Asianet Suvarna News Asianet Suvarna News

ಮುರುಘಾಶ್ರೀ ಕೇಸ್‌: ಪೊಲೀಸ್‌ ಎದುರು ಮಕ್ಕಳ ಹೇಳಿಕೆ ದಾಖಲು

ಮಕ್ಕಳ ಹಕ್ಕು ರಕ್ಷಣಾ ಸಮಿತಿ ಸದಸ್ಯರ ಸಮ್ಮುಖ ಪೊಲೀಸರಿಂದ ಬಾಲಕಿಯರ ವಿಚಾರಣೆ, ಮಠದ ಆಡಳಿತಾಧಿಕಾರಿ ಬಸವರಾಜನ್‌ ವಿರುದ್ಧದ ಅತ್ಯಾಚಾರ ಯತ್ನ ಕೇಸ್‌ ಕೂಡ ತನಿಖೆ

Police Interrogated the Victim Girls of Chitradurga Murugha Mutt Seer Pocso Case grg
Author
Bengaluru, First Published Aug 29, 2022, 5:30 AM IST

ಚಿತ್ರದುರ್ಗ(ಆ.29):  ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರ ವಿರುದ್ಧ ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು, ಭಾನುವಾರ ಇಡೀ ದಿನ ಸಂತ್ರಸ್ತ ಬಾಲಕಿಯರ ವಿಚಾರಣೆ ನಡೆಸಿದರು. ಈ ವೇಳೆ ಬಾಲಕಿಯರ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು.

ಮುರುಘಾಮಠದ ವಿದ್ಯಾರ್ಥಿ ನಿಲಯದಲ್ಲಿರುವ ತಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ಅಪ್ರಾಪ್ತ ಬಾಲಕಿಯರು ನೀಡಿದ ಹೇಳಿಕೆಯಂತೆ ಮೈಸೂರಿನ ನಜರಬಾದ್‌ ಠಾಣೆಯಲ್ಲಿ ಶುಕ್ರವಾರ ರಾತ್ರಿ ಮುರುಘಾಶರಣರು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಕ್ಕಳು ಚಿತ್ರದುರ್ಗದವರಾಗಿದ್ದರಿಂದ ಪ್ರಕರಣವನ್ನು ಚಿತ್ರದುರ್ಗಕ್ಕೆ ವರ್ಗಾಯಿಸಲಾಗಿತ್ತು. ಜತೆಗೆ ಮಕ್ಕಳನ್ನೂ ಬೆಳಗಿನ ಜಾವ ಮೂರುವರೆ ಸುಮಾರಿಗೆ ಮೈಸೂರಿನಿಂದ ಕರೆ ತಂದು ಬಾಲ ಮಂದಿರದಲ್ಲಿ ಇರಿಸಲಾಗಿತ್ತು. ಮೈಸೂರಿನಿಂದ ವರ್ಗಾವಣೆಯಾದ ಪ್ರಕರಣ ಚಿತ್ರದುರ್ಗದಲ್ಲಿ ದಾಖಲಾಗುತ್ತಿದ್ದಂತೆ, ಬೆಳಗ್ಗೆ 11ರ ಸುಮಾರಿಗೆ ಚಿತ್ರದುರ್ಗ ಡಿವೈಎಸ್ಪಿ ಅನಿಲ್‌ ಕುಮಾರ್‌ ನೇತೃತ್ವದ ತಂಡ ಬಾಲ ಮಂದಿರಕ್ಕೆ ಆಗಮಿಸಿ ಬಾಲಕಿಯರ ವಿಚಾರಣೆ ಆರಂಭಿಸಿತು. ಬಾಲಕಿಯರು ನೀಡಿದ ಪ್ರತಿ ಹಂತದ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿತು. ಮಹಿಳಾ ಠಾಣೆ ಪಿಎಸ್‌ಐ, ನಾಲ್ಕು ಮಂದಿ ಮಹಿಳಾ ಪೋಲೀಸ್‌ ಪೇದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್‌, ಸಿಡಿಪಿಓ, ಮಕ್ಕಳ ಹಕ್ಕು ರಕ್ಷಣಾ ಸಮಿತಿ ಸದಸ್ಯರು ಹಾಗೂ ಒಡನಾಡಿ ಸಂಸ್ಥೆ ಯವರು ವಿಚಾರಣೆ ವೇಳೆ ಹಾಜರಿದ್ದರು.

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ಶ್ರೀಗಳಿಗೆ ಮಠಾಧೀಶರು, ಮುಖಂಡರಿಂದ ಧೈರ್ಯ

ಬೆಳಗ್ಗೆ 11 ಗಂಟೆಗೆ ಆರಂಭವಾದ ಸಂತ್ರಸ್ತರ ವಿಚಾರಣೆ ಸಂಜೆ ನಾಲ್ಕೂವರೆವರೆಗೂ ನಡೆಯಿತು. ಮುರುಘಾಶರಣರ ಮೇಲಿನ ಫೋಕ್ಸೋ ಕೇಸ್‌ ಹಾಗೂ ವಾರ್ಡನ್‌ ರಶ್ಮಿ ಮುರುಘಾಮಠದ ಆಡಳಿತಾಧಿಕಾರಿ ಬಸವರಾಜನ್‌ ಮೇಲೆ ದಾಖಲಿಸಿರುವ ಅತ್ಯಾಚಾರ ಯತ್ನ ಈ ಎರಡೂ ಕೇಸ್‌ಗಳಿಗೆ ಸಂಬಂಧಿಸಿ ವಿಚಾರಣೆ ನಡೆಯಿತು. ಸಂತ್ರಸ್ತರು ಮೈಸೂರಿನಲ್ಲಿ ನೀಡಿದ ಹೇಳಿಕೆಯನ್ನೇ ಇಲ್ಲೂ ನೀಡಿದರು ಎನ್ನಲಾಗಿದೆ.

ಸಂಜೆ 4.30ರ ನಂತರ ಸಂತ್ರಸ್ತ ಬಾಲಕಿಯರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಡಾ.ಉಮಾ ನೇತೃತ್ವದ ವೈದ್ಯರ ತಂಡ ರಾತ್ರಿ ಏಳರವರೆಗೂ ತಪಾಸಣೆ ನಡೆಸಿತು. ತರುವಾಯ ಸಂತ್ರಸ್ತರನ್ನು ಬಾಲ ಮಂದಿರಕ್ಕೆ ಕರೆದ್ಯೊಯಲಾಯಿತು. ಎಸ್ಪಿ ಪರಶುರಾಂ ಬಾಲ ಮಂದಿರ ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಇಡೀ ಬೆಳವಣಿಗೆಗಳನ್ನು ಪರಿಶೀಲಿಸಿದರು.

ಇಂದು ಬಾಲಕಿಯರು ಕೋರ್ಟ್‌ಗೆ ಹಾಜರ್‌?

ಮುರುಘಾಶರಣರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಸಂತ್ರಸ್ತ ಬಾಲಕಿಯರನ್ನು ಪೊಲೀಸರು ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಅಡಿ ಹೇಳಿಕೆ ಕೊಡಿಸಬೇಕಾಗಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಹೇಳಿಕೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರನ್ನು ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಸ್ಥಳದ ಮಹಜರಿಗಾಗಿ ಅವರನ್ನು ಮುರುಘಾಮಠಕ್ಕೆ ಕರೆದೊಯ್ಯಲಾಗುತ್ತದೆ.

ಸಂಧಾನಕ್ಕೂ ಸಿದ್ಧ ಸಮರಕ್ಕೂ ಸಿದ್ಧ, ಇದು ನನ್ನ ಮೇಲಿನ ಷಡ್ಯಂತ್ರ: ಮುರುಘಾ ಶ್ರೀ

ಶಿಮುಶ-ಬಸವರಾಜನ್‌ ಮಧ್ಯೆ ಠದ ಭಕ್ತರಿಂದ ಸಂಧಾನ ಸಭೆ

ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ ಮುರುಘಾ ಶರಣರ ಮೇಲೆ ಫೋಕ್ಸೋ ಪ್ರಕರಣ ದಾಖಲಾದ ಬೆನ್ನಲ್ಲೇ ಮುರುಘಾಮಠದ ಭಕ್ತರು ಸ್ವಾಮೀಜಿ ಹಾಗೂ ಮಠದ ಆಡಳಿತಾಧಿಕಾರಿ ಬಸವರಾಜನ್‌ ನಡುವೆ ಸಂಧಾನ ಸಭೆಗಳನ್ನು ನಡೆಸಿದ್ದಾರೆ. ಮುರುಘಾಶರಣರು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಹೇಳಿಕೆ ಕೊಟ್ಟನಂತರದ ಬೆಳವಣಿಗೆಯಾಗಿ ಈ ಸಭೆಗಳು ನಡೆದಿವೆ.

ಭಾನುವಾರ ಮುಂಜಾನೆ ಸಿದ್ದಾಪುರ ರಸ್ತೆಯಲ್ಲಿರುವ ತೋಟದ ಮನೆಯೊಂದರಲ್ಲಿ ಸಭೆ ನಡೆಯಿತು ಎಂದು ಹೇಳಲಾಗಿದ್ದು, ಅಲ್ಲಿ ಡಾ.ಶಿಮುಶ ಹಾಗೂ ಬಸವರಾಜನ್‌ ಅವರನ್ನು ಮುಖಾಮುಖಿಯಾಗಿ ಕೂರಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ ಸ್ವಾಮೀಜಿ ಹಾಗೂ ಬಸವರಾಜನ್‌ ನಡುವೆ ಕೆಲ ಹೊತ್ತು ವಾಗ್ವಾದ ನಡೆದಿದೆ. ನಂತರ ಇಬ್ಬರನ್ನೂ ಸಮಾಧಾನ ಪಡಿಸಿದ ಭಕ್ತರು ಪ್ರಕರಣದ ಬಗ್ಗೆ ಮುಂದೆ ನೋಡೋಣ, ಅಲ್ಲಿಯವರೆಗೆ ಇಬ್ಬರೂ ಒಂದಾಗಿ ಸಾಗುವಂತೆ ಮನವಿ ಮಾಡಿದರು ಎನ್ನಲಾಗಿದೆ. ಸರಿ ಸುಮಾರು ಎರಡು ತಾಸುಗಳ ಕಾಲ ಈ ಸಭೆ ನಡೆದಿದ್ದು, ಒಂದಾಗಿ ಹೋಗುವ ಪ್ರಸ್ತಾಪಕ್ಕೆ ಶ್ರೀಗಳು ಹಾಗೂ ಬಸವರಾಜನ್‌ ಒಪ್ಪಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios