ಆಕ್ಸಿಜನ್ ಇಲ್ಲದ 108: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು
ಆಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಇಲ್ಲದೇ ಸಾವನಪ್ಪಿದ ನವಜಾತ ಶಿಶು
ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು
ವಚನ್ನಗಿರಿ ತಾಲೂಕಿನ ಬಸವಾಪಟ್ಟಣ ಆಸ್ಪತ್ರೆಯಲ್ಲಿ ಘಟನೆ
ದಾವಣಗೆರೆ, (ಏ.09) : ಆಂಬ್ಯುಲೆನ್ಸ್ ನಲ್ಲಿ ಅಕ್ಸಿಜನ್ ಇಲ್ಲದ ಹಿನ್ನಲೆ ನವಜಾತ ಶಿಶು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ವಚನ್ನಗಿರಿ ತಾಲೂಕಿನ ಬಸವಾಪಟ್ಟಣ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು ಆಸ್ಪತ್ರೆ ವೈದ್ಯರು ಸಿಬ್ಬಂದಿ ವಿರುದ್ದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೃಂಗಾರಬಾಬುತಾಂಡದ ಹಾಲೇಶ್ ನಾಯ್ಕ್, ಸ್ವಾತಿ ದಂಪತಿಗಳ ಇಂದು ಮೊದಲ ಮಗು ಸಾವನ್ನಪ್ಪಿದ್ದು ಪೋಷಕರು ದುಃಖ ಹೇಳತೀರಾಗಿದೆ. ಕಳೆದ ರಾತ್ರಿ 2 ಗಂಟೆಗೆ ಗರ್ಭಿಣಿ ಸ್ವಾತಿಯವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.ತಕ್ಷಣ ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಹೆರಿಗೆಯಾಗಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೆಚ್ಚಿನ ಚಿಕಿತ್ಸೆ ಗೆ ಹೊನ್ನಾಳಿ ಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಬಸವಪಟ್ಟಣ ಪಿಹೆಚ್ ಸಿ ಆಂಬ್ಯುಲೆನ್ಸ್ ನಲ್ಲಿ ಅಕ್ಸಿಜನ್ ಇಲ್ಲ, ಬೇರೊಂದು ಅಂಬುಲೆನ್ಸ್ ