ಶಿವಮೊಗ್ಗ (ಸೆ.27): ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರ ಬೈಕ್‌ ಅನ್ನೇ ಕಳ್ಳರು ಹೊತ್ತೊಯ್ದ ಘಟನೆ ಹೊಸನಗರದಲ್ಲಿ ನಡೆದಿದೆ.

ಮಾಸ್ಕ್‌ ಧರಿಸಿಲ್ಲದ ಕಾರಣ ಪೊಲೀಸರು ಇಬ್ಬರು ಹುಡುಗರನ್ನು ಪೊಲೀಸ್‌ ಠಾಣೆಗೆ ಕರೆ ತಂದಿದ್ದರು. ಠಾಣೆಯಿಂದ ವಾಪಾಸ್‌ ಹೋಗುವಾಗ ಪೊಲೀಸರ ಬೈಕ್‌ ಕದ್ದೊಯ್ದಿದ್ದಾರೆ.

ಗುರುವಾರ ಸಂಜೆ ಪೊಲೀಸರು ಮಾಸ್ಕ್‌ ಧರಿಸದೆ ಮನೆಯಿಂದ ಹೊರ ಬಂದವರಿಗೆ ದಂಡ ವಿಧಿಸುತ್ತಿದ್ದರು. ಈ ವೇಳೆ ಮಾಸ್ಕ್‌ ಧರಿಸಿದೆ ಹೊರಬಂದಿದ್ದ ಹುಡುಗರಿಬ್ಬರನ್ನು ವಿಚಾರಣೆ ನಡೆಸಿದ್ದಾರೆ. ನಂತರ ದಂಡ ಕಟ್ಟಿಸಿಕೊಳ್ಳಲೆಂದು ಹೊಸನಗರ ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ.

ಡ್ರಗ್ಸ್‌ ಮಾಫಿಯಾ: ಫ್ಯಾಷನ್‌ ಸ್ಟಾರ್‌ ರಮೇಶ್‌ಗೆ ಬೆವರಿಳಿಸಿದ ಸಿಸಿಬಿ ...

ವಿಚಾರಣೆ ವೇಳೆ ‘ನಮ್ಮ ಬಳಿ ಹಣ ಇಲ್ಲ. ನಾವು ಯಕ್ಷಗಾನ ಕಲಾವಿದರು’ ಎಂದು ಪೊಲೀಸರ ಎದುರು ದುಂಬಾಲು ಬಿದ್ದಿದ್ದಾರೆ. ಹಾಗೆಯೇ ಠಾಣೆಯಿಂದ ವಾಪಸ್‌ ಹೋಗುವಾಗ ಠಾಣೆಯ ಎದುರಿನಲ್ಲಿ ನಿಲ್ಲಿಸಿದ್ದ ಬೈಕ್‌ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಪೈಪ್‌ ಅಂಗಡಿಯೊಂದಕ್ಕೆ ಹೋದ ಹುಡುಗರು ನಮ್ಮ ಬೈಕ್‌ ಕೀ ಕಳೆದು ಹೋಗಿದೆ. ಲಾಕ್‌ ಓಪನ್‌ ಮಾಡಬೇಕು’ ಎಂದು ಬೇರೊಂದು ಕೀಲಿ ಕೇಳಿದ್ದಾರೆ. ಅಲ್ಲಿಂದ ಬೇರೆ ಕೀ ತಂದು ಬೈಕ್‌ ಅನ್ನು ಎಗರಿಸಿ ಪರಾರಿಯಾಗಿದ್ದಾರೆ.

ಪೊಲೀಸ್‌ ಸಿಬ್ಬಂದಿ ಮನೆಗೆ ಹೊರಡಲು ಅಣಿಯಾದಾಗ ಬೈಕ್‌ ಕಳೆದು ಹೋಗಿರುವುದು ಗಮನಕ್ಕೆ ಬಂದಿದೆ. ಬೈಕ್‌ ಹುಡುಕಾಟಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಳ್ಳತನ ಆಗಿರುವ ಬೈಕ್‌ ಹೊಸನಗರ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಒಬ್ಬರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.