ಎನ್‌.ಲಕ್ಷ್ಮಣ

ಬೆಂಗಳೂರು(ಸೆ.09): ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಕನ್ನಡ ಚಿತ್ರರಂಗದ ಮಾದಕ ವಸ್ತು ಜಾಲದ ನಂಟಿನ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ತನಿಖೆ ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದ್ದು, ದಂಧೆಕೋರರು ಪಂಚತಾರಾ ಹೋಟೆಲ್‌ನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಕಿಂಗ್‌ಪಿನ್‌ ವೀರೇನ್‌ ಖನ್ನಾ ವೇಶ್ಯಾವಾಟಿಕೆ ದಂಧೆಯ ರೂವಾರಿಯಾಗಿದ್ದಾನೆ. ಖನ್ನಾನ ಬಗ್ಗೆ ವಿಚಾರಣೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆತನ ದಂಧೆಯ ವಿಸ್ತಾರ ಬೆಚ್ಚಿ ಬೀಳಿಸಿದೆ.
ಚಿತ್ರರಂಗ ಹಾಗೂ ಸಿರಿವಂತರಿಗಾಗಿ ಐಷಾರಾಮಿ ಪಾರ್ಟಿ ಆಯೋಜಿಸುತ್ತಿದ್ದ ಪ್ರಕರಣದಲ್ಲಿ ದೆಹಲಿ ಮೂಲದ ವೀರೇನ್‌ ಖನ್ನಾ ಬಂಧಿತನಾಗಿದ್ದಾನೆ. ಆತ ಕಳೆದ ಹದಿನೆಂಟು ವರ್ಷಗಳಿಂದ ಬೆಂಗಳೂರಿನ ಶಾಂತಿನಗರದಲ್ಲಿ ಕುಟುಂಬ ಸಮೇತ ನೆಲೆಸಿದ್ದ. ಆರೋಪಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಡ್ರೈವ್‌ ಇನ್‌ ಥಿಯೇಟರ್‌ ಎಂಬ ಕಾರ್ಯಕ್ರಮದಡಿ ಐಷಾರಾಮಿ ಪೇಜ್‌-ತ್ರೀ ಪಾರ್ಟಿಗಳನ್ನು ಆಯೋಜಿಸುವ ಈವೆಂಟ್‌ ಆಯೋಜಿಸುತ್ತಿದ್ದ. ರೆಸಾರ್ಟ್‌, ಪಂಚತಾರಾ ಹೋಟೆಲ್‌, ಪಬ್‌, ಕ್ಲಬ್‌ ಸೇರಿದಂತೆ ಇತರೆಡೆ ಚಿತ್ರರಂಗದ ಸೆಲೆಬ್ರೆಟಿಗಳು ಹಾಗೂ ಸಿರಿವಂತರಿಗಾಗಿ ಐಷಾರಾಮಿ ಪೇಜ್‌-ತ್ರೀ ಪಾರ್ಟಿ ಆಯೋಜಿಸುತ್ತಿದ್ದ.

ವಿದೇಶಿಗರೇ ಹೆಚ್ಚು ಭಾಗಿ:

ವೀರೇನ್‌ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಯಲ್ಲಿ ರಷ್ಯಾ, ಇರಾನ್‌, ಆಫ್ರಿಕನ್‌ ದೇಶ ಸೇರಿದಂತೆ ವಿದೇಶಿ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಈ ಪೈಕಿ ಉದ್ಯಮಿಗಳು ಪಾಲ್ಗೊಂಡರೆ, ಪಾರ್ಟಿಗೆ ಎಲ್ಲರನ್ನೂ ಸೆಳೆಯುವ ಉದ್ದೇಶಕ್ಕಾಗಿ ಚಿತ್ರರಂಗದ ಸ್ಟಾರ್‌ಗಳನ್ನು ಪಾರ್ಟಿಗೆ ಕರೆಸುತ್ತಿದ್ದ. ಪಾರ್ಟಿಯಲ್ಲಿ ಪಾಲ್ಗೊಳ್ಳುವ ವಿದೇಶಿಗರಿಗೆ ಬೆಂಗಳೂರಿನ ಯುವತಿಯರನ್ನು ಪೂರೈಕೆ ಮಾಡುತ್ತಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕೆ ಬೇಕಾದ ಸಾಕ್ಷ್ಯಗಳು ಕೂಡ ಲಭ್ಯವಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

BMWದಲ್ಲೇ ಬರ್ತೆನೆ, ಸಿಸಿಬಿ ಕಚೇರಿಯಲ್ಲಿ ಹೈಫೈ ಸಂಜನಾ ಹೈಡ್ರಾಮಾ!

ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಪೆಪ್ಪರ್‌ ಸಾಂಬಾ ಸೇರಿದಂತೆ ಆಫ್ರಿಕನ್‌ ಪ್ರಜೆಗಳು ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡವರ ಪೈಕಿ ಕೆಲವರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾರೆ. ಈವೆಂಟ್‌ ಹೆಸರಿನಲ್ಲಿ ವೀರೇನ್‌ ಡ್ರಗ್ಸ್‌ ದಂಧೆ ಜತೆಗೆ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ. ನಟಿ ರಾಗಿಣಿ ಹಾಗೂ ಆಕೆಯ ಸ್ನೇಹಿತ ರವಿಶಂಕರ್‌, ಸಂಜನಾ ಗೆಳೆಯ ರಾಹುಲ್‌ ಹಾಗೂ ಆಫ್ರಿಕನ್‌ ಪ್ರಜೆ ಪೆಪ್ಪರ್‌ ಸಾಂಬಾ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ವಿವರಿಸಿದರು.

