ಬೆಂಗಳೂರು(ಜು.30): ಅಮಾನ್ಯಗೊಂಡ ನೋಟು ಬದಲಾವಣೆ ದಂಧೆಯಲ್ಲಿ ಒಳ್ಳೆಯ ಲಾಭ ಗಳಿಸಬಹುದೆಂದು ಜನರನ್ನು ನಂಬಿಸಿ, ವಂಚನೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆ ಕೆ.ಪಿ.ಅಗ್ರಹಾರದ ಕಿರಣ್‌ ಕುಮಾರ್‌, ನಾಗರಬಾವಿಯ ಪ್ರವೀಣ್‌ ಕುಮಾರ್‌ ಹಾಗೂ ಕಾಮಾಕ್ಷಿಪಾಳ್ಯದ ಪವನ್‌ ಕುಮಾರ್‌ ಬಂಧಿತರು. ಆರೋಪಿಗಳಿಂದ ನಿಷೇಧಿತ 1 ಸಾವಿರ ಮುಖ ಬೆಲೆಯ 30 ಲಕ್ಷ ಹಳೆಯ ನೋಟು ಜಪ್ತಿ ಮಾಡಲಾಗಿದೆ. ಈ ದಂಧೆಯ ಕಿಂಗ್‌ಪಿನ್‌ಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಟ್‌ ಕೊಡಿಸುತ್ತೇನೆ ಎಂದು 50 ಕೋಟಿ ಪೀಕಿದ್ದ ಮಹಿಳೆ: ಟ್ಯಾಂಕ್‌ಗೆ ಹಾರಿ ಗೃಹಿಣಿ ಆತ್ಮಹತ್ಯೆ?

ಎಚ್‌ಎಂಟಿ ಸರ್ವಿಸ್‌ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ 12.30ರಲ್ಲಿ ಕಾರಿನಲ್ಲಿ 30 ಲಕ್ಷ ಇಟ್ಟುಕೊಂಡು ಗಿರಾಕಿಗಳ ಸಂಪರ್ಕಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಜಾಲಹಳ್ಳಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ಹನುಂತೇಗೌಡ ಮತ್ತು ರಾಜಶೇಖರ್‌ ಬಳಿ .70 ಲಕ್ಷ ಹಳೇ ನೋಟುಗಳಿವೆ ಎಂದು ಬಂಧಿತರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಸ್ಕೆಚ್‌:

ರಿಯಲ್‌ ಎಸ್ಟೇಟ್‌ ಉದ್ಯಮಿಗಳಾದ ಮಾಗಡಿ ರಸ್ತೆಯ ವåಾಳಗಾಳದ ಹನುಮಂತೇಗೌಡ ಹಾಗೂ ವಿಜಯನಗರದ ರಾಜಶೇಖರ್‌, ರಿವರ್ಸ್‌ ಬ್ಯಾಂಕ್‌ ಅಧಿಕಾರಿಗಳ ಹೆಸರಿನಲ್ಲಿ ಜನರಿಗೆ ವಂಚಿಸಲು ಸಂಚು ರೂಪಿಸಿದ್ದರು. ಹಣದಾಸೆ ತೋರಿಸಿ ಸಣ್ಣಪುಟ್ಟಕೆಲಸ ಮಾಡುತ್ತಿದ್ದ ಕಿರಣ್‌, ಪ್ರವೀಣ್‌ ಹಾಗೂ ಪವನ್‌ನನ್ನು ನೋಟು ಬದಲಾವಣೆ ದಂಧೆಗೆ ಬಳಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮಗೆ 30 ಲಕ್ಷ ನಿಷೇಧಿತ ನೋಟುಗಳನ್ನು ಚಲಾವಣೆಗೆಂದು ಕೊಟ್ಟಿದ್ದರು. ಜನರಿಂದ ಶೇ.10 ರಂತೆ ಹೊಸ ನೋಟು ಪಡೆದು ಅವರಿಗೆ ಹಳೇ ನೋಟು ಮಾರಾಟ ಮಾಡಬೇಕು. ಇದಕ್ಕೆ ಶೇ.30ರಷ್ಟು ಕಮಿಷನ್‌ ನೀಡುತ್ತೇವೆ ಎಂದು ಹನುಮಂತೇಗೌಡ ಹಾಗೂ ರಾಜಶೇಖರ್‌ ತಿಳಿಸಿದ್ದರು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳು ಪತ್ತೆಯಾದರೆ ಹಳೇ ನೋಟುಗಳ ಮೂಲ ಬಯಲಾಗಲಿದೆ.