ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ: ಸುಲಿಗೆಕೋರನ ಮೇಲೆ ಗುಂಡಿನ ದಾಳಿ
ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ಪೊಲೀಸರ ಕಾರ್ಯಾಚರಣೆ| ಬಂಧಿಸಲು ಹೋದಾಗ ಹಲ್ಲೆ ಯತ್ನ| ಘಟನೆಯಲ್ಲಿ ಕಾನ್‌ಸ್ಟೇಬಲ್‌ಗೆ ಗಾಯ| ಈ ಸಂಬಂಧ ಆರೋಪಿ ಬಂಧನ|
ಬೆಂಗಳೂರು(ಡಿ. 02): ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ದರೋಡೆಕೋರನೊಬ್ಬನ ಬಲಗಾಲಿಗೆ ನಂದಿನಿ ಲೇಔಟ್ ಠಾಣೆ ಪೊಲೀಸರು ಗುಂಡು ಹೊಡೆದು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ.
ಜೈ ಮಾರುತಿ ನಗರದ ನಿವಾಸಿ ಅನೂಬ್ ಅಲಿಯಾಸ್ ಅಲ್ಲಾಬಕ್ಷಾ ಗುಂಡೇಟು ತಿಂದ ಆರೋಪಿ. ಕೆಲ ದಿನಗಳ ಲಗ್ಗೆರೆ ವರ್ತುಲ ರಸ್ತೆಯ ಕೆಂಪೇಗೌಡ ದ್ವಾರ ಗೋಪುರದ ಬಳಿ ಲಾರಿ ಚಾಲಕನಿಗೆ ಚಾಕುವಿನಿಂದ ಇರಿದು ದರೋಡೆ ನಡೆಸಿದ ಕೃತ್ಯ ಸಂಬಂಧ ಕೂಲಿನಗರ ಬಳಿ ಅನೂಬ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆ ವೇಳೆ ತನಿಖಾ ತಂಡದ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಕಾನ್‌ಸ್ಟೇಬಲ್ ಅಭಿಷೇಕ್ ಅವರಿಗೆ ಸಹ ಗಾಯವಾಗಿದೆ. ಈ ಪ್ರಕರಣ ಸಂಬಂಧ ಅನೂಬ್ ಸಹಚರ ಅನ್ವರ್‌ನನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಅಬ್ಲೂ ಎಂಬಾತನ ಪತ್ತೆಗೆ ತನಿಖೆ ನಡೆದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಒಂದೂವರೆ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ:
ಅನೂಬ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ನಂದಿನಿ ಲೇಔಟ್, ಸುಬ್ರಹ್ಮಣ್ಯನಗರ, ಯಶವಂತಪುರ ಹಾಗೂ ಮಾಗಡಿ ರಸ್ತೆ ಸೇರಿದಂತೆ ಇತರೆ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ. ಒಂದೂವರೆ ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದು ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ನ.22 ರಂದು ಕುರುಬರಹಳ್ಳಿ ಬಳಿ ಮೊಬೈಲ್ ದರೋಡೆ, ನ.23.ರಂದು ಸಂಜಯಗಾಂಧಿ ನಗರದ ಬಳಿ ಕಾರು ಚಾಲಕನ ಅಡ್ಡಗಟ್ಟಿ.5 ಸಾವಿರ ಸುಲಿಗೆ, ನ.25ರಂದು ಆರ್‌ಎಂಸಿ ಯಾರ್ಡ್ ಬಳಿ ದರೋಡೆ ಯತ್ನ, ನವರಂಗ್ ಚಿತ್ರಮಂದಿರದ ಬಳಿ ದರೋಡೆ ಹೀಗೆ ಸರಣಿ ದುಷ್ಕೃತ್ಯಗಳ ಮೂಲಕ ಅನೂಬ್ ಹಾಗೂ ಆತನ ಸಹಚರರು ಆತಂಕ ಸೃಷ್ಟಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಸಂಭ್ರಮಾಚರಣೆ ವೇಳೆ ಸಿಡಿದ ಗುಂಡು ಯುವಕನ ಪ್ರಾಣ ಹೊತ್ತೊಯ್ತು!
ರಾತ್ರಿ ವೇಳೆ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಅನೂಬ್ ಹಾಗೂ ಆತನ ಇಬ್ಬರು ಸಹಚರರು, ಎದುರಾದವರಿಗೆ ಚಾಕುವಿನಿಂದ ಇರಿದು ಅಥವಾ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಹಣ, ಚಿನ್ನಾಭರಣ ಹಾಗೂ ಮೊಬೈಲ್ ದೋಚುತ್ತಿದ್ದರು. ಅಂತೆಯೇ ನ.25ರಂದು ಲಗ್ಗೆರೆ ಹತ್ತಿರ ಲಾರಿ ಚಾಲಕನಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು 30 ಸಾವಿರ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಕೃತ್ಯದಲ್ಲಿ ಅನೂಬ್ ತಂಡದ ಪಾತ್ರ ಕಂಡು ಬಂದಿತು. ಈ ಸುಳಿವು ಆಧರಿಸಿ ಆತನ ಶಿಷ್ಯ ಅನ್ವರ್‌ನನ್ನು ಬಂಧಿಸಿದ ಪೊಲೀಸರು, ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಅನೂಬ್ ಅಡ್ಡಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆಗ ಕೂಲಿನಗರದ ಸಮೀಪ ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಆತನ ಇರುವಿಕೆಗೆ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್‌ಐ ಶಿವ ಜೋಗಣ್ಣನವರ್ ತಂಡ ಆರೋಪಿಯನ್ನು ಬಂಧಿಸಲು ತೆರಳಿದಾಗ ಈ ಶೂಟೌಟ್ ನಡೆದಿದೆ.
ಆಗ ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಹಂತದಲ್ಲಿ ಕಾನ್‌ಸ್ಟೇಬಲ್ ಅಭಿಷೇಕ್ ಅವರಿಗೆ ಪೆಟ್ಟಾಗಿದೆ. ಕೂಡಲೇ ಎಚ್ಚೆತ್ತ ಪಿಎಸ್‌ಐ, ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದರು. ಈ ಮಾತು ಕೇಳದೆ ಹೋದಾಗ ಆರೋಪಿಗೆ ಬಲಗಾಲಿಗೆ ಪಿಎಸ್‌ಐ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.