ಬೆಂಗಳೂರು(ಫೆ.17): ರಸ್ತೆ ಬದಿ ಮೂತ್ರ ಮಾಡಿದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಉಲ್ಲಾಳು ಉಪನಗರ ನಿವಾಸಿ ಅರುಣ್‌ಕುಮಾರ್‌ (26) ಮೃತ ಕೊಲೆಯಾದ. ಮಾರಾಮಾರಿಯಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅರುಣ್‌ಕುಮಾರ್‌ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟತಾಲೂಕಿನವನಾಗಿದ್ದು, ಕೆಲ ವರ್ಷಗಳಿಂದ ಉಲ್ಲಾಳು ಉಪನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅರುಣ್‌ ಮಂಗಳವಾರ ಸಂಜೆ 5.30ರ ಸುಮಾರಿಗೆ ಉಲ್ಲಾಳು ಉಪನಗರದಲ್ಲಿ ರಸ್ತೆ ಬದಿ ಮೂತ್ರ ಮಾಡುತ್ತಿದ್ದ. ಈತನಿಗೆ ಪರಿಚತನಾಗಿರುವ ರೌಡಿಶೀಟರ್‌ ಕೃಷ್ಣನ ಸಹಚರರು ‘ಮಹಿಳೆಯರು ಓಡಾಡುತ್ತಾರೆ, ರಸ್ತೆಯಲ್ಲಿ ಮೂತ್ರ ಮಾಡುತ್ತಿಯಾ ಎಂದು ಪ್ರಶ್ನೆ ಮಾಡಿದ್ದರು. ಇದೇ ವಿಚಾರಕ್ಕೆ ಅರುಣ್‌ ಹಾಗೂ ಮತ್ತೊಂದು ಗುಂಪಿನ ನಡುವೆ ಜಗಳವಾಗಿದೆ. 

ಬರ್ತ್‌ ಡೇ ವಿಶ್ ನೆಪ ಹೇಳಿಕೊಂಡು ಸಹೋದರಿಯ ಪತಿಯನ್ನೇ ಹತ್ಯೆಗೈದ ಕಿರಾತಕರು

ಅರುಣ್‌ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಅರುಣ್‌ ತನ್ನ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅರುಣ್‌ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಅರುಣ್‌ ಸ್ನೇಹಿತರು ಹಾಗೂ ಕೃಷ್ಣ, ಆತನ ಸಹಚರರಿಗೂ ಗಾಯಗಳಾಗಿವೆ. ಕೃಷ್ಣ ರೌಡಿಶೀಟರ್‌ ಆಗಿದ್ದು, ಕೆಲ ವರ್ಷಗಳಿಂದ ತಮಿಳುನಾಡಿನಲ್ಲಿ ನೆಲೆಸಿದ್ದ. ಇತ್ತೀಚೆಗೆ ಆರೋಪಿ ನಗರಕ್ಕೆ ಬಂದಿದ್ದ. ಇದೀಗ ಕೊಲೆ ಪ್ರಕರಣದಲ್ಲಿ ಆರೋಪಿ ಬಂಧಿಸಲಾಗಿದೆ. ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.