ಬೆಂಗಳೂರು(ಸೆ.04): ಲಕ್ಷಾಂತರ ರುಪಾಯಿ ಇದ್ದ ಹಣದ ಬ್ಯಾಗ್‌ ಇಟ್ಟುಕೊಂಡು ಕಾರಿನಲ್ಲಿ ಓಡಾಡುತ್ತಿದ್ದ ಆಂಧ್ರಪ್ರದೇಶದ ಮೂವರನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಡಪ ಮೂಲದ ದಸ್ತಗೀರ್‌ (41), ಕಿರಣ್‌ ಕುಮಾರ್‌ (30) ಹಾಗೂ ಮಸ್ತಾನ್‌ (30) ಬಂಧಿತರು. ಆರೋಪಿಗಳಿಂದ 65 ಲಕ್ಷ ನಗದು ಹಾಗೂ ಕಾರು ಜಪ್ತಿ ಮಾಡಲಾಗಿದೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.

ಆರೋಪಿಗಳು ಬುಧವಾರ ತಡರಾತ್ರಿ ಆರ್‌.ಟಿ.ಸ್ಟ್ರೀಟ್‌ ರಂಗಸ್ವಾಮಿ ದೇವಸ್ಥಾನದ ಸಮೀಪ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ರಾತ್ರಿ ಪಾಳಿ ಗಸ್ತಿನಲ್ಲಿದ್ದ ಸಿ.ಟಿ.ಮಾರ್ಕೆಟ್‌ ಕಾನ್ಸ್‌ಟೇಬಲ್‌ ಆರೋಪಿಗಳನ್ನು ಪ್ರಶ್ನಿಸಿದ್ದರು. ಈ ವೇಳೆ ಆರೋಪಿಗಳ ಅನುಮಾನ ಬರುವ ಹಾಗೇ ಪ್ರತಿಕ್ರಿಯಿಸಿದ್ದಾರೆ.

ಕೋಲಾರ: ಕಾರಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 2.94 ಕೋಟಿ ವಶ

ಕಾನ್ಸ್‌ಟೇಬಲ್‌ ಕೂಡಲೇ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ವೊಬ್ಬರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಬಳಿಕ ಕಾರು ಪರಿಶೀಲನೆ ನಡೆಸಿದಾಗ 500 ಮುಖ ಬೆಲೆಯ 65 ಲಕ್ಷ ನಗದು ಪತ್ತೆಯಾಗಿದೆ. ಈ ಬಗ್ಗೆ ಆರೋಪಿಗಳನ್ನು ಪೊಲೀಸರು, ಪ್ರಶ್ನೆ ಮಾಡಿದಾಗ ಆಂಧ್ರಪ್ರದೇಶದಲ್ಲಿ ಜ್ಯೂವೆಲ್ಲರಿ ಮಳಿಗೆ ಹೊಂದಿದ್ದು, ನಗರದಲ್ಲಿ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಎಂಬ ಕಾರಣಕ್ಕೆ ಖರೀದಿಸಲು ಬಂದಿದ್ದೇವೆ ಎಂದಿದ್ದರು. ಆರೋಪಿಗಳಿಗೆ ಸರಿಯಾಗಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬುದೇ ಗೊತ್ತಿಲ್ಲ. ಹೀಗಾಗಿ ಅಕ್ರಮ ಹಣ ಎಂಬ ಹಿನ್ನೆಲೆಯಲ್ಲಿ ಬಂಧಿಸಿ, ಜಪ್ತಿ ಮಾಡಲಾಗಿದೆ. ಅಲ್ಲದೆ, ದಾಖಲೆ ಇಲ್ಲದ ಹಣದ ಕುರಿತು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಅವರ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವುದಾದರೂ ಅಪರಾಧ ಪ್ರಕರಣಗಳು ಇವೆಯೇ ಎಂಬ ಬಗ್ಗೆ ಆಂಧ್ರಪ್ರದೇಶದ ಪೊಲೀಸರಿಂದ ಮಾಹಿತಿ ಕೇಳಲಾಗಿದೆ ಎಂದು ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ತಿಳಿಸಿದರು.

ಮಂಡ್ಯ; ಪೋಲಿ ಪೊಲೀಸ್ ಎರಡು ಮಕ್ಕಳ ತಾಯಿ ಪಟಾಯಿಸಿ ಪರಾರಿ!

"