ಪಾಳು ಬಿದ್ದ ಮನೆಯಲ್ಲಿ ಬಚ್ಚಿಟ್ಟಿದ್ದ 1.23 ಕೋಟಿಯ ಗಾಂಜಾವನ್ನು ಡಿಜೆ ಹಳ್ಳಿ ಪೊಲೀಸರು ಜಪ್ತಿ ಮಾಡಿದ್ದು, ಆರೋಪಿಯಿಂದ 2 ಕ್ವಿಂಟಾಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು (ಮೇ.2): ನಗರದಲ್ಲಿ ಗಾಂಜಾ ದಂಧೆಯಲ್ಲಿ ತೊಡಗಿದ್ದ ಕುಖ್ಯಾತ ಪೆಡ್ಲರ್‌ವೊಬ್ಬನನ್ನು ಸೆರೆ ಹಿಡಿದು .1.23 ಕೋಟಿ ಮೌಲ್ಯದ ಗಾಂಜಾವನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಡಿ.ಜೆ.ಹಳ್ಳಿ ನಿವಾಸಿ ಸೈಯದ್ ತನ್ನು ಅಲಿಯಾಸ್ ಲಿಂಬು ಬಂಧಿತಾಗಿದ್ದು, ಆರೋಪಿಯಿಂದ 2.05 ಕಿಂಟ್ವಾಲ್ ಗಾಂಜಾ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಡಿ.ಜೆ.ಹಳ್ಳಿಯ ಸಕ್ಕರೆ ಮಂಡಿ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೈಯದ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಡ್ರಗ್ಸ್ ಮಾರಾಟ ಯತ್ನ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳುಗಳಿಂದ ಹಣದಾಸೆಗೆ ಗಾಂಜಾ ದಂಧೆಯಲ್ಲಿ ನಿರತನಾಗಿದ್ದ ಸೈಯದ್, ಆಂಧ್ರಪ್ರದೇಶದ ವಿಶಾಖಪಟ್ಟಣದ ಮಾದಕ ವಸ್ತು ಮಾರಾಟ ಜಾಲದ ಮೂಲಕ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ. ಬಳಿಕ ನಗರಕ್ಕೆ ತಂದು ಆ ಗಾಂಜಾವನ್ನು ದುಬಾರಿ ಮೌಲ್ಯಕ್ಕೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಕೆಲ ದಿನಗಳ ಹಿಂದೆ ಡಿ.ಜೆ.ಹಳ್ಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಆತನ ಸಹಚರ ಜೊಲ್ಲು ಇಮ್ರಾನ್ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಸೈಯದ್ ಬೆನ್ನುಹತ್ತಲಾಯಿತು. ಅಂತೆಯೇ ಸಕ್ಕರೆ ಮಂಡಿ ಬಳಿ ಗಾಂಜಾ ವಿಲೇವಾರಿಗೆ ಸಿದ್ದತೆ ನಡೆಸಿದ್ದಾಗ ಆರೋಪಿಯನ್ನು ಸೆರೆ ಹಿಡಿಯಲಾಯಿತು. ಬಳಿಕ ಡಿ.ಜೆ.ಹಳ್ಳಿಯಲ್ಲಿ ಪಾಳು ಬಿದ್ದ ಮನೆಯಲ್ಲಿ ಆತ ಸಂಗ್ರಹಿಸಿದ್ದ 205 ಕೆ.ಜಿ. ಗಾಂಜಾ ಜಪ್ತಿ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವ ಮುನಿರತ್ನ ವಿರುದ್ಧ ದೂರು: ಪಾಕಿಸ್ತಾನದ ಧ್ವಜವಿರುವ ವಿವಾದಾತ್ಮಕ ಕರಪತ್ರಗಳನ್ನು ಮುದ್ರಿಸಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿ ನಗರದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಮುನಿರತ್ನ ಮತ್ತು ಪಕ್ಷೇತರ ಅಭ್ಯರ್ಥಿ ಯಾರಬ್ ಸೇರಿದಂತೆ ಇತರರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಗೆ ಆ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಕುಸುಮಾ ಹನುಮಂತರಾಯಪ್ಪ ದೂರು ಸಲ್ಲಿಸಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತ ಹಾಕುವಂತೆ ಪಾಕಿಸ್ತಾನದ ಧ್ವಜವಿರುವ ಕರಪತ್ರಗಳನ್ನು ಮುದ್ರಿಸಿ ಪಕ್ಷೇತರ ಅಭ್ಯರ್ಥಿ ಯಾರಬ್ ಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿವಾದಾತ್ಮಕ ಕರಪತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಭಾವಚಿತ್ರಗಳನ್ನು ಸಹ ಬಳಸಲಾಗಿತ್ತು. ಇವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
