ಬೆಂಗಳೂರು(ಫೆ.10):  ಇತ್ತೀಚಿಗೆ ತನ್ನ ಎದುರಾಳಿ ಗುಂಪಿನ ರೌಡಿ ಹತ್ಯೆಗೈದು ತಪ್ಪಿಸಿಕೊಂಡಿದ್ದ ಕುಖ್ಯಾತ ಪಾತಕಿಯೊಬ್ಬನಿಗೆ ರಾಜಗೋಪಾನಗರ ಠಾಣೆ ಪೊಲೀಸರು ಗುಂಡು ಹೊಡೆದು ಮಂಗಳವಾರ ಬಂಧಿಸಿದ್ದಾರೆ.

ಜಿಕೆಡಬ್ಲ್ಯೂ ಲೇಔಟ್‌ನ ಸಂತೋಷ್‌ ಅಲಿಯಾಸ್‌ ಇಲಿಕುಟ್ಟಿ(21) ಬಂಧಿತನಾಗಿದ್ದು, ಕಸ್ತೂರಿ ನಗರದಲ್ಲಿ ನಡೆದಿದ್ದ ರೌಡಿ ಶ್ರೀನಿವಾಸ್‌ ಕೊಲೆ ಪ್ರಕರಣದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಜಿಕೆಡಬ್ಲ್ಯೂ ಲೇಔಟ್‌ ಸಮೀಪ ಮಂಗಳವಾರ ಮುಂಜಾನೆ ಆತ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪಿಎಸ್‌ಐ ಹನುಮಂತ ಹಾದಿಮನಿ ತಂಡವು ಆರೋಪಿ ಬಂಧನಕ್ಕೆ ತೆರಳಿದೆ. ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನಿಗೆ ಗುಂಡು ಹೊಡೆಯಲಾಗಿದೆ. ಘಟನೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಸಿದ್ರಾಮ್‌ ಅವರಿಗೆ ಸಹ ಪೆಟ್ಟಾಗಿದೆ. ಗಾಯಾಳು ವಿಕ್ಟೋರಿಯಾ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ತಿಳಿಸಿದ್ದಾರೆ.

ಉತ್ತರ ವಿಭಾಗದಲ್ಲಿ ‘ಇಲಿ’ ಹಾವಳಿ

ಎರಡ್ಮೂರು ವರ್ಷಗಳಿಂದ ಸಂತೋಷ್‌ ಅಲಿಯಾಸ್‌ ಇಲಿಕುಟ್ಟಿರೌಡಿ ಚಟುವಟಿಕೆಗಳಲ್ಲಿ ನಿರತನಾಗಿದ್ದು, ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಬ್ಯಾಡರಹಳ್ಳಿ ಮತ್ತು ರಾಜಗೋಪಾಲ ನಗರ ಠಾಣೆಯಲ್ಲಿ 10 ಪ್ರಕರಣಗಳು ದಾಖಲಾಗಿವೆ.

ಸಿನಿಮಿಯ ಸ್ಟೈಲ್‌: ಗುಂಡು ಹಾರಿಸಿ ದರೋಡೆಗೆ ಯತ್ನ

ಕಸ್ತೂರಿನಗರದಲ್ಲಿ ಜ.9ರಂದು ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶ್ರೀನಿವಾಸ್‌ ಅಲಿಯಾಸ್‌ ಕರಿ ಸೀನನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್‌ ಹಾಗೂ ಆತನ ಸಹಚರರು ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿದ ರಾಜಗೋಪಾಲನಗರ ಪೊಲೀಸರು, ಸಂತೋಷ್‌ ಸಹಚರರನ್ನು ಬಂಧಿಸಿದ್ದರು. ಆದರೆ ಕೃತ್ಯ ಎಸಗಿದ ಬಳಿಕ ಅಜ್ಞಾತವಾಗಿದ್ದ ಸಂತೋಷ್‌ ಪತ್ತೆಗೆ ಪೊಲೀಸರು ಶೋಧನೆ ಮುಂದುವರೆಸಿದ್ದರು.

ಜಿಕೆಡಬ್ಲ್ಯೂ ಲೇಔಟ್‌ನಲ್ಲಿ ಮಂಗಳವಾರ ಮುಂಜಾನೆ 5.30ರ ಸುಮಾರಿಗೆ ಸಂತೋಷ್‌ ಇರುವಿಕೆಗೆ ಬಗ್ಗೆ ಸಬ್‌ ಇನ್ಸ್‌ಪೆಕ್ಟರ್‌ ಹನುಮಂತ ಹಾದಿಮನಿ ಅವರಿಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಪಿಎಸ್‌ಐ, ತಮ್ಮ ಸಿಬ್ಬಂದಿ ಜತೆ ಆರೋಪಿ ಬಂಧನಕ್ಕೆ ತೆರಳಿದ್ದಾರೆ. ಆಗ ಪೊಲೀಸರ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಸಂತೋಷ್‌ ಯತ್ನಿಸಿದ್ದಾನೆ. ಈ ಹಂತದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಸಿದ್ರಾಮ್‌ಗೆ ಪೆಟ್ಟಾಗಿದೆ. ತಕ್ಷಣವೇ ಎಚ್ಚೆತ್ತ ಪಿಎಸ್‌ಐ, ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.