ಕರ್ನಾಟಕದ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ಹೊರ ರಾಜ್ಯಗಳ ಪೊಲೀಸರ ದಾಳಿ ಬೆನ್ನಲ್ಲೇ ಎಚ್ಚೆತ್ತಿರುವ ರಾಜಧಾನಿ ಪೊಲೀಸರು, ಈಗ ನಗರ ವ್ಯಾಪ್ತಿಯ ಕೆಮಿಕಲ್ ಫ್ಯಾಕ್ಟರಿಗಳ ವಹಿವಾಟು ಹಾಗೂ ಥಾಯ್ಲೆಂಡ್ ಪ್ರವಾಸಿಗರ ಮೇಲೆ ಕಣ್ಗಾವಲಿಟ್ಟಿದ್ದಾರೆ.
ಬೆಂಗಳೂರು : ಕರ್ನಾಟಕದ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ಹೊರ ರಾಜ್ಯಗಳ ಪೊಲೀಸರ ದಾಳಿ ಬೆನ್ನಲ್ಲೇ ಎಚ್ಚೆತ್ತಿರುವ ರಾಜಧಾನಿ ಪೊಲೀಸರು, ಈಗ ನಗರ ವ್ಯಾಪ್ತಿಯ ಕೆಮಿಕಲ್ ಫ್ಯಾಕ್ಟರಿಗಳ ವಹಿವಾಟು ಹಾಗೂ ಥಾಯ್ಲೆಂಡ್ ಪ್ರವಾಸಿಗರ ಮೇಲೆ ಕಣ್ಗಾವಲಿಟ್ಟಿದ್ದಾರೆ.
ನಗರದಲ್ಲಿರುವ ರಾಸಾಯನಿಕ(ಕೆಮಿಕಲ್) ತಯಾರಿಕಾ ಕೈಗಾರಿಕೆಗಳು ಮತ್ತು ಹಂಚಿಕೆದಾರರು ಹಾಗೂ ಮಾರಾಟಗಾರರಿಗೆ ಸೇರಿದ ಸ್ಥಳಗಳಲ್ಲಿ ಶೋಧನೆ ನಡೆಸಿ ಅಲ್ಲಿನ ಚಟುವಟಿಕೆಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಎಲ್ಲ ಡಿಸಿಪಿಗಳಿಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುತ್ತೋಲೆ ಹೊರಡಿಸಿದ್ದಾರೆ. ಅದೇ ರೀತಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಹೈಡ್ರೋ ಗಾಂಜಾ ಸಾಗಣೆ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಪ್ರವಾಸಿಗರ ಮೇಲೆ ಸಿಸಿಬಿ ಪೊಲೀಸರು ನಿಗಾ ವಹಿಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಪೀಠೋಪಕರಣ ತಯಾರಿಕಾ ಕೈಗಾರಿಕೆ ನೆಪದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಉತ್ಪಾದನಾ ಘಟಕದ ಮೇಲೆ ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದರು. ಅದೇ ರೀತಿ ಮೈಸೂರಿನಲ್ಲೂ ಮಹಾರಾಷ್ಟ್ರ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ)ದ ಅಧಿಕಾರಿಗಳು ಪ್ರತ್ಯೇಕವಾಗಿ ದಾಳಿ ನಡೆಸಿ ಎರಡು ಡ್ರಗ್ಸ್ ಫ್ಯಾಕ್ಟರಿಗಳನ್ನು ಪತ್ತೆ ಹಚ್ಚಿದ್ದರು.
ರಾಜ್ಯದಲ್ಲಿ ಡ್ರಗ್ಸ್ ಫ್ಯಾಕ್ಟರಿಗಳ ಪತ್ತೆಯಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ದಾಳಿಗಳನ್ನು ಮುಂದಿಟ್ಟುಕೊಂಡು ರಾಜ್ಯವನ್ನು ‘ಉಡ್ತಾ ಕರ್ನಾಟಕ’ ಮಾಡಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಈ ಬೆಳವಣಿಗೆಯಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತರು, ಈಗ ಕೆಮಿಕಲ್ ಫ್ಯಾಕ್ಟರಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಫ್ಯಾಕ್ಟರಿಗಳಿಗೆ ಖಾಕಿ ಶೋಧನೆ:
ನಗರದಲ್ಲಿ ಸುಮಾರು 1,600 ಕೆಮಿಕಲ್ ಫ್ಯಾಕ್ಟರಿಗಳಿವೆ. ಇವುಗಳಿಗೆ ಆಯಾ ವಿಭಾಗದ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಈ ಶೋಧನೆ ಕಾರ್ಯಾಚರಣೆ ಹೇಗೆ ನಡೆಸಬೇಕು ಎಂದು ಸುತ್ತೋಲೆ ಕಳುಹಿಸಲಾಗಿದೆ. ಅಕ್ರಮ ಚಟುವಟಿಕೆಗಳು ನಡೆದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಥಾಯ್ಲೆಂಡ್ ಪ್ರವಾಸಿಗರ ಮೇಲೆ ಸಿಸಿಬಿ ಕಣ್ಣು
ರಾಜ್ಯದಲ್ಲಿ ಬೇರು ಬಿಟ್ಟಿರುವ ಥಾಯ್ಲೆಂಡ್ ಹೈಡ್ರೋ ಗಾಂಜಾ ದಂಧೆಕೋರರ ಸಂಪರ್ಕ ಜಾಲವನ್ನೂ ಜಾಲಾಡಲು ಸಿಸಿಬಿ ಮುಂದಾಗಿದೆ. ಇತ್ತೀಚೆಗೆ ರಾಜ್ಯಕ್ಕೆ ಕೋಟ್ಯಂತರ ರು. ಮೌಲ್ಯದ ಹೈಡ್ರೋ ಗಾಂಜಾ ಥಾಯ್ಲೆಂಡ್‌ನಿಂದ ಕಳ್ಳ ಸಾಗಣೆ ಆಗುತ್ತಿರುವುದು ಕಸ್ಟಮ್ಸ್ ಹಾಗೂ ಬೆಂಗಳೂರು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಆ ದೇಶಕ್ಕೆ ಉಚಿತವಾಗಿ ಪ್ರವಾಸ ಕಳುಹಿಸಿ ಡ್ರಗ್ಸ್ ಸಾಗಿಸಿದ್ದ ಎರಡು ತಂಡಗಳನ್ನು ಪ್ರತ್ಯೇಕವಾಗಿ ಮಹಾಲಕ್ಷ್ಮೀ ಲೇಔಟ್ ಹಾಗೂ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.
ಅದೇ ರೀತಿ ಬ್ಯಾಂಕಾಕ್‌ನಿಂದ ಅಕ್ರಮವಾಗಿ ಅಂಚೆ ಮೂಲಕ ಬಂದಿದ್ದ ಕೋಟ್ಯಂತರ ರು. ಮೌಲ್ಯದ ಹೈಡ್ರೋ ಗಾಂಜಾವನ್ನು ಚಾಮರಾಜಪೇಟೆಯ ಅಂತಾರಾಷ್ಟ್ರೀಯ ಅಂಚೆ ಕಚೇರಿಯಲ್ಲಿ ಡಿಸಿಪಿ ರಾಜಾ ಇಮಾಮ್ ಕಾಸಿಂ ನೇತೃತ್ವದ ತಂಡ ಜಪ್ತಿ ಮಾಡಿತ್ತು. ಹೀಗಾಗಿ ಡ್ರಗ್ಸ್ ಸಾಗಣೆ ಶಂಕೆ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಪ್ರವಾಸಿಗರ ಮೇಲೆ ಸಿಸಿಬಿ ನಿಗಾ ಇಟ್ಟಿದೆ. ಬ್ಯಾಂಕಾಕ್‌ಗೆ ನಿರಂತರವಾಗಿ ಪ್ರವಾಸಕ್ಕೆ ಹೋಗುವವರು ಯಾರು? ಒಂದು ದಿನದ ಮಟ್ಟಿಗೆ ಆ ದೇಶಕ್ಕೆ ಹೋಗಿ ಬರುವವರು ಯಾರು? ಆ ಪ್ರವಾಸಿಗರ ಪೂರ್ವಾಪರ? ಹೀಗೆ ಪ್ರತಿಯೊಂದು ಮಾಹಿತಿಯನ್ನೂ ಸಿಸಿಬಿ ಡಿಸಿಪಿ ಕಾಸಿಂ ನೇತೃತ್ವದ ತಂಡ ಸಂಗ್ರಹಿಸುತ್ತಿದೆ ಎಂದು ಮೂಲಗಳು ಹೇಳಿವೆ.
ಫ್ಯಾಕ್ಟರಿಯಲ್ಲಿ ಉತ್ಪಾದನೆ, ಮಾರಾಟ, ಕೆಲಸಗಾರರು, ಹಣಕಾಸು, ಕಚ್ಚಾವಸ್ತುಗಳ ವಿವರ ಹಾಗೂ ಹಂಚಿಕೆದಾರರು ಸೇರಿ ಪ್ರತಿಯೊಂದರ ಮಾಹಿತಿಯನ್ನೂ ಪಡೆಯಲಾಗುತ್ತದೆ. ಅದೇ ರೀತಿ ಕೆಮಿಕಲ್ಸ್ ಮಾರಾಟಗಾರರಿಂದಲೂ ಆರ್ಥಿಕ ವಹಿವಾಟಿನ ಬಗ್ಗೆ ವಿವರ ಪಡೆಯಲಾಗುತ್ತದೆ. ಈ ತಪಾಸಣೆಗೆ ಡ್ರಗ್ಸ್ ಕಂಟ್ರೋಲರ್ ಸೇರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಗಳ ಸಭೆ
ಡ್ರಗ್ಸ್ ಉತ್ಪಾದನೆ ಆರೋಪ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಕೆಮಿಕಲ್ ಉತ್ಪಾದನೆ ಕಾರ್ಖಾನೆಗಳ ಮಾಲೀಕರು ಹಾಗೂ ಹಂಚಿಕೆದಾರರ ಜತೆ ಸಭೆ ನಡೆಸಿ ಸಿಸಿಬಿ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರದ ಪರವಾನಗಿ ದುರುಪಯೋಗಪಡಿಸಿಕೊಂಡು ಕಾನೂನು ಬಾಹಿರವಾಗಿ ಡ್ರಗ್ಸ್ ಉತ್ಪಾದನೆಯಲ್ಲಿ ತೊಡಗಿದರೆ ಅಥವಾ ಸಹಕರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಡಿಸಿಪಿ ಕಾಸಿಂ ತಾಕೀತು ಮಾಡಿದ್ದಾರೆ.


