ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ಹಣ ಪಡೆದು ವಂಚಿಸಿದ್ದ ವ್ಯಕ್ತಿ ಬಂಧನ
ಬಂಧಿತನಿಂದ 18 ಪಾಸ್‌ಪೋರ್ಟ್, ವಿವಿಧ ಕಂಪನಿಗಳ 11 ಮೊಬೈಲ್ ವಶ| . ಆಪಾದಿತನಿಗೆ ಹಣ ಕೊಟ್ಟು ಮೋಸ ಹೋಗಿರುವವರು ಯಾರಾದರೂ ಇದ್ದರೆ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸೂಚನೆ| ಆರೋಪಿ ಬಂಧಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಭಿನಂದನೆ|
ದಾಂಡೇಲಿ(ಫೆ.14): ದಾಂಡೇಲಿ ವ್ಯಾಪ್ತಿಯಲ್ಲಿ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಹೊರ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಮತ್ತು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡು ಕೆಲಸ ಕೊಡಿಸದೇ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶರಣಬಸಪ್ಪ (ಶರಣ) ಸಂಗನಬಸಪ್ಪ ಬಳಿಗೇರ (45) ಬಂಧಿತ ಆರೋಪಿ. ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಹತ್ತಿರದ ಬೂದಗೇರಿ ಮುಗುಳಿಯವನಾದ ಈತ ದಾಂಡೇಲಿ ಸುಭಾಸನಗರ ನಿವಾಸಿಯಾಗಿದ್ದಾನೆ.
ಶನಿವಾರ ಬೆಳಗಾವಿಯಲ್ಲಿ ಬಂಧಿಸಿರುವ ಪೊಲೀಸರು ಇತರರಿಂದ ಉದ್ಯೋಗ ಕೊಡಿಸುವುದಾಗಿ ಪಡೆದಿದ್ದ 18 ಪಾಸ್‌ಪೋರ್ಟ್, ವಿವಿಧ ಕಂಪನಿಗಳ 11 ಮೊಬೈಲ್‌ಗಳು, ಏಸರ್ ಕಂಪನಿಯ 1 ಲ್ಯಾಪ್‌ಟಾಪ್, 6 ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳು, ಹಾರ್ಡ್ ಡ್ರೈವ್ (ಡಿಸ್ಕ್) 1, 3 ಪೆನ್‌ಡ್ರೈವ್‌ಗಳು, ವಿವಿಧ ಕಂಪನಿಗಳ 7 ಸಿಮ್ ಕಾರ್ಡ್‌ಗಳು, ವಿವಿಧ ಕಂಪನಿಗಳ 7 ವಾಚ್‌ಗಳು, ಆಪಾದಿತ ಕೆಲಸ ಕೊಡಿಸುವುದಾಗಿ ಹೇಳಿ ಜನರಿಂದ ಪಡೆದುಕೊಂಡ ಹಣದಲ್ಲಿ ಖರೀದಿಸಿದ 1 ಬಂಗಾರದ ಚೈನ್, ಒಂದು ಕಿವಿಯೋಲೆಯನ್ನು ವಶಪಡಿಸಿಕೊಂಡಿದ್ದಾರೆ. ಆಪಾದಿತನಿಗೆ ಹಣ ಕೊಟ್ಟು ಮೋಸ ಹೋಗಿರುವವರು ಯಾರಾದರೂ ಇದ್ದರೆ ಅವರು ದಾಂಡೇಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಿಳಿಸಲಾಗಿದೆ.
ಶೃಂಗೇರಿ ಬಾಲಕಿ ರೇಪ್ ಪ್ರಕರಣ : 15 ಮಂದಿ ಅರೆಸ್ಟ್
ಆರೋಪಿ ಪತ್ತೆಗಾಗಿ ಉ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬದ್ರನಾಥ ಎಸ್. ಹಾಗೂ ದಾಂಡೇಲಿ ಉಪ-ವಿಭಾಗದ ಡಿವೈಎಸ್‌ಪಿ ಗಣೇಶ ಕೆ.ಎಲ್., ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳ ಮಾರ್ಗದರ್ಶನದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಮಹಾದೇವಿ ನಾಯ್ಕೋಡಿ, ನಗರ ಠಾಣೆಯ ಪಿಎಸ್‌ಐ ಯಲ್ಲಪ್ಪ ಎಸ್. ಅವರ ನೇತೃತ್ವದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್‌ಐ ಸಂಪತ್‌ಕುಮಾರ, ಸಿಬ್ಬಂದಿಗಳಾದ ಸೋಮಲಿಂಗ್ ಖಂಡೇಕರ್, ಪ್ರಶಾಂತ ನಾಯ್ಕ, ಭೀಮಪ್ಪ ಎಚ್.ಕೆ., ಮಂಜುನಾಥ ಎಚ್. ಶೆಟ್ಟಿ, ಚಿನ್ಮಯಾನಂದ ಪತ್ತಾರ, ಸುಧೀರ ಮಡಿವಾಳ, ಸಿಡಿಆರ್ ವಿಭಾಗದ ಜಿಲ್ಲಾ ಕೇಂದ್ರ ಕಾರವಾರ ಅವರನ್ನು ಒಳಗೊಂಡಂತೆ ತಂಡವನ್ನು ರಚಿಸಿ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಬಂಧಿಸಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.