ಬೆಂಗಳೂರಿನಲ್ಲಿ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಪೋಷಕರು ದುಡಿಮೆಯಲ್ಲಿ ಬ್ಯುಸಿಯಾಗಿ ಮಕ್ಕಳ ಬಗ್ಗೆ ಗಮನ ಹರಿಸುತ್ತಿಲ್ಲ. ಮಕ್ಕಳು ಮನೆಯಲ್ಲಿ ಸುಳ್ಳು ಹೇಳಿ ಡ್ರಗ್ಸ್ ಹಾಗೂ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಇದರಿಂದ ಪೋಷಕರು ಖಾಸಗಿ ಪತ್ತೇದಾರರ ಸಹಾಯ ಪಡೆಯುತ್ತಿದ್ದಾರೆ. ಪತ್ತೇದಾರಿ ಸಂಸ್ಥೆಗಳು ಶೇಕಡಾ 99 ರಷ್ಟು ಪ್ರಕರಣಗಳಲ್ಲಿ ಮಾದಕ ದ್ರವ್ಯ ಸೇವನೆಯನ್ನು ಪತ್ತೆ ಹಚ್ಚಿವೆ.
ಕೆಲವು ಶ್ರೀಮಂತರ ಮಕ್ಕಳಿಗೆ ಇರುವ ದುಡ್ಡನ್ನು ಹೇಗೆ ಖರ್ಚು ಮಾಡಬೇಕು ಎನ್ನುವ ಚಿಂತೆ, ಕೆಲ ಬಡ ಮಕ್ಕಳಿಗೆ ಕೈಯಲ್ಲಿ ದುಡ್ಡಿಲ್ಲವಲ್ಲ ಎನ್ನುವ ಚಿಂತೆ... ಈ ಚಿಂತೆ ಭಿನ್ನ ಭಿನ್ನವಾಗಿದ್ದರೂ ಹೈಸ್ಕೂಲ್, ಕಾಲೇಜಿನ ಮೆಟ್ಟಿಲು ತುಳಿಯುತ್ತಿದ್ದಂತೆಯೇ ಈ ಚಿಂತೆಯನ್ನು ದೂರ ಮಾಡಿಕೊಳ್ಳಲು ಮಾದಕ ವ್ಯಸನಿಗಳಾಗುತ್ತಿರುವವರ ಸಂಖ್ಯೆ ಬೆಂಗಳೂರಿನಂಥ ನಗರಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನುವ ಆತಂಕದ ವರದಿ ಬಿಡುಗಡೆಯಾಗಿದೆ. ಇದಾಗಲೇ ಕೆಲವು ಪ್ರತಿಷ್ಠಿತ ಕಾಲೇಜುಗಳು ಡ್ರಗ್ಸ್ಗಾಗಿಯೇ ಕುಖ್ಯಾತಿ ಗಳಿಸಿವೆ. ಆದರೂ ಕಾಲೇಜುಗಳ ವರ್ಚಸ್ಸೇನೂ ಕಡಿಮೆಯಾಗಿಲ್ಲ. ಅದೇ ಇನ್ನೊಂದೆಡೆ, ತಮ್ಮ ದುಡಿಮೆ, ದುಡ್ಡು, ಖ್ಯಾತಿಯ ಹಿಂದೆ ಬೆನ್ನು ಬಿದ್ದಿರುವ ಅಪ್ಪ-ಅಮ್ಮನಿಗೆ ಮಕ್ಕಳ ಚಿಂತೆಯೇ ಇಲ್ಲ.
ದುಡಿಮೆಯ ಅನಿವಾರ್ಯತೆ ಒಂದೆಡೆಯಾದರೆ, ಮಕ್ಕಳನ್ನು ಎಷ್ಟೇ ಜೋಪಾನವಾಗಿ ನೋಡಿಕೊಂಡರೂ ಕಾಲೇಜುಗಳಲ್ಲಿ ಅವರು ಏನು ಮಾಡುತ್ತಾರೆ ಎಂದು ಕಂಡುಹಿಡಿಯುವುದು ಕೂಡ ಎಷ್ಟೋ ಪಾಲಕರಿಗೆ ಕಷ್ಟದ ಕೆಲಸವೇ ಆಗಿಬಿಟ್ಟಿದೆ. ಮನೆಯಲ್ಲಿ ಎಲ್ಲವೂ ಸರಿಯಿದೆ ಎಂದು ವರ್ತಿಸುವ ಮಕ್ಕಳು, ಮನೆಯಲ್ಲಿ ಸುಳ್ಳು ಹೇಳಿ ಹೊರಗಡೆ ಹೋಗಿ ಅಲ್ಲಿ ಬೇಡದ್ದನ್ನೆಲ್ಲಾ ಮಾಡುವ ಪ್ರಕ್ರಿಯೆಗಳು ಜಾಸ್ತಿಯಾಗುತ್ತಿವೆ. ಅದರಲ್ಲಿಯೂ ಹೆಚ್ಚಾಗಿ ಡ್ರಗ್ಸ್ ಮತ್ತು ಲೈಂಗಿಕತೆಯ ನಶೆಯ ಸುಳಿಯಲ್ಲಿ ಮಕ್ಕಳು ಸಿಲುಕುತ್ತಿದ್ದಾರೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿನ ಪಾಲಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂದು ಕಂಡುಹಿಡಿಯಲು ಖಾಸಗಿ ಪತ್ತೇದಾರಿಗಳನ್ನು ಆಶ್ರಯಿಸುತ್ತಿರುವುದು ಹೆಚ್ಚಾಗುತ್ತಿದೆ ಎಂದು ವವರದಿದಯಾಗಿದೆ.
ಎರಡು ವರ್ಷಗಳ ಪ್ರೀತಿ- ವಾಟ್ಸ್ಆ್ಯಪ್ ಮೂಲಕ ಮದ್ವೆ! 12ನೇ ಕ್ಲಾಸ್ ವಿದ್ಯಾರ್ಥಿಗಳ ಲವ್ ಸ್ಟೋರಿ ಕೇಳಿ...
ತಮ್ಮ ಹದಿಹರೆಯದ ಮಕ್ಕಳು ಮಾದಕ ದ್ರವ್ಯಗಳನ್ನು ಸೇವಿಸುತ್ತಿರಬಹುದು ಮತ್ತು ಲೈಂಗಿಕವಾಗಿ ಸಕ್ರಿಯರಾಗಿರಬಹುದು ಎಂಬ ಶಂಕೆ ಪಾಲಕರಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ, ಪೋಷಕರು ಇಬ್ಬರೂ ಕೆಲಸ ಮಾಡುತ್ತಿರುವ ಕುಟುಂಬಗಳಲ್ಲಿ ಸಂವಹನದ ಕೊರತೆಯಿಂದಾಗಿ ಮಕ್ಕಳು ಮತ್ತು ಪಾಲಕರ ಸಂಬಂಧ ದಿನೇ ದಿನೇ ಕ್ಷೀಣವಾಗುತ್ತಿದೆ. ಮಕ್ಕಳ ಮನಸ್ಸಿನಲ್ಲಿ ಏನಾಗುತ್ತಿದೆ, ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಅರಿಯುವಲ್ಲಿ ಪಾಲಕರು ವಿಫಲರಾಗುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಏನೋ ಒಂದು ತಪ್ಪುಹೆಜ್ಜೆಯ ವಾಸನೆ ಬರುತ್ತಿದ್ದಂತೆಯೇ ಪತ್ತೇದಾರರನ್ನು ಆಶ್ರಯಿಸುವುದು ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.
ಇಂದಿರಾನಗರದ ಲಿಂಕ್ಸ್ ಸೆಕ್ಯುರಿಟಿ ಮತ್ತು ಡಿಟೆಕ್ಟಿವ್ ಸರ್ವೀಸಸ್ ಒಂದರಲ್ಲಿಯೇ ವಾರ್ಷಿಕವಾಗಿ ಶೇಕಡಾ 15ರಷ್ಟು ಹೆಚ್ಚು ಮಂದಿ ಪಾಲಕರು ಬರುವುದಾಗಿ ಕಂಪೆನಿ ಹೇಳಿದೆ. ತಮ್ಮ ಸಂಸ್ಥೆಯು ಶೇಕಡಾ 99 ಮಕ್ಕಳ ಮೇಲ್ವಿಚಾರಣಾ ಪ್ರಕರಣಗಳಲ್ಲಿ ಮಾದಕ ದ್ರವ್ಯ ಸೇವನೆಯನ್ನು ಕಂಡುಹಿಡಿದಿರುವುದಾಗಿ ಇನ್ನೊಂದು ಸಂಸ್ಥೆ ಹೇಳಿಕೊಂಡಿದೆ. ಐಷಾರಾಮಿ ಸೌಲಭ್ಯ, ಕಾರು, ಆಲಂಕಾರಿಕ ಬಟ್ಟೆಗಳು... ಇಂಥ ಬಯಕೆಯು ಹದಿಹರೆಯದವರನ್ನು ತ್ವರಿತವಾಗಿ ಶ್ರೀಮಂತರಾಗಲು ಪ್ರೇರೇಪಿಸುತ್ತಿದೆ.ಇದರಿಂದಾಗಿ ಡ್ರಗ್ಸ್ ಮಾರಾಟದಲ್ಲಿ ತೊಡಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ಪತ್ತೆದಾರಿಗಳು.
ನಿಮ್ಮ ಮಕ್ಕಳು ಶಾಲೆಯಲ್ಲಿ ಎಷ್ಟು ಸೇಫ್? ಅವರಿಗಾಗಿ ಟೈಂ ಕೊಡ್ತಿದ್ದೀರಾ? ಸಾವಿನ ಹಾದಿ ತುಳಿದ ಈತನ ಕಥೆ ಕೇಳಿ...
