ಹಗರಿಬೊಮ್ಮನಹಳ್ಳಿ(ಡಿ.19): ಕುಟುಂಬ ಕಲಹ ಹಾಗೂ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ, ಪತ್ನಿಯ ಸಹೋದರನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಎರಡನೇ ಹಂಪಸಾಗರದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.

ಗೋವಿಂದಪುರ ತಾಂಡಾದ ಬೋಜನಾಯ್ಕ, ತಾಲೂಕಿನ ಬಸರಕೋಡ್‌ ತಾಂಡಾದ ಶಿಕ್ಷಕರಾಗಿದ್ದಾರೆ. ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಎರಡನೇ ಹಂಪಸಾಗರ ಗ್ರಾಮದಲ್ಲಿ ವಾಸವಾಗಿದ್ದರು. ಅವರ ಇಬ್ಬರು ಪುತ್ರಿಯರಲ್ಲಿ ಒಬ್ಬರಾದ ಸೀಮಾಬಾಯಿಯನ್ನು ಹಡಗಲಿ ತಾಲೂಕಿನ ಕಾಲ್ವಿತಾಂಡದ ರವಿನಾಯ್ಕ್‌ ಎನ್ನುವವರಿಗೆ ಕಳೆದ 6 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಈ ಪತಿ, ಪತ್ನಿಗೆ ಚಿಕ್ಕ ಚಿಕ್ಕ ಎರಡು ಹೆಣ್ಣು, ಒಂದು ಗಂಡು ಮಗು ಕೂಡ ಇದೆ. ನಂತರ ಇವರ ಕುಟುಂಬದ ವಿರಸ ಉಂಟಾಗಿ ಹಂಪಸಾಗರದ ತವರು ಮನೆಗೆ ಸೀಮಾ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ಬಂದು ಸೇರಿದ್ದರು. ನಂತರ ನಡೆದ ಕೆಲ ರಾಜಿ ಪಂಚಾಯಿತಿಯಲ್ಲಿ ಮಗಳನ್ನು ಕಳಿಸಿಕೊಡಲು ಕುಟುಂಬದವರು ಒಪ್ಪಿದ್ದರು.

ಫ್ರೈಡ್‌ರೈಸ್‌ ತಿನ್ನು ಎಂದಿದ್ದಕ್ಕೆ ಸ್ನೇಹಿತನ್ನೇ ಇರಿದು ಕೊಂದ..!

ಶುಕ್ರವಾರ ಬೆಳಗ್ಗೆ 11.30ರ ಸಮಯದಲ್ಲಿ ಅಳಿಯ ರವಿನಾಯ್ಕ್‌ ಹಂಪಸಾಗರಕ್ಕೆ ಬಂದವನೇ ಪತ್ನಿ ಸೀಮಾಳೊಂದಿಗೆ ತಗಾದೆ ತೆಗೆದು, ಮಾತಿಗೆ ಮಾತು ಬೆಳೆದು ಜಗಳವಾಡಿದ್ದಾರೆನ್ನಲಾಗಿದೆ. ಇವರಿಬ್ಬರ ನಡುವೆ ಬಂದ ಸೀಮಾಳ ತಾಯಿ ಕಮಲಬಾಯಿ ಸೇರಿ ಈ ಮೂರು ಜನರು ಜಗಳವಾಡುತ್ತಿರುವಾಗ ರವಿನಾಯ್ಕ್‌ ಕೈಗೆ ಸಿಕ್ಕ ಕಟ್ಟಿಗೆ ಕತ್ತರಿಸುವ ಹರಿತವಾದ ಕಂದಲಿಯಿಂದ ಇಬ್ಬರಿಗೂ ಹೊಡೆದು ಗಾಯಗೊಳಿಸಿ ಓಡಿದ್ದಾನೆ. ನಂತರ ಗ್ರಾಮದ ಹೊರವಲಯ ಡಾಬಾದ ಹತ್ತಿರದಲ್ಲಿಯೇ ಇದ್ದ ಪತ್ನಿಯ ಸಹೋದರ ಆಕಾಶ್‌ನಾಯ್ಕ (23)ಗೂ ಕೈಯಲ್ಲಿದ್ದ ಆಯುಧದಿಂದ ಬಲವಾಗಿ ಕುತ್ತಿಗೆಗೆ ಮತ್ತು ತಲೆಗೆ ಹೊಡೆದ ಕಾರಣ ಸ್ಥಳದಲ್ಲಿಯೇ ಆಕಾಶ್‌ ನಾಯ್ಕ್‌ ಮೃತನಾಗಿದ್ದಾನೆ.

ಕಮಲಾಬಾಯಿಯ ತಲೆಗೂ ಮತ್ತು ಎದೆಗೂ ಬಲವಾದ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದರು, ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಜೊತೆಗೆ ಸೀಮಾಳ ಕೈಗೆ ತೀವ್ರಗಾಯವಾಗಿ ರಕ್ತಸ್ರಾವ ಆಗುತ್ತಿರುವುದರಿಂದ ತಾಯಿ ಕಮಲಾಬಾಯಿಯೊಂದಿಗೆ ಹಡಗಲಿ ಆಸ್ಪತ್ರೆಗೆ ಕಳಿಸಿಕೊಡಲಾಯಿತೆಂದು ಪೊಲೀಸ್‌ ಅಧಿಕಾರಿಗಳು ತಿಳಿಸುತ್ತಾರೆ. ಸ್ಥಳಕ್ಕೆ ಸಿಪಿಐ ಎಂ.ಎಂ. ಡಪ್ಪಿನ್‌, ಎಎಸ್‌ಪಿ ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಕೊಲೆಗೈದ ರವಿ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.