ನಕಲಿ ಆ್ಯಪ್ ಬಳಸಿ ಓಲಾ ಕಂಪನಿಗೆ ಟೋಪಿ ಹಾಕಿದ ಖದೀಮ..!
3 ಕಾರು, 500 ಸಿಮ್ ವಶ| ನಿತ್ಯ 30 ಸಾವಿರ ಹಣ ಸಂಪಾದನೆ, ಮೂವರ ಸೆರೆ| ಕೃತ್ಯದಲ್ಲಿ ಓಲಾ ಕಂಪನಿ ಅಧಿಕಾರಿಗಳ ಕೈವಾಡದ ಶಂಕೆ: ಸಿಸಿಬಿ ಅಧಿಕಾರಿಗಳು|ಸಿಸಿಬಿ ಕಚೇರಿ ಹಾಗೂ ಸೈಬರ್ ಕ್ರೈಂ ಠಾಣೆಯನ್ನು ಸ್ಯಾನಿಟೈಸ್|
ಬೆಂಗಳೂರು(ಜೂ.12): ಓಲಾ ಕಂಪನಿಗೆ ಪ್ರತ್ಯೇಕ ಆ್ಯಪ್ ಬಳಸಿ ಕ್ಯಾಬ್ ಚಾಲಕರ ಸೋಗಿನಲ್ಲಿ ವಂಚಿಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭರತನಗರದ ನಾಗೇಶ್, ಹೊಸಕೆರೆಹಳ್ಳಿ ರವಿ, ಬಸವಪುರದ ಎಂ.ಎಂ.ಮನು ಹಾಗೂ ಬ್ಯಾಡರಹಳ್ಳಿ ಸತೀಶ್ ಬಂಧಿತರಾಗಿದ್ದು, ಆರೋಪಿಗಳಿಂದ ಮೂರು ಕಾರುಗಳು, 500 ಸಿಮ್ ಕಾರ್ಡ್, 2 ಐಡಿ ಕಾರ್ಡ್ ಪ್ರಿಂಟರ್, ಲ್ಯಾಪ್‌ಟಾಪ್ ಮತ್ತು 16 ಮೊಬೈಲ್ ಸೇರಿದಂತೆ 23 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
"
ಓಲಾ ಕಂಪನಿ ತನ್ನ ಕ್ಯಾಬ್ ಚಾಲಕರಿಗೆ ಆನ್‌ಲೈನ್‌ನಲ್ಲಿ ಬಾಡಿಗೆ ಹಣ ಹಾಗೂ ದಿನಕ್ಕೆ 15ರಿಂದ 20 ಟ್ರಿಪ್ ಓಡಿಸಿದರೆ ಸ್ಲಾಬ್‌ಗೆ ತಕ್ಕಂತೆ ಪ್ರೋತ್ಸಾಹ ಧನ ಸಹ ನೀಡುತ್ತದೆ. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಲೋಪದೋಷವನ್ನರಿತ ಆರೋಪಿಗಳು, ನಕಲಿ ವಿಳಾಸ ಮತ್ತು ದಾಖಲೆ ಕೊಟ್ಟು ಓಲಾ ಕಂಪನಿಯಲ್ಲಿ 50 ಕಾರುಗಳನ್ನು ನೋಂದಣಿ ಮಾಡಿಸಿದ್ದರು. ಆ ದಾಖಲೆ ಆಧರಿಸಿ ಸಿಮ್ ಕಾರ್ಡ್‌ಗಳನ್ನು ಪಡೆದು ಹಲವು ಚಾಲಕರ ಹೆಸರನ್ನು ಹೇಳಿದ್ದರು. ಕಾರು ಸಂಚಾರ ಮಾಡಿರುವುದಾಗಿ ನಂತರ ಮಾಕ್ ಆ್ಯಪ್ (ನಕಲಿ ಜಿಪಿಎಸ್) ಬಳಸಿ ಲೋಕೇಷನ್ ಜಂಪಿಂಗ್ ಮಾಡಿಸುತ್ತಿದ್ದರು. ದಿನಕ್ಕೆ 15 ರಿಂದ 20 ಬಾಡಿಗೆ ಓಡಿಸಿರುವುದಾಗಿ ದಾಖಲಿಸಿ ದಿನಕ್ಕೆ ಅಂದಾಜು 30 ಸಾವಿರ ಸಂಪಾದನೆ ಮಾಡುತ್ತಿದ್ದರು. ಕೃತ್ಯದಲ್ಲಿ ಓಲಾ ಕಂಪನಿ ಅಧಿಕಾರಿಗಳ ಕೈವಾಡ ಬಗ್ಗೆ ಸಹ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬಣ್ಣದ ಮಾತಿಗೆ ಮರುಳಾದ ಯುವತಿ..! ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ
ಆರೋಪಿಗೆ ಸೋಂಕು, ಪೊಲೀಸರಿಗೆ ಕ್ವಾರಂಟೈನ್
ಈ ವಂಚನೆ ಕೃತ್ಯ ಆರೋಪಿಗಳ ಪೈಕಿ ಒಬ್ಬಾತನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿ ಹಾಗೂ ಸೈಬರ್ ಕ್ರೈಂ ಠಾಣೆಯನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಆರೋಪಿಗಳ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಇನ್‌ಸ್ಪೆಕ್ಟರ್‌ಗಳು ಹಾಗೂ 10 ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.