Asianet Suvarna News Asianet Suvarna News

ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದು ಹಚ್ಚಾಟ: ಓರ್ವನ ಸಾವು

ಚಾರು ಇರಿತದಿಂದ ಓರ್ವ ಸಾವು, ಮತ್ತೊಬ್ಬ ಗಂಭೀರ ಗಾಯ| 6 ಮಂದಿಗೆ ಚಾಕು ಇರಿತ| ಬೆಂಗಳೂರಿನ ಅಂಜನಪ್ಪ ಗಾರ್ಡನ್‌ನಲ್ಲಿ ಘಟನೆ| ಮಾಂಸದಂಡಿಯಲ್ಲಿ ಚಾಕು ಕದ್ದ ಆರೋಪಿ, ಬಳಿಕ 2 ಕಿ.ಮೀ ಸುತ್ತಾಡಿ ಹುಚ್ಚಾಟ| ಗಸ್ತಿನಲ್ಲಿದ್ದ ಪೊಲೀಸರಿಂದ ಬಂಧನ| 

Person Murder in Bengaluru grg
Author
Bengaluru, First Published Oct 19, 2020, 7:35 AM IST

ಬೆಂಗಳೂರು(ಅ.19):  ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಮನಬಂದಂತೆ ಚಾಕುವಿನಿಂದ ಇರಿದ ಪರಿಣಾಮ ಓರ್ವ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಾರಿ (30) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಆರೋಪಿ ಅಂಜನಪ್ಪ ಗಾರ್ಡನ್‌ ನಿವಾಸಿ ಎಂ.ಗಣೇಶ್‌ (30) ಎಂಬಾತನನ್ನು ಬಂಧಿಸಲಾಗಿದೆ. ವೇಲಾಯಿದನ್‌ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಕೆಂಪೇಗೌಡ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರೇಶ್‌, ರಾಜೇಶ್‌, ಆನಂದ್‌ ಮತ್ತು ಪ್ರಕಾಶ್‌ ಎಂಬುವವರು ಇರಿತಕ್ಕೊಳಗಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಕುಟುಂಬಸ್ಥರು ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಆದರೆ ತನಿಖೆ ವೇಳೆ ಆರೋಪಿ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿಲ್ಲ. ವೈದ್ಯಕೀಯ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ತಿಳಿಸಿದ್ದಾರೆ.

ಅಂಜನಪ್ಪ ಗಾರ್ಡನ್‌ ನಿವಾಸಿಯಾಗಿರುವ ಆರೋಪಿ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿ ಕಾಟನ್‌ಪೇಟೆಯ ಮಂಡಿಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಭಾನುವಾರ ಬೆಳಗ್ಗೆ 8.15ರ ಸುಮಾರಿಗೆ ಮಾಂಸದ ಅಂಗಡಿಗೆ ಮಾಂಸ ಖರೀದಿ ಮಾಡುವ ನೆಪದಲ್ಲಿ ಆರೋಪಿ ತೆರಳಿದ್ದ. ಮಾಂಸ ಅಂಗಡಿ ಮಾಲಿಕನನ್ನು ಒಂದು ಕೆ.ಜಿ.ಮಾಂಸ ಎಷ್ಟುಎಂದು ಕೇಳಿದ್ದಾನೆ. ಮಾಲಿಕ ಹಣ ಹೇಳುವಷ್ಟರಲ್ಲಿ ಆರೋಪಿ ಅಲ್ಲಿಯೇ ಇದ್ದ ಚಾಕು ತೆಗೆದುಕೊಂಡು ಕಾಲ್ಕಿತ್ತಿದ್ದಾನೆ. ಮಾಂಸದಂಗಡಿ ಮಾಲಿಕ ಆರೋಪಿಯನ್ನು ಬೆನ್ನಟ್ಟಿದ್ದು, ಪರಾರಿಯಾಗಿದ್ದ.

ಪತ್ನಿಯೊಂದಿಗೆ ಸಲುಗೆ ಬೇಡ ಎಂದಿದ್ದಕ್ಕೆ ಸಿಲಿಂಡರ್‌ ಎತ್ತಿಹಾಕಿ ಹತ್ಯೆಗೈದ ಗೆಳೆಯ..!

