ಬೆಂಗಳೂರು: 13ನೇ ಮಹಡಿಯಿಂದ ಜಿಗಿದು ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರಿನ ಜ್ಞಾನಜ್ಯೋತಿನಗರ ನಿವಾಸಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸೆ.20ರಂದು ಸಂಜೆ ನಾಯಂಡಹಳ್ಳಿ ರಸ್ತೆಯ ಬಿಎಚ್‌ಇಎಲ್ ಎದುರಿನ ಖಾಸಗಿ ಅಪಾರ್ಟ್‌ಮೆಂಟ್‌ವೊಂದರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರು(ಸೆ.23): ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಖಾಸಗಿ ಅಪಾರ್ಟ್‌ಮೆಂಟ್‌ವೊಂದರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜ್ಞಾನಜ್ಯೋತಿನಗರ ನಿವಾಸಿ ವಿಜಯಲಕ್ಷ್ಮಿ(೧೭) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸೆ.20ರಂದು ಸಂಜೆ ನಾಯಂಡಹಳ್ಳಿ ರಸ್ತೆಯ ಬಿಎಚ್‌ಇಎಲ್ ಎದುರಿನ ಖಾಸಗಿ ಅಪಾರ್ಟ್‌ಮೆಂಟ್‌ವೊಂದರ 13ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೆ.21ರಂದು ಸಂಜೆ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೆಡಿಕಲ್ ವಿದ್ಯಾರ್ಥಿ ಸಾವು!
ಧರ್ಮಸ್ಥಳಕ್ಕೆ ಪ್ರಯಾಣ:
ಮೃತ ವಿಜಯಲಕ್ಷ್ಮಿ ತಾಯಿ ಯಶೋಧಾ ಜತೆಗೆ ನಾಗರಬಾವಿ ಸಮೀಪದ ಜ್ಞಾನಜ್ಯೋತಿನಗರದಲ್ಲಿ ನೆಲೆಸಿದ್ದಳು. ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿಜಯಲಕ್ಷ್ಮಿ ಸೆ.19ರಂದು ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದಳು. ಆದರೆ, ಕಾಲೇಜಿಗೆ ಹೋಗದೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಳು. ಧರ್ಮಸ್ಥಳದ ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿಜಯಲಕ್ಷ್ಮಿಯನ್ನು ಗಮನಿಸಿದ ಹರೀಶ್ ಎಂಬುವವರು ಆಕೆಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಆಕೆ ಮನೆಬಿಟ್ಟು ಬಂದಿರುವ ವಿಚಾರ ತಿಳಿಸಿದ್ದಾಳೆ. ಈ ವೇಳೆ ಬುದ್ಧಿವಾದ ಹೇಳಿ ಚೀಟಿಯಲ್ಲಿ ತಮ್ಮ ಫೋನ್ ನಂಬರ್ ಬರೆದುಕೊಟ್ಟು ಬೆಂಗಳೂರು ಬಸ್ ಹತ್ತಿಸಿ ಕಳುಹಿಸಿದ್ದಾರೆ.
ಸಂಬಂಧಿಕರ ಭೇಟಿ ನೆಪ:
ಸೆ.20ರಂದು ಸಂಜೆ 6.15ರ ಸುಮಾರಿಗೆ ವಿಜಯಲಕ್ಷ್ಮಿ ನಾಯಂಡಹಳ್ಳಿ ರಸ್ತೆಯ ಬಿಎಚ್‌ಇಎಲ್ ಎದುರಿನ ಖಾಸಗಿ ಅಪಾರ್ಟ್‌ಮೆಂಟ್ ಬಳಿ ಬಂದಿದ್ದಾಳೆ. ಈ ವೇಳೆ ಗೇಟ್ ಬಳಿ ಸೆಕ್ಯೂರಿ ಗಾರ್ಡ್ ತಡೆದು ವಿಚಾರಿಸಿದಾಗ, 13ನೇ ಮಹಡಿಯಲ್ಲಿ ನಮ್ಮ ಸಂಬಂಧಿಕರು ಇದ್ದು, ಅಲ್ಲಿಗೆ ಹೋಗಬೇಕು ಎಂದಿದ್ದಾಳೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ 13ನೇ ಮಹಡಿ ನಿವಾಸಿಗಳಿಗೆ ಕರೆ ಮಾಡಿದಾಗ ಪರಿಚಿತರು ಇರಬಹುದು ಎಂದು ಒಳಗೆ ಕಳುಹಿಸುವಂತೆ ನಿವಾಸಿಗಳು ಹೇಳಿದ್ದಾರೆ. ಅದರಂತೆ ಸೆಕ್ಯೂರಿ ಗಾರ್ಡ್ ಆಕೆಯನ್ನು ಅಪಾರ್ಟ್‌ಮೆಂಟ್ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ಈ ವೇಳೆ 13ನೇ ಮಹಡಿಗೆ ತೆರಳಿದ ವಿಜಯಲಕ್ಷ್ಮಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಬಿದ್ದ ಜಾಗ ಕಿರಿದಾಗಿ ಇದ್ದಿದ್ದರಿಂದ ಯಾರೂ ಆ ವೇಳೆ ಮೃತದೇಹ ಗಮನಿಸಿಲ್ಲ. ಸೆ.21ರಂದು ಸಂಜೆ ಸ್ಥಳೀಯರು ವಾಯುವಿಹಾರ ಮಾಡುವಾಗ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಿಜಯಲಕ್ಷ್ಮಿ ಕಾಲೇಜಿನ ಬ್ಯಾಗ್‌ನಲ್ಲಿ ಇದ್ದ ಗುರುತಿನ ಚೀಟಿ ಪರಿಶೀಲಿಸಿದಾಗ ಆಕೆಯ ಗುರುತು, ವಿಳಾಸ ಪತ್ತೆಯಾಗಿದೆ. ಬಳಿಯ ಆಕೆಯ ಬಳಿಯಿದ್ದ ಚೀಟಿಯಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಧರ್ಮಸ್ಥಳ ಮೂಲದ ಹರೀಶ್ ಎಂಬುವವರು ಕರೆ ಸ್ವೀಕರಿಸಿ, ವಿಜಯಲಕ್ಷ್ಮಿ ಧರ್ಮಸ್ಥಳಕ್ಕೆ ಬಂದಿದ್ದು, ತಾವು ವಾಪಾಸ್ ಬೆಂಗಳೂರಿಗೆ ಬಸ್ ಹತ್ತಿಸಿದ ವಿಚಾರ ತಿಳಿಸಿದ್ದಾರೆ.
Bengaluru ಅಪ್ಪ ಇಂಜಿನಿಯರ್, ಅಮ್ಮ ಟೀಚರ್: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು
ತಂದೆಗೆ ಕರೆ ಮಾಡಿಸಿದ್ದಳು
ವಿಜಯಲಕ್ಷ್ಮಿಗೆ ಈ ಅಪಾರ್ಟಮೆಂಟ್‌ನಲ್ಲಿ ಪರಿಚಿತರು ಯಾರು ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಇಲ್ಲಿಗೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಜಯಲಕ್ಷ್ಮಿ ಮೊಬೈಲ್ ಬಳಸುತ್ತಿರಲಿಲ್ಲ. ಅಪಾರ್ಟ್‌ಮೆಂಟ್ ಬಳಿ ಬಂದಾಗ ಸೆಕ್ಯೂರಿಟಿಗಾರ್ಡ್ ಮೊಬೈಲ್‌ನಿಂದ ತನ್ನ ತಂದೆಗೆ ಕರೆ ಮಾಡಿಸಿದ್ದಾಳೆ. ಈ ವೇಳೆ ಸಂಪರ್ಕ ಸಾಧ್ಯವಾಗಿಲ್ಲ. ಬಳಿಕ ಅಪಾರ್ಟ್‌ಮೆಂಟ್ ಪ್ರವೇಶಿಸಿ 13ನೇ ಮಹಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನಸಿಕ ಖಿನ್ನತೆ?
ವಿಜಯಲಕ್ಷ್ಮಿ ತಂದೆ ಮತ್ತು ತಾಯಿ ಪ್ರತ್ಯೇಕವಾಗಿದ್ದಾರೆ. ವಿಜಯಲಕ್ಷ್ಮಿ ತಾಯಿಗೆ ಜತೆಗೆ ನೆಲೆಸಿದ್ದಳು. ಮನೆ ಮತ್ತು ಕಾಲೇಜಿನಲ್ಲಿ ಹೆಚ್ಚು ಜನರ ಜತೆಗೆ ಬೆರೆಯುತ್ತಿರಲಿಲ್ಲ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸೆ.19ರಂದು ಕಾಲೇಜಿಗೆ ಎಂದು ಮನೆಯಿಂದ ಹೊರಟ ಆಕೆ ಸಂಜೆಯಾದರೂ ಮನೆಗೆ ವಾಪಾಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ತಾಯಿ ಯಯೋಧಾ ಜ್ಞಾನಭಾರತಿ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಒಂದೆಡೆ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಮತ್ತೊಂದೆಡೆ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆಲ ದಿನಗಳಿಂದ ವಿಜಯಲಕ್ಷ್ಮಿ ತುಂಬಾ ಮೌನಿಯಾಗಿದ್ದಳು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ಕಾರಣದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.