ಬೆಂಗಳೂರು: ವಿಮಾನದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಪಿಆರ್‌ಓ ಸೆರೆ
ವಿಮಾನ ಪ್ರಯಾಣದ ವೇಳೆ ಆರೋಪಿಯು ಬಾಲಕಿಗೆ ತಿಂಡಿ-ನೀರು ಕೇಳುವ ನೆಪದಲ್ಲಿ ಆಕೆಯ ಖಾಸಗಿ ಅಂಗಾಂಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ತಿಂಡಿ-ನೀರು ಏನು ಬೇಡ ಎಂದು ಬಾಲಕಿ ತಾಯಿ ಆರೋಪಿಗೆ ಸ್ಪಷ್ಟವಾಗಿ ಹೇಳಿದರೂ ಆತ ಪದೇ ಪದೇ ತಿಂಡಿ-ನೀರು ಕೇಳುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ.
ಬೆಂಗಳೂರು(ಜು.01): ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು(ಪಿಆರ್‌ಓ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಶಿವ ಗಂಗೆಯ ಕಡಂಗಿಪಟ್ಟಿ ನಿವಾಸಿ ಅಮವಾಸಿ ಮುರುಗೇಶನ್(51) ಬಂಧಿತ. ಜೂ.28ರಂದು ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪೋಷಕರೊಂದಿಗೆ 13 ಬಾಲಕಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಬಾಲಕಿಯ ಪಕ್ಕದ ಆಸನದಲ್ಲಿ ಆರೋಪಿ ಮುರುಗೇಶನ್ ಕುಳಿತ್ತಿದ್ದ. ವಿಮಾನ ಪ್ರಯಾಣದ ವೇಳೆ ಆರೋಪಿಯು ಬಾಲಕಿಗೆ ತಿಂಡಿ-ನೀರು ಕೇಳುವ ನೆಪದಲ್ಲಿ ಆಕೆಯ ಖಾಸಗಿ ಅಂಗಾಂಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ತಿಂಡಿ-ನೀರು ಏನು ಬೇಡ ಎಂದು ಬಾಲಕಿ ತಾಯಿ ಆರೋಪಿಗೆ ಸ್ಪಷ್ಟವಾಗಿ ಹೇಳಿದರೂ ಆತ ಪದೇ ಪದೇ ತಿಂಡಿ-ನೀರು ಕೇಳುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾನೆ.
ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ ಶರಣು
ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಆರೋಪಿ ವರ್ತನೆ ಬಗ್ಗೆ ಬಾಲಕಿಯ ಪೋಷಕರು, ವಿಮಾನದ ಸಿಬ್ಬಂದಿ ಗಮಕ್ಕೆ ತಂದಿದ್ದಾರೆ. ನಂತರ ಸಿಬ್ಬಂದಿಯ ಸಲಹೆ ಮೇರೆಗೆ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿ ಮುರುಗೇಶನ್‌ನನ್ನು ಬಂಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಠಾಣೆಯ ಪೊಲೀಸರು, ಆರೊಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.