Bengaluru: ಚಿಂದಿ ಆಯುವಾಗ ಬೀಗ ಹಾಕಿದ ಮನೆ ಗುರುತಿಸಿ ರಾತ್ರಿ ಕಳ್ಳತನ: ಇಬ್ಬರ ಬಂಧನ
ಹಗಲಿನಲ್ಲಿ ಚಿಂದಿ ಆಯುವಾಗ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.31): ಹಗಲಿನಲ್ಲಿ ಚಿಂದಿ ಆಯುವಾಗ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಅಲ್ ಮುಜೀರ್ ಮುಲ್ಲಾ(20) ಮತ್ತು ಮೊಹಮ್ಮದ್ ಶರೀಫ್(22) ಬಂಧಿತರು. ಆರೋಪಿಗಳಿಂದ 5.81 ಲಕ್ಷ ರು. ಮೌಲ್ಯದ 75 ಗ್ರಾಂ ಚಿನ್ನಾಭರಣ, 4 ವಾಚ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಮನೆಯೊಂದರ ಬೀಗ ಮುರಿದು ಕಳ್ಳವು ಮಾಡಲಾಗಿತ್ತು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ದಾಖಲಾದ ಬೆನ್ನಲ್ಲೇ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಆಧರಿಸಿ ವರ್ತೂರು ಬಳಿಯ ಸೋರಹುಣಸೆ ಗ್ರಾಮದ ದೇವಸ್ಥಾನದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾವೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮುಂದುವರೆದ ತನಿಖೆಯಲ್ಲಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸೋರಹುಣಸೆ ಶೆಡ್‌ವೊಂದರಲ್ಲಿ ಇರಿಸಿದ್ದ 75 ಗ್ರಾಂ ಚಿನ್ನಾಭರಣ, 4 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ.
ತಂಗಿಯ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಅಕ್ಕನ ಬಂಧನ: 74 ಗ್ರಾಂ ಚಿನ್ನ, 354 ಗ್ರಾಂ ಬೆಳ್ಳಿ ಜಪ್ತಿ
ಚಿಂದಿ ಆಯುವಾಗ ಬೀಗ ಹಾಕಿದ ಮನೆಗಳ ಗುರುತು: ಪಶ್ಚಿಮ ಬಂಗಾಳ ಮೂಲದ ಆರೋಪಿಗಳು ಕಳೆದ 4 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ವರ್ತೂರು ಸಮೀಪದ ಸೋರಹುಣಸೆ ಮಾರಮ್ಮ ದೇವಸ್ಥಾನದ ಬಳಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಚಿಂದಿ ಹೆಕ್ಕುವ ಕೆಲಸ ಮಾಡುವ ಆರೋಪಿಗಳು, ಹಗಲಿನಲ್ಲಿ ಚಿಂದಿ ಹೆಕ್ಕಿಕೊಂಡು ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಆ ಮನೆಗಳಿಗೆ ತೆರಳಿ ಬೀಗ ಮರಿದು ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಮನೆಗಳವು ಮತ್ತು ಬೆಳ್ಳಂದೂರು ಠಾಣೆ ಬೈಕ್ ಕಳವು ಪ್ರಕರಣ ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.