ಪ್ರವಾಸದ ನೆಪದಲ್ಲಿ ನಂಬಿಸಿ 15 ವರ್ಷದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಖಾಸಗಿ ಸುದ್ದಿವಾಹಿನಿ ಕಾರು ಚಾಲಕ ಹಾಗೂ ಆತನ ಸ್ನೇಹಿತನ ಬಂಧನ
ಬೆಂಗಳೂರು(ಸೆ.02): ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಾಲಯಕ್ಕೆ ಪ್ರವಾಸದ ನೆಪದಲ್ಲಿ ನಂಬಿಸಿ 15 ವರ್ಷದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಖಾಸಗಿ ಸುದ್ದಿವಾಹಿನಿ ಕಾರು ಚಾಲಕ ಹಾಗೂ ಆತನ ಸ್ನೇಹಿತನನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುದ್ದಿವಾಹಿನಿ ಚಾಲಕ ಮನೋಜ್ ಹಾಗೂ ಆತನ ಗೆಳೆಯ ಸುರೇಶ್ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ತಮ್ಮ ಪರಿಚಿತ ಬಾಲಕಿಯನ್ನು ಕರೆದುಕೊಂಡು ಹೋಗಿ ಆರೋಪಿಗಳು ಲೈಂಗಿಕವಾಗಿ ಶೋಷಿಸಿದ್ದರು. ಈ ಬಗ್ಗೆ ಸಂತ್ರಸ್ತೆ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7 ವರ್ಷಗಳಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ತಂದೆ ಬಂಧನ
ನಂಬಿಸಿ ದ್ರೋಹ ಮಾಡಿದ ಗೆಳೆಯರು
ವಿಲ್ಸನ್ ಗಾರ್ಡನ್‌ನಲ್ಲಿ ನೆಲೆಸಿದ್ದ ಮಂಡ್ಯ ಜಿಲ್ಲೆಯ ಮನೋಜ್, ಹೊಸದಾಗಿ ಆರಂಭಗೊಂಡಿರುವ ಖಾಸಗಿ ಸುದ್ದಿವಾಹಿನಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನಿಗೆ ಸುರೇಶ್ ಬಹಳ ವರ್ಷಗಳಿಂದ ಸ್ನೇಹಿತ. ಹೀಗಿರುವಾಗ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಮನೋಜ್, ಆ.26 ರಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಾಲಯಕ್ಕೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಈ ಮಾತು ನಂಬಿದ ಆಕೆ, ತನ್ನ ತಂದೆಗೆ ಸ್ನೇಹಿತೆ ಮನೆಗೆ ಪ್ರಾಜೆಕ್ಟ್ ವರ್ಕ್ ಇದೆ ಎಂದು ಹೇಳಿ ಮನೆಯಿಂದ ಹೊರ ಬಂದಿದ್ದಳು.
ನಂತರ ಕನಕಪುರಕ್ಕೆ ತೆರಳದೆ ಬಾಲಕಿಯನ್ನು ಆರೋಪಿಗಳು, ಬನ್ನೇರುಘಟ್ಟ ಕಡೆ ಸುತ್ತಾಡಿಸಿ ಮನೆಯೊಂದಕ್ಕೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಇತ್ತ ಮಗಳು ಸಂಜೆಯಾದರೂ ಮನೆಗೆ ಬಾರದೆ ಹೋದಾಗ ಆತಂಕಗೊಂಡ ಸಂತ್ರಸ್ತೆ ಪೋಷಕರು ಪುತ್ರಿಯ ಗೆಳೆತಿಯರನ್ನು ವಿಚಾರಿಸಿದಾಗಲೂ ಯಾವುದೇ ಮಾಹಿತಿ ಸಿಗಲಿಲ್ಲ. ಇದರಿಂದ ಮತ್ತಷ್ಟುಗಾಬರಿಗೊಂಡ ಅವರು ಕೊನೆಗೆ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ಸಲ್ಲಿಸಿದರು. ಅದರನ್ವಯ ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಗೆಳೆಯರಿಂದ ಲೈಂಗಿಕ ಶೋಷಣೆಗೆ ತುತ್ತಾಗಿದ್ದ ಬಾಲಕಿ, ಮನೆಗೆ ತೆರಳದೆ ಭಯದಿಂದ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಳು. ಎರಡು ದಿನಗಳ ಬಳಿಕ ಬಾಲಕಿಯನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸರು, ಬಳಿಕ ಸಖಿ ಕೇಂದ್ರದಲ್ಲಿ ಆಕೆಯನ್ನು ವಿಚಾರಣೆ ನಡೆಸಿದಾಗ ತನ್ನ ಮೇಲೆ ನಡೆದ ಅಮಾನುಷ ಕೃತ್ಯದ ಬಗ್ಗೆ ಹೇಳಿದ್ದಾಳೆ. ಈ ಹೇಳಿಕೆ ಆಧರಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
