ಬೆಂಗಳೂರಿನ ಬಾಗಲಗುಂಟೆಯಲ್ಲಿ ಸಾಲ ತೀರಿಸಲು ಸಾಲದಾತರ ಮನೆಯಲ್ಲೇ ಕಳ್ಳತನ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಕುಖ್ಯಾತ ಕಳ್ಳ ಮೋರಿ ರಾಜ ಸೇರಿದಂತೆ 6 ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.17): ಕೈಸಾಲ ತೀರಿಸಲು ಸಾಲ ಕೊಟ್ಟವರ ಮನೆಯಲ್ಲೇ ಕಳ್ಳತನ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದ್ದು, ಬಾಗಲಗುಂಟೆ ಪೊಲೀಸರು ಕುಖ್ಯಾತ ಕಳ್ಳ ಮೋರಿ ರಾಜ ಸೇರಿದಂತೆ 6 ಆರೋಪಿಗಳನ್ನು ಬಂಧಿಸಿದ್ದಾರೆ. ವೆಂಕಟೇಶ್ ,ಕವಿತಾ, ಮೋರಿ ರಾಜ, ಹರೀಶ್,

ನಾಗರಾಜ್ ಹಾಗೂ ಪ್ರತಾಪ್ ಬಂಧಿತ ಆರೋಪಿಗಳು

ಹೇಳಿಕೊಳ್ಳೋಕೆ ಯಾವುದೇ ಕೆಲಸ ಇಲ್ಲದಿದ್ರು ಮೈತುಂಬಾ ಸಾಲ ಮಾಡಿಕೊಂಡಿದ್ದ ಕವಿತಾ. ಕೈಸಾಲ ತೀರಿಸಲು ಆಗದೇ ಹೋಟೆಲ್ ಉದ್ಯಮಿ ಮಂಗಳ ಎಂಬುವವರು ಬಳಿ ಸಾಲ ತೀರಿಸಲು ಹಣ ಕೊಡುವಂತೆ ಕೇಳಿದ್ದ ಕಳ್ಳೀ. ಸ್ನೇಹ ಧಮ್ ಬಿರಿಯಾನಿ ಹೆಸರಿನ ಹೋಟೆಲ್ ನಡೆಸುತ್ತಿದ್ದ ಮಂಗಳ, ಪಾಪ ಬಡವರು ಸಾಲ ತೀರಿಸಲಿ ಎಂದು ಹಣ ನೀಡಿದ್ದರು. ಸಾಲ ಕೊಟ್ಟಿರುವುದಕ್ಕೆ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ ಮಂಗಳ. ಹಣ ತೆಗೆದುಕೊಂಡು ಹೋದ ಕವಿತಾ ಹಣ ವಾಪಸ್ ಮಾಡಿಲ್ಲ. ಕೆಲಸ ಕಾರ್ಯವಿಲ್ಲದ ತಿರುಗುತ್ತಿದ್ದ ಕವಿತಾ, ಸಾಲ ತೀರಿಸುವ ಬದಲು ಮಂಗಳರ ಮನೆಯಲ್ಲಿ ಕಳ್ಳತನಕ್ಕೆ ಯೋಜನೆ ರೂಪಿಸಿದ್ದಳು.

ಕವಿತಾ ತನ್ನ ಅಣ್ಣ ವೆಂಕಟೇಶ್ ಜೊತೆ ಸೇರಿ ಕಳ್ಳತನದ ಕೃತ್ಯಕ್ಕೆ ಸಂಚು ರೂಪಿಸಿದ್ದಳು. ಅಣ್ಣ ವೆಂಕಟೇಶ್‌ಗೆ ಕುಖ್ಯಾತ ಕಳ್ಳ ಮೋರಿ ರಾಜನ ಪರಿಚಯವಿತ್ತು. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಮೋರಿ ರಾಜನ ವಿರುದ್ಧ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ಆತ ತನ್ನ ಸಹಚರರಾದ ಹರೀಶ್, ನಾಗರಾಜ್ ಮತ್ತು ಪ್ರತಾಪ್ ಜೊತೆ ಸೇರಿ ಮಂಗಳ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

ಈ ಘಟನೆ ಸಂಬಂಧ ಮಂಗಳ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಕವಿತಾ, ವೆಂಕಟೇಶ್, ಮೋರಿ ರಾಜ, ಹರೀಶ್, ನಾಗರಾಜ್ ಮತ್ತು ಪ್ರತಾಪ್‌ರನ್ನು ಬಂಧಿಸಿದ್ದಾರೆ. ಬಂಧಿತರಿಂದ 9.9 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