*  ಅಣ್ಣಾಬಾಂಡ್‌ ಚಿತ್ರದಲ್ಲಿ ಅಭಿನಯಿಸಿದ್ದ*  ನೈಜೀರಿಯಾ ನಟ ಡ್ರಗ್‌ ಕೇಸ್‌ನಲ್ಲಿ ಸೆರೆ*  ನಟ ಮಲ್ವಿನ್‌ ಬಂಧನ, 8 ಲಕ್ಷದ ಡ್ರಗ್‌ ವಶ 

ಬೆಂಗಳೂರು(ಸೆ.30):  ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಆರೋಪದ ಮೇರೆಗೆ ವಿವಿಧ ಭಾಷೆಗಳ ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ನೈಜೀರಿಯಾ(Nigeria) ಮೂಲದ ನಟನೊಬ್ಬ ಕೆ.ಜಿ.ಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

"

ಅವಲಹಳ್ಳಿ ಸಮೀಪ ನಿವಾಸಿ ಚೆಕ್ವೆಮೆ ಮಲ್ವಿನ್‌ ಬಂಧಿತನಾಗಿದ್ದು, ಆರೋಪಿಯಿಂದ 15 ಗ್ರಾಂ ಎಂಡಿಎಂಎ, 250 ಎಂಎಲ್‌ ಹ್ಯಾಶಿಸ್‌ ಆಯಿಲ್‌ ಸೇರಿದಂತೆ 8 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಎಚ್‌ಬಿಆರ್‌ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಡ್ರಗ್ಸ್‌ ಮಾರಾಟಕ್ಕೆ(Drugs Case) ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಶಾಂಪೇನ್‌ ಬಾಟಲ್‌ನಲ್ಲಿತ್ತು 2.5 ಕೋಟಿ ಡ್ರಗ್‌..!

ಹಣದಾಸೆಗೆ ಪೆಡ್ಲರ್‌ ಆದ ನಟ:

ಮೆಡಿಕಲ್‌ ವೀಸಾದಡಿಯಲ್ಲಿ ಭಾರತಕ್ಕೆ ಬಂದಿದ್ದ ಮಲ್ವಿನ್‌, ಮೊದಲು ಎರಡು ತಿಂಗಳು ಮುಂಬೈಯಲ್ಲಿರುವ ನ್ಯೂಯಾರ್ಕ್ ಫಿಲ್ಮ್‌ ಅಕಾಡೆಮಿಯಲ್ಲಿ (ಎನ್‌ವೈಎಫ್‌ಎ) ನಟನೆ ತರಬೇತಿ ಪಡೆದಿದ್ದ. ನೈಜೀರಿಯಾದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿದ್ದ(Actor). ಭಾರತಕ್ಕೆ(India0 ಬಂದ ನಂತರ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳ ಸೇರಿದಂತೆ 20 ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದ. ಅದರಲ್ಲೂ ತಮಿಳಿನ ಸಿಂಗಂ 2, ವಿಶ್ವರೂಪಂ, ಕನ್ನಡದ ಅಣ್ಣಾಬಾಂಡ್‌, ದಿಲ್‌ವಾಲೆ, ಜಂಬೂ ಸವಾರಿ ಹಾಗೂ ಪರಮಾತ್ಮ ಸಿನಿಮಾಗಳಲ್ಲಿ ಮಲ್ವಿನ್‌ ಸಹನಟನಾಗಿ ಬಣ್ಣ ಹಚ್ಚಿದ್ದ. ಆದರೆ ಹಣದಾಸೆಯಿಂದ ಡ್ರಗ್ಸ್‌ ದಂಧೆಗಿಳಿದಿದ್ದ. ಈಗ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಮಲ್ವಿನ್‌ ಸಂಪರ್ಕದಲ್ಲಿದ್ದವರ ಹುಡುಕಾಟ:

ನೈಜೀರಿಯಾ ಪೆಡ್ಲರ್‌ಗಳಿಂದ ಡ್ರಗ್ಸ್‌ ಖರೀದಿಸಿ ಬಳಿಕ ಮಲ್ವಿನ್‌ ಮಾರಾಟ ಮಾಡುತ್ತಿದ್ದ. ಹಲವು ದಿನಗಳಿಂದ ಆತ ದಂಧೆ ನಡೆಸಿದ್ದು, ಇದೇ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದಾನೆ. ಮಲ್ವಿನ್‌ ಜತೆ ಸಂಪರ್ಕದಲ್ಲಿದ್ದವರಿಗೆ ಹುಡುಕಾಟ ನಡೆದಿದೆ. ವಿಚಾರಣೆ ವೇಳೆ ಆತ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸರು(Police) ಹೇಳಿದ್ದಾರೆ.