ಕೂತು ಟೀ ಹೀರುತ್ತಿದ್ದವರಿಗೂ ಇರಿತ:

ಈ ವೇಳೆ ಅಂಜನಪ್ಪ ಗಾರ್ಡನ್‌, ಬಕ್ಷಿಗಾರ್ಡನ್‌ ಮತ್ತು ಛಲವಾದಿಪಾಳ್ಯದಲ್ಲಿ ಸುಮಾರು ಒಂದೆರೆಡು ಕಿ.ಮೀ. ನಡೆದಾಡಿರುವ ಆರೋಪಿ ಎದುರಿಗೆ ಬಂದವರಿಗೆ ಹಾಗೂ ಮನೆ ಬಳಿ ನಿಂತಿದ್ದ, ಚಹಾ ಅಂಗಡಿ ಬಳಿ ಚಹಾ ಕುಡಿಯುತ್ತಾ ಕುಳಿತಿದ್ದವರಿಗೂ ಆರೋಪಿ ಇರಿದಿದ್ದಾನೆ. ಸಾರ್ವಜನಿಕರು ಕೂಡ ಈತನ ವರ್ತನೆಗೆ ಹೆದರಿ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಗಸ್ತಿನಲ್ಲಿದ್ದ ಸಬ್‌ ಇನ್‌ಸ್ಪೆಕ್ಟರ್‌ ಮೂರ್ತಿ ಹಾಗೂ ಕಾನ್‌ಸ್ಟೇಬಲ್‌ ಶಿವಮೂರ್ತಿ ನಾಯಕ್‌ ಸಮಯ ಪ್ರಜ್ಞೆಯಿಂದ ಆರೋಪಿಯನ್ನು ಬಂಧಿಸಿ, ಆರೋಪಿಯಿಂದ ಚಾಕು ಜಪ್ತಿ ಮಾಡಿದ್ದಾರೆ ಎಂದು ಡಿಸಿಪಿ ವಿವರಿಸಿದರು.

ಆರೋಪಿಗೆ ವಿವಾಹವಾಗಿದ್ದು, ನಾಲ್ಕೈದು ವರ್ಷದ ಹಿಂದೆ ಪತ್ನಿ ಆರೋಪಿಯನ್ನು ತೊರೆದು ಪ್ರತ್ಯೇಕವಾಗಿ ನೆಲೆಸಿದ್ದಾರೆ. ಮೃತ ಮಾರಿ ಎಂಬಾತ ಕೂಡ ಸ್ಥಳೀಯ ನಿವಾಸಿಯೇ ಆಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಆರೋಪಿಯನ್ನು ತನಿಖೆಗೆ ಒಳಪಡಿಸಲಾಗಿದೆ. ‘ನನ್ನ ಮೇಲೆ ಹಲ್ಲೆ ನಡೆಸಿದರು, ಹೀಗಾಗಿ ಇರಿದೆ’ ಎಂದೆಲ್ಲಾ ಹೇಳಿಕೆ ನೀಡಿದ್ದಾನೆ. ಸ್ಥಳೀಯ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಠಾಣೆಗೆ ಮಾಹಿತಿ ನೀಡಿದ ಮಟನ್‌ ಸ್ಟಾಲ್‌ ಮಾಲಿಕ

ಮಟನ್‌ ಖರೀದಿ ನೆಪದಲ್ಲಿ ಅಂಗಡಿಗೆ ಬಂದು ಚಾಕು ತೆಗೆದುಕೊಂಡು ಪರಾರಿಯಾದವನ ಬಗ್ಗೆ ಕೂಡಲೇ ಮಾಲೀಕ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರಿಂದ ಠಾಣೆಗೆ ಇರಿತದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅರ್ಧ ತಾಸಿನಲ್ಲಿ ಆರೋಪಿ ಆರು ಮಂದಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳು ಆರೋಪಿ ಗಣೇಶ್‌ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿದೆ. ಸುಖಾಸುಮ್ಮನೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ, ಕುಳಿತಿದ್ದವರಿಗೆ ಇರಿದಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios