಹತ್ಯೆ ಬಳಿಕ ಆರೋಪಿಗಳು ರವಿ ಪೂಜಾರಿ ಎಂಬ ಭಿತ್ತಿ ಪತ್ರವನ್ನು ಕಚೇರಿ ಗಾಜಿನ ಮೇಲೆ ಅಂಟಿಸಿ ಹೋಗಿದ್ದರು. ಕೃತ್ಯಕ್ಕೆ ಬೇಕಾದ ಶಸ್ತ್ರಾಸ್ತ್ರವನ್ನು ಆರೋಪಿ ಇಕ್ಲಾಕ್‌ ಖುರೇಷಿ ಉತ್ತರ ಪ್ರದೇಶದಿಂದ ಪೂರೈಕೆ ಮಾಡಿದ್ದ. ಪ್ರಕರಣದಲ್ಲಿ ಪೊಲೀಸರು ಇಕ್ಲಾಕ್‌ನನ್ನು ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ 2007ರಲ್ಲಿ ಬಂಧಿಸಿದ್ದರು. ಒಟ್ಟಾರೆ 17 ಮಂದಿಯನ್ನು ಬಂಧಿಸಿ, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದ ಇಕ್ಲಾಕ್‌, 13 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಹಲವು ಬಾರಿ ವಾರೆಂಟ್‌ ನೋಟಿಸ್‌ ಜಾರಿ ಮಾಡಿದ್ದರೂ ಬಂದಿರಲಿಲ್ಲ. ಅದಕ್ಕಾಗಿ ತಿಲಕನಗರ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೋರ್ಟ್‌ ಆದೇಶ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಾಜ್ಯದಲ್ಲಿ ಬೇರೆ ಹೆಸರು ಬದಲಾಯಿಸಿಕೊಂಡು ಕುಟುಂಬದೊಂದಿಗೆ ನೆಲೆಸಿದ್ದ. ರವಿ ಪೂಜಾರಿ ಸಹಚರರು ಬಾಯ್ಬಿಟ್ಟಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.