ಬೆಂಗಳೂರು(ಜು.11): ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಅಪರಾಧ ಪ್ರಕರಣಗಳ ತನಿಖೆಯನ್ನು ಮುಂದುವರೆಸಿರುವ ಸಿಸಿಬಿ ಪೊಲೀಸರು ಆತನ ವಿರುದ್ಧ ನ್ಯಾಯಾಲಯಕ್ಕೆ ನಾಲ್ಕನೇ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಇಂದಿರಾನಗರದಲ್ಲಿರುವ ಯೂಟಿವಿ ಕಂಪನಿಗೆ 2009ರಲ್ಲಿ ಕರೆ ಮಾಡಿದ್ದ ರವಿಪೂಜಾರಿ ಹಫ್ತಾ ಕೊಡುವಂತೆ ಬೆದರಿಕೆವೊಡ್ಡಿದ್ದ. ಹಫ್ತಾ ನೀಡಲು ಕಂಪನಿಯವರು ನಿರಾಕರಿಸಿದಾಗ ಆತನ ಸಹಚರರು ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ, ಪೀಠೋಪಕರಣ ಧ್ವಂಸ ಮಾಡಿದ್ದರು. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿರಲಿಲ್ಲ.

ಇದೀಗ ದಕ್ಷಿಣ ಆಫ್ರಿಕಾದಲ್ಲಿ ರವಿ ಪೂಜಾರಿಯನ್ನು ಬಂಧಿಸಿ ರಾಜ್ಯಕ್ಕೆ ಕರೆತಂದ ಮೇಲೆ ಸಿಸಿಬಿ ಪೊಲೀಸರು ಆತನ ವಿರುದ್ಧದ ಎಲ್ಲ ಪ್ರಕರಣಗಳ ತನಿಖೆ ಕೈಗೊಂಡಿದ್ದಾರೆ. ಯೂಟಿವಿ ಕಂಪನಿಗೆ ಬೆದರಿಕೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಿಸಿಬಿ ಪೊಲೀಸರು, ರವಿ ಪೂಜಾರಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದಾರೆ. ರಾಜ್ಯದಲ್ಲಿ ರವಿ ಪೂಜಾರಿ ವಿರುದ್ಧ 93 ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೂ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಆರೋಪ ಪಟ್ಟಿಸಲ್ಲಿಸಲಾಗಿದೆ. ವೈಯಾಲಿಕಾವಲ್‌, ತಿಲಕನಗರ ಮತ್ತು ವೈಟ್‌ಫೀಲ್ಡ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ CCB ತನಿಖೆ

ರವಿ ಪೂಜಾರಿಗೂ ಕೋವಿಡ್‌-19 ಪರೀಕ್ಷೆ ನಡೆಸಿದ್ದು, ನೆಗೆಟಿವ್‌ ಬಂದಿದೆ. ಈ ಮೊದಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಗಿತ್ತು. ಆ ನಂತರ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಈ ಎಲ್ಲ ಓಡಾಟದ ನಡುವೆ ಕೊರೋನಾ ಸೋಂಕು ಬಂದಿರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.