ಬೆಂಗಳೂರು(ಸೆ.27): ಇತ್ತೀಚಿಗೆ ಎಂ.ಇ.ಎಸ್‌.ರಸ್ತೆಯ ಬಾಹುಬಲಿ ನಗರದ ಬಳಿ ಚಿನ್ನಾಭರಣ ಮಳಿಗೆ ನೌಕರನಿಗೆ ಏರ್‌ಗನ್‌ ತೋರಿಸಿ ಜೀವ ಬೆದರಿಕೆ ಹಾಕಿ ಸುಮಾರು 1.7 ಕೆ.ಜಿ ಬಂಗಾರ ದೋಚಿದ್ದ ಮೂವರು ಫುಡ್‌ ಡಿಲಿವರಿ ಬಾಯ್‌ಗಳು ಜಾಲಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೆ.ಪಿ.ಅಗ್ರಹಾರದ ಗೋಪಾರಾಮ್‌ ಅಲಿಯಾಸ್‌ ಗೋಪಾಲ್‌, ವಿ.ನಾರಾಯಣಪುರದ ಜಿತೇಂದರ್‌ ಮಾಳಿ ಅಲಿಯಾಸ್‌ ಜೀತು ಹಾಗೂ ವೀರ್‌ ಮಾ ರಾಮ್‌ ಬಂಧಿತರಾಗಿದ್ದು, ಆರೋಪಿಗಳಿಂದ 90 ಲಕ್ಷ ಮೌಲ್ಯದ 1 ಕೆ.ಜಿ.757 ಗ್ರಾಂ ಚಿನ್ನಾಭರಣ ಹಾಗೂ 3.5 ಲಕ್ಷ ನಗದು, ಎರಡು ಬೈಕ್‌ಗಳು, ಏರ್‌ಗನ್‌ ವಶಪಡಿಸಿಕೊಳ್ಳಲಾಗಿದೆ. ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಬೆರಳಚ್ಚು ಆಧರಿಸಿ ಆರೋಪಿಗಳನ್ನು ಸೆರೆಹಿಡಿದಿದೆ.

ರಾಜಸ್ಥಾನ ಮೂಲದ ವಿನೋದ್‌ ಅವರು, ಜಾಲಹಳ್ಳಿಯ ಬಾಹುಬಲಿ ನಗರದಲ್ಲಿ ಚಿನ್ನಾಭರಣ ಮಳಿಗೆ ನಡೆಸುತ್ತಿದ್ದಾರೆ. ಇದರಲ್ಲಿ ಅವರ ಸಂಬಂಧಿ ರಾಹುಲ್‌ ಕೆಲಸದಲ್ಲಿದ್ದಾರೆ. ಆ.20ರಂದು ವಿನೋದ್‌ ಅಂಗಡಿಗೆ ಚಿನ್ನದ ಸರ ಖರೀದಿ ನೆಪದಲ್ಲಿ ಬಂದ ಆರೋಪಿಗಳು, ಸರಕ್ಕೆ ಅರ್ಡರ್‌ ಕೊಟ್ಟು ಮುಂಗಡವಾಗಿ 1 ಸಾವಿರ ಹಣ ಕೊಟ್ಟು ತೆರಳಿದ್ದರು. ತಿಂಗಳ ನಂತರ ಸೆ.20ರಂದು ಬೆಳಗ್ಗೆ 10ಕ್ಕೆ ಅಂಗಡಿಗೆ ತೆರಳಿದ ಗೋಪಾಲ್‌ ಹಾಗೂ ಜೀತು, ತಾವು ಅರ್ಡರ್‌ ಕೊಟ್ಟಿದ್ದ ‘ಚಿನ್ನದ ಸರ’ವನ್ನು ನೀಡುವಂತೆ ರಾಹುಲ್‌ಗೆ ಬಿಲ್‌ ನೀಡಿದ್ದರು. ಆಗ ಸರ ತರಲು ಲಾಕರ್‌ ಕೊಠಡಿಗೆ ಹೋಗುತ್ತಿದ್ದಂತೆ ಹಿಂಬಾಲಿಸಿದ ಆರೋಪಿಗಳು, ರಾಹುಲ್‌ಗೆ ಏರ್‌ಗನ್‌ ತೋರಿಸಿ ಜೀವ ಬೆದರಿಕೆ ಹಾಕಿದರು. ಬಳಿಕ ಆತನಿಗೆ ಬಾಯಿ ಹಾಗೂ ಕೈ ಕಾಲುಗಳಿಗೆ ಟೇಪ್‌ ಸುತ್ತಿದ್ದಾರೆ. ನಂತರ ಲಾಕರ್‌ನಲ್ಲಿದ್ದ 1.49 ಕೋಟಿ ಮೌಲ್ಯದ 3 ಕೆ.ಜಿ. 455 ಗ್ರಾಂ ಚಿನ್ನಾಭರಣ, 715 ಗ್ರಾಂ ಬೆಳ್ಳಿ ವಸ್ತು ಹಾಗೂ 3.96 ಲಕ್ಷ ನಗದು ದೋಚಿ ಬ್ಯಾಗ್‌ನಲ್ಲಿ ತುಂಬಿಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಠಾಣೆಗೆ ಬಂದವರು ಪೊಲೀಸರ ಬೈಕ್‌ ಅನ್ನೇ ಕದ್ದೊಯ್ದರು!

ಸ್ಥಳದಲ್ಲಿ ದೊರೆತ ಬೆರಳಚ್ಚನ್ನು ತಾಳೆ ಮಾಡಿದಾಗ ಸಿಸಿಟಿವಿ ದೃಶ್ಯಾವಳಿಯಲ್ಲಿನ ಫೋಟೋಗಳ ಶಂಕಿತ ಕಳ್ಳನೊಬ್ಬನ ಮುದ್ರೆಗೆ ಹೋಲಿಕೆಯಾಯಿತು. 2016ನೇ ಸಾಲಿನಲ್ಲಿ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜ್ಯೂವೆಲರಿ ಶಾಪ್‌ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಗೋಪಾಲ್‌ ಪಾತ್ರ ಪತ್ತೆಯಾಯಿತು. ರಾಜಸ್ಥಾನಕ್ಕೆ ತೆರಳಲು ಸಿದ್ದರಾಗಿದ್ದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಹೇಳಿದ್ದಾರೆ.

5 ಲಕ್ಷ ಸಾಲ ತೀರಿಸಲು ಕೃತ್ಯ

ರಾಜಸ್ಥಾನ ಮೂಲದ ಗೋಪಾಲರಾಮ್‌, 2004ರಲ್ಲಿ ಯಲಹಂಕದಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದ. ಅನಂತರ 2014ರಲ್ಲಿ ಬಾಗಲೂರಿನ ರಾಜಲಕ್ಷ್ಮಿ ಜ್ಯುವೆಲರಿ ಅಂಗಡಿಯಲ್ಲಿ ನೌಕರ ಆರಂಭಿಸಿದ ಆತ, ಅದೇ ಮಳಿಗೆಯಲ್ಲಿ ಚಿನ್ನಾಭರಣ ದೋಚಿ ಜೈಲು ಪಾಲಾಗಿದ್ದ. ಜಾಮೀನು ಪಡೆದು ರಾಜಸ್ಥಾನಕ್ಕೆ ಮರಳಿದ. 2017ರಲ್ಲಿ ಮತ್ತೆ ನಗರಕ್ಕೆ ಮರಳಿದ ಆತ, ಫುಡ್‌ ಡೆಲಿವರಿ ಬಾಯ್‌ ಆಗಿದ್ದ. ಆತನಿಗೆ ರಾಜಸ್ಥಾನ ಮೂಲದ ಮತ್ತಿಬ್ಬರು ಪುಡ್‌ ಡಿಲಿವರಿ ಹುಡುಗರಾದ ಜಿತೇಂದರ್‌ ಮತ್ತು ವೀರ್‌ಮಾ ರಾಮ್‌ನ ಪರಿಚಯವಾಗಿತ್ತು.

ತನ್ನೂರಿನಲ್ಲಿ ಗೋಪಾಲರಾಮ್‌ 5 ಲಕ್ಷ ಸಾಲ ಮಾಡಿದ್ದ. ಇತ್ತೀಚೆಗೆ ಸಾಲಗಾರರು ಹಣ ಮರಳಿಸುವಂತೆ ಆತನ ಮೇಲೆ ಒತ್ತಡ ಹಾಕುತ್ತಿದ್ದರು. ಹಣದಾಸೆ ತೋರಿಸಿ ಗೆಳೆಯರನ್ನು ಕಳ್ಳತನ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂಗಾರ ಕಂಡು ಗಾಬರಿಗೊಂಡರು:

ಮೂರು ತಿಂಗಳಿಂದ ಫುಡ್‌ ಡೆಲಿವರಿ ಮಾಡುವಾಗ ಹೆಚ್ಚಿನ ನೌಕರರಿಲ್ಲದ ಚಿನ್ನಾಭರಣ ಮಳಿಗೆಗಳನ್ನು ಆರೋಪಿಗಳು ಗಮನಿಸುತ್ತಿದ್ದರು. ಆಗ ಬಾಹುಬಲಿ ನಗರದಲ್ಲಿನ ವಿನೋದ್‌ ಅಂಗಡಿಗೆ ಕಣ್ಣಿಗೆ ಬಿದ್ದಿದೆ. ಚಿನ್ನ ಖರೀದಿ ನೆಪದಲ್ಲಿ ಬಂದು ಆ ಮಳಿಗೆ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದ್ದರು. ನಂತರ ಸೆ.20ರಂದು ಒಬ್ಬನೇ ಕೆಲಸಗಾರ ಇರುವುದು ಖಚಿತಪಡಿಸಿಕೊಂಡು ಕೃತ್ಯ ಎಸಗಿದ್ದಾರೆ.

ಘಟನೆ ನಡೆದ ನೀಡಿದ ದೂರಿನಲ್ಲಿ 3 ಕೆ.ಜಿ. ಆಭರಣ ಕಳವಾಗಿದೆ ಎಂದು ಉಲ್ಲೇಖವಾಗಿತ್ತು. ಬಳಿಕ ಪರಿಶೀಲಿಸಿದಾಗ 1 ಕೆ.ಜಿ.757 ಗ್ರಾಂ ಎಂಬುದು ಗೊತ್ತಾಯಿತು. ಕಳುವಾಗಿದ್ದ ಎಲ್ಲ ಬಂಗಾರ ಜಪ್ತಿಯಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಅವರು ತಿಳಿಸಿದ್ದಾರೆ.