ಮೊಬೈಲ್‌ ಪಾಸ್‌ವರ್ಡ್‌ ಹೇಳದ ಖನ್ನಾ

ವೀರೇನ್‌ ಖನ್ನಾ ಮೊಬೈಲ್‌ನಲ್ಲಿ ಹಲವು ಮಹತ್ವದ ಮಾಹಿತಿಗಳು ಇರುವ ಬಗ್ಗೆ ಶಂಕೆ ಇದೆ. ಬಂಧನವಾಗಿ ನಾಲ್ಕೈದು ದಿನವಾದರೂ ಆರೋಪಿ ತನಿಖಾಧಿಕಾರಿಗಳ ಬಳಿ ತನ್ನ ಮೊಬೈಲ್‌ ಪಾಸ್‌ವರ್ಡ್‌ ಬಗ್ಗೆ ಹೇಳುತ್ತಿಲ್ಲ. ಹೀಗಾಗಿ ತನಿಖಾಧಿಕಾರಿಗಳು ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿ, ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಮೊಬೈಲ್‌ನಿಂದ ಇನ್ನೂ ಹಲವು ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ಸಿಸಿಬಿ ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಡ್ರಗ್ಸ್‌ ಪಾರ್ಟಿಯಲ್ಲಿ ಸ್ಟಾರ್‌ಗಳು!

ಬಂಧಿತ ವೀರೇನ್‌ ಖನ್ನಾ ಜತೆ ದೊಡ್ಡ ಸ್ಟಾರ್‌ಗಳು ಸಂಪರ್ಕದಲ್ಲಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಹಲವು ಮಂದಿ ಸ್ಟಾರ್‌ಗಳು ಈತ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಡ್ರಗ್ಸ್‌ ತೆಗೆದುಕೊಂಡಿದ್ದಾರೆಯೇ ಇಲ್ಲವೇ ಎಂಬುದು ತನಿಖೆ ವೇಳೆ ತಿಳಿದು ಬರಲಿದೆ. ಪಾರ್ಟಿ ಹೆಸರಿನಲ್ಲಿ ಈತ ವೇಶ್ಯಾವಾಟಿಕೆ ನಡೆಸುತ್ತಿದ್ದ. ಅಲ್ಲದೆ, ಹೊರ ರಾಜ್ಯಗಳಲ್ಲಿ ಕೂಡ ಆರೋಪಿ ಪಾರ್ಟಿ ಆಯೋಜಿಸಿರುವ ಶಂಕೆ ಇದೆ. ಎಲ್ಲ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

1 ಪಾರ್ಟಿಯಿಂದ 15 ಲಕ್ಷ ಸಂಪಾದನೆ

ಪಂಚತಾರಾ ಹೋಟೆಲ್‌ ಸೇರಿದಂತೆ ಹಲವೆಡೆ ದಂಧೆ ನಡೆಸುತ್ತಿದ್ದ ಆರೋಪಿ ಒಂದು ಪಾರ್ಟಿಯಿಂದ ಹತ್ತರಿಂದ ಹದಿನೈದು ಲಕ್ಷ ಹಣವನ್ನು ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ. ತಲಾ ಒಬ್ಬರಿಗೆ 10 ಸಾವಿರದಿಂದ ಲಕ್ಷದವರೆಗೆ ಹಣ ವಸೂಲಿ ಮಾಡುತ್ತಿದ್ದ. ಇಲ್ಲಿಯತನಕ ಆರೋಪಿ ಸಾವಿರಾರು ಪೇಜ್‌-ತ್ರೀ ಪಾರ್ಟಿಗಳನ್ನು ಆಯೋಜಿಸಿದ್ದಾನೆ. ಮದ್ಯ, ಡ್ರಗ್ಸ್‌ ಹಾಗೂ ವೇಶ್ಯಾವಾಟಿಕೆ ನಡೆಯುತ್ತಿದ್ದುದರಿಂದ ಹಲವರು ಪಾಲ್ಗೊಳ್ಳುತ್ತಿದ್ದರು. ಡ್ರಗ್ಸ್‌ ತನಿಖೆ ನಡೆಸಿದಾಗ ವೇಶ್ಯಾವಾಟಿಕೆ ದಂಧೆ ಕೂಡ ಬಯಲಿದೆ ಬಂದಿದೆ.

ವೀರೇನ್‌ ಖನ್ನಾ ಯಾರು?

ದೆಹಲಿ ಮೂಲದ ವೀರೇನ್‌ ಖನ್ನಾ ಎಂಜಿನಿಯರಿಂಗ್‌ ಪದವೀಧರನಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಉದ್ಯೋಗ ತೊರೆದು ದಂಧೆಯಲ್ಲಿ ತೊಡಗಿದ್ದ. ಬಂಧಿತ ನಟಿ ರಾಗಿಣಿಯ ಗೆಳೆಯ ರವಿಶಂಕರ್‌ ಹಾಗೂ ಸಂಜನಾ ಗೆಳೆಯ ರಾಹುಲ್‌, ವೀರೇನ್‌ ಖನ್ನಾ ಬಗ್ಗೆ ಬಾಯ್ಬಿಟ್ಟಿದ್ದರು. ಬಳಿಕ ಸಿಸಿಬಿ ಪೊಲೀಸರು ಆರೋಪಿಯನ್ನು ದೆಹಲಿಯಿಂದ ಬಂಧಿಸಿ ನಗರಕ್ಕೆ ಕರೆ ತಂದಿದ್ದರು.