Asianet Suvarna News Asianet Suvarna News

ಬೆಂಗಳೂರು: ಯುವಕನ ನಗ್ನಗೊಳಿಸಿ ಹಲ್ಲೆಗೈದವನಿಗೆ ಗುಂಡೇಟು..!

ಗಾಯಗೊಂಡಿರುವ ರೌಡಿ ಪವನ್ ಹಾಗೂ ಕಾಮಾಕ್ಷಿಪಾಳ್ಯ ಠಾಣೆ ಹೆಡ್‌ಕಾನ್ಸ್‌ಟೇಬಲ್ ವೆಂಕಟೇಶ್ ಅವರನ್ನೂ ಚಿಕಿತ್ಸೆಗೆ ವಿಕ್ಟೋರಿಯಾ ಆಸತ್ರೆಗೆ ದಾಖಲಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Police Firing on Who Accused in Crime Case Bengaluru grg
Author
First Published Sep 18, 2024, 12:36 PM IST | Last Updated Sep 18, 2024, 12:36 PM IST

ಬೆಂಗಳೂರು(ಸೆ.18): ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ನಗ್ನಗೊಳಿಸಿ ಹಲ್ಲೆಗೈದು ವಿಡಿಯೋ ಮಾಡಿದ್ದ ಪ್ರಕರಣ ಸಂಬಂಧ ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿದ ರೌಡಿ ಶೀಟರ್ ಕಾಲಿಗೆ ಗೋವಿಂದರಾಜನಗರ ಠಾಣೆ ಇನ್‌ಸೆಕ್ಟರ್ ಕೆ.ಸುಬ್ರ ಮಣಿ ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ರಾಜಗೋಪಾಲನಗರ ಠಾಣೆ ರೌಡಿ ಶೀಟರ್ ಪವನ್ ಗೌಡ ಅಲಿಯಾಸ್ ಕಡುಬು(28) ಗುಂಡೇಟು ತಿಂದವನು.

ಗಾಯಗೊಂಡಿರುವ ರೌಡಿ ಪವನ್ ಹಾಗೂ ಕಾಮಾಕ್ಷಿಪಾಳ್ಯ ಠಾಣೆ ಹೆಡ್‌ಕಾನ್ಸ್‌ಟೇಬಲ್ ವೆಂಕಟೇಶ್ ಅವರನ್ನೂ ಚಿಕಿತ್ಸೆಗೆ ವಿಕ್ಟೋರಿಯಾ ಆಸತ್ರೆಗೆ ದಾಖಲಿಸಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯುವಕನ ಮೇಲೆ ಹಲ್ಲೆ ಮಾಡಿದ್ದ: 

ರೌಡಿ ಪವನ್ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರಘು ಎಂಬಾತನನ್ನು ಹುಡುಕಿಕೊಂಡು ಸೆ.15ರಂದು ರಾತ್ರಿ ಸುಮಾರು 8 ಗಂಟೆಗೆ ಸುಂಕದಕಟ್ಟೆಯ ಶ್ರೀನಿವಾಸನಗರಕ್ಕೆ ಬಂದಿದೆ. ರಘು ಸ್ನೇಹಿತ ವಿಶ್ವಾಸ ಎಂಬಾತನಿಗೆ ರಘು ಎಲ್ಲಿ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಬಳಿಕ ಮಚ್ಚಿನಿಂದ ವಿಶ್ವಾಸ್ ಮೇಲೆ ಹಲ್ಲೆ ಮಾಡಿ, ರಘು ಸಿಕ್ಕರೆ ಹೇಳು. ಆತನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ತೆರಳಿದ್ದ. ಈ ಸಂಬಂಧ ವಿಶ್ವಾಸ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದರು. 

ನಗ್ನಗೊಳಿಸಿ ಹಲ್ಲೆ ಮಾಡಿದ್ದ ರೌಡಿ: 

ಈ ಹಿಂದೆ ಕ್ರಿಕೆಟ್ ಆಡುವ ವಿಚಾರಕ್ಕೆ ರೌಡಿ ಪವನ್, ನಾಗಾರ್ಜುನ್ ಜತೆಗೆ ಗಲಾಟೆಮಾಡಿದ್ದ. ಈ ಮಧ್ಯೆ ಪ್ರಕರಣವೊಂದರ ಸಂಬಂಧ ರೌಡಿ “ಪವನ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ನಾಗಾರ್ಜುನ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ರೌಡಿ ಪವನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಗೆ ಬಂದಿದ್ದ ಪವನ್, ದ್ವೇಷದ ಹಿನ್ನೆಲೆಯಲ್ಲಿ ಜು.4 ರಂದು ನಾಗರ್ಜುನ್‌ನನ್ನು ಅಡ್ಡಗಟ್ಟಿ ನಗ್ನಗೊಳಿಸಿ ಹಲ್ಲೆ ನಡೆಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಬಳಿಕ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದ. ಈ ಸಂಬಂಧ ನಾಗಾರ್ಜುನ್ ದೂರು ನೀಡಿರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ನಾಗಾ ರ್ಜುನ್ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದ.

ಎರಡು ತಂಡ ರಚನೆ:

ನಾಗಾರ್ಜುನ್ ಮೇಲಿನ ಹಲ್ಲೆ ವಿಡಿಯೋ ವೈರಲ್ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿದ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ರೌಡಿ ಪವನ್ ಪತ್ತೆಗೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾ‌ರ್ ನೇತೃತ್ವದಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸೆಕರ್ ಜಿ.ಎನ್.ನಾಗೇಶ್, ಗೋವಿಂದೆ ರಾಜನಗರ ಠಾಣೆ ಇನ್‌ಸ್ಪೆಕ್ಟರ್ ಕೆ.ಸುಬ್ರಮಣಿ, ಪಿಎಸ್‌ಐ ಹಾಗೂ ಸಿಬ್ಬಂದಿ ಒಳಗೊಂಡ ಎರಡು ತಂಡಗಳನ್ನು ರಚಿಸಿದರು.

ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆ 

ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ರೌಡಿ ಪವನ್ ಉಲ್ಲಾಳ ಉಪನಗರ ಸಮೀಪದ ಬ್ರಹ್ಮದೇವರ ಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಇರುವ ಸುಳಿವು ಸಿಕ್ಕಿದೆ. ಈ ಸುಳಿವಿನ ಜಾಡು ಹಿಡಿದು ಇನ್‌ಸ್ಪೆಕ್ಟ‌ರ್ ಕೆ. ಸುಬ್ರಮಣಿ ನೇತೃತ್ವದ ಪೊಲೀಸರ ತಂಡ ಮಂಗಳವಾರ ಮುಂಜಾನೆ 5ಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪವನ್ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಕೂಡಲೇ ರೌಡಿ ಪವನ್ ಚಾಕುವಿನಿಂದ ಹೆಡ್ ಕಾನ್‌ಸ್ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಬಲಗಾಲಿಗೆ ಗುಂಡು ಹಾರಿಸಿ ಬಂಧನ: ಈ ವೇಳೆ ಇನ್ ಸ್ಪೆಕ್ಟರ್ ಸುಬ್ರಮಣಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ರೌಡಿ ಪವನ್ ಚಾಕು ಹಿಡಿದು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸುಬ್ರಮಣಿ ತಮ್ಮ ಸರ್ವಿಸ್ ಪಿಸ್ತೂಲ್‌ನಿಂದ ರೌಡಿ ಪವನ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಕುಸಿದು ಬಿದ್ದ ರೌಡಿ ಪವನ್ ಹಾಗೂ ಹಲ್ಲೆಯಿಂದ ಗಾಯಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ವೆಂಕಟೇಶ್ ಅವರನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.

ಆರೋಪಿ ವಿರುದ್ಧ ಇವೆ 12 ಪ್ರಕರಣ

ಆರೋಪಿ ಪವನ್ ನಗರದಲ್ಲಿ ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜಗೋಪಾಲನಗರ ಠಾಣೆ ಪೊಲೀಸರು ರೌಡಿ ಪಟ್ಟಿ ತೆರೆದಿದ್ದರು. ರೌಡಿ ಪವನ್ ವಿರುದ್ಧ ಈ ಹಿಂದೆ ರಾಜಗೋಪಾನಗರ 7, ಕಾಮಾಕ್ಷಿಪಾಳ್ಯ 3, ಜ್ಞಾನಭಾರತಿ 1, ತುಮಕೂರು ಜಿಲ್ಲೆ ಅಮೃತೂರು ಠಾಣೆಯಲ್ಲಿ 1 ಅಪರಾಧ ಪ್ರಕರಣ ದಾಖಲಾಗಿವೆ.

ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯ ಸುಳಿವು ಪತ್ತೆಹಚ್ಚಿ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಆತ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗೆ ಇನ್‌ಸ್ಪೆಕ್ಟರ್ ಸುಬ್ರಮಣಿ ಆರೋಪಿ ಪವನ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios