ಮೊಬೈಲ್ ಹಿಡಿದುಕೊಂಡು ಆಟವಾಡುತ್ತಿದ್ದ ಮಗನಿಗೆ ಪೋಷಕರು ಮೊಬೈಲ್​ ಬಿಟ್ಟು ಓದು, ಎಂದು ಹೇಳಿದ್ದಕ್ಕೆ 7ನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೊರವಲಯ ಪ್ರದೇಶ ಅತ್ತಿಬೆಲೆಯಲ್ಲಿ ನಡೆದಿದೆ.

ಬೆಂಗಳೂರು (ಡಿ.8): ಮನೆಯಲ್ಲಿ ಯಾವಾಗಲೂ ಮೊಬೈಲ್ ಹಿಡಿದುಕೊಂಡು ಆಟವಾಡುತ್ತಿದ್ದ ಮಗನಿಗೆ ಪೋಷಕರು ಮೊಬೈಲ್​ ಬಿಟ್ಟು ಓದು, ಎಂದು ಹೇಳಿದ್ದಕ್ಕೆ 7ನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೊರವಲಯ ಪ್ರದೇಶ ಅತ್ತಿಬೆಲೆಯಲ್ಲಿ ನಡೆದಿದೆ.

ಇಂದಿನ ಮಕ್ಕಳಿಗೆ ಮೊಬೈಲ್‌ ಒಂದೇ ಜಗತ್ತು ಆದಂತಾಗಿದೆ. ಇಡೀ ದಿನದ ಚಟುವಟಿಕೆಯನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಇನ್ನು ತಂದೆ ತಾಯಿಗಳಿಗೂ ಕೂಡ ಮಕ್ಕಳು ತಮಗೆ ತೊಂದರೆ ಕೊಡದೇ ಸುಮ್ಮನಿದ್ದರೆ ಸಾಕು ಎನ್ನುವ ನಿಟ್ಟಿನಲ್ಲಿ ಅವರ ಕೈಗೆ ಮೊಬೈಲ್‌ ಕೊಟ್ಟು ಸುಮ್ಮನಾಗುತ್ತಾರೆ. ಆದರೆ, ಮಕ್ಕಳು ಮೊಬೈಲ್‌ ಬಳಸುವುದನ್ನೇ ಗೀಳು ಮಾಡಿಕೊಂಡ ನಂತರ ಅವರಿಗೆ ಬುದ್ಧಿ ಹೇಳಲು ಮುಂದಾಗುತ್ತಾರೆ. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೆ ಎನ್ನುವಂತೆ ಮೊಬೈಲ್‌ ಬಿಟ್ಟರಲಾರದಷ್ಟು ಗೀಳು ಅಂಟಿಸಿಕೊಂಡ ನಂತರ ಕಠಿಣ ಕ್ರಮ ಕೈಗೊಂಡಾಗ ಅನಾಹುತ ಮಾಡಿಕೊಳ್ಳುತ್ತಾರೆ. ಅಂತಹದ್ದೇ ಘಟನೆ ಬೆಂಗಳೂರಿನ ಹೊರವಲಯ ಅತ್ತಿಬೆಲೆಯಲ್ಲಿ ನಡೆದಿದ್ದು, ಒಬ್ಬನೇ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ.

8 ವರ್ಷದ ಬಾಲಕಿಗೆ ಡ್ರಗ್ಸ್‌ ನೀಡಿ, ಆಕೆಯ ಬ್ಯಾಗ್‌ನಲ್ಲಿಯೇ ಮಾದಕ ವಸ್ತು ಸಾಗಣೆ, ಆರೋಪಿಯ ಬಿಡುಗಡೆ!

ಆನ್‌ಲೈನ್‌ ತರಗತಿಗೆ ಮೊಬೈಲ್‌ ಕೊಡಿಸಿದ್ದೇ ಜೀವಕ್ಕೆ ಮುಳ್ಳಾಯಿತು: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕ ಯಶಸ್ ಗೌಡ (13). ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಅತ್ತಿಬೆಲೆ ಎಂಬಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಬಾಲಕ ಸ್ಟೋರ್ ರೂಂನ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕ ಯಶಸ್ ತಂದೆ ರೈತನಾಗಿದ್ದು, ಮೃತ ಈತನಿಗೆ ಓರ್ವ ಸಹೋದರಿ ಕೂಡ ಇದ್ದಾಳೆ. ಸ್ವಾಮಿ ವಿವೇಕಾನಂದ ನಗರದ ಖಾಸಗಿ ಶಾಲೆಯಲ್ಲಿ ಯಶಸ್ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕೊರೊನಾ ಸಮಯದ ವೇಳೆ ಮಗನಿಗೆ ಆನ್​ಲೈನ್​ ತರಗತಿ ಕೇಳಲು ಪೋಷಕರು ಮೊಬೈಲ್​ ಕೊಡಿಸಿದ್ದರು. ಅಂದಿನಿಂದ ನನ್ನ ಮಗ ಮೊಬೈಲ್ ಫೋನ್ ಗೆ ದಾಸನಾಗಿದ್ದ ಎಂದು ತಂದೆ ಹೇಳಿಕೆ ನೀಡಿದ್ದಾರೆ.
ಮೊಬೈಲ್‌ ದಾಸನಾಗಿದ್ದ ಬಾಲಕ: ಪ್ರತಿನಿತ್ಯ ಶಾಲೆ ಮುಗಿಸಿ ಮನೆಗೆ ಬಂದ ನಂತರ ಫೋನ್ ಹಿಡಿದುಕೊಂಡು ಕುಳಿತು ಬಿಡುತ್ತಿದ್ದ. ಪೋಷಕರು ಮಗನಿಂದ ಫೋನ್ ಪಡೆಯೋದು ಕಷ್ಟವಾಗಿತ್ತಂತೆ. ಮೊಬೈಲ್​ ಚಟಕ್ಕೆ ಬಿದ್ದು ಮಗ ಸರಿಯಾಗಿ ಹೋಮ್ ವರ್ಕ್ ಮಾಡುತ್ತಿರಲಿಲ್ಲ. ಜೊತೆಗೆ ಸರಿಯಾಗಿ ಓದುತ್ತಿಲ್ಲ ಎಂದು ಪೋಷಕರು ಕಂಗಾಲಾಗಿದ್ದರು. ಫೋನ್ ಇಲ್ಲದಿದ್ದರೆ, ಹುಡುಗ ಟಿವಿ ನೋಡುತ್ತಾ ಕುಳಿತುಕೊಳ್ಳುತ್ತಿದ್ದನಂತೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Bengaluru: ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್‌ ತಗುಲಿದ್ದ ಸುಪ್ರೀತ್‌ ಸಾವು

ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಯಲಿಲ್ಲ: ಮೊಬೈಲ್ ಬಿಟ್ಟು ಓದು ಎಂದು ಬಾಲಕನಿಗೆ ಪೋಷಕರು ಬೈಯ್ದಿದ್ದಾರೆ. ಮೊಬೈಲ್​ ಕಿತ್ತುಕೊಂಡಿದ್ದಕ್ಕೆ ಸಿಟ್ಟಾದ ಬಾಲಕ ರೂಮ್​ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. 1 ಗಂಟೆ ಕಳೆದರೂ ಬಾಲಕ ಹೊರಗೆ ಬಂದಿಲ್ಲ. ಗಾಬರಿಯಾದ ತಾಯಿ ಒಳಗೆ ಹೋಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಮಗನ ಸ್ಥಿತಿ ಕಂಡ ತಾಯಿ ಜೋರಾಗಿ ಕಿರುಚಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ನೆರೆಹೊರೆಯವರು ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದಾರೆ. ಯಶಸ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲು: ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ ನಗರದ ಹೊರವಲಯದಲ್ಲಿರುವ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸೂಲಿಬೆಲೆ ಠಾಣಾ ವ್ಯಾಪ್ತಿಯ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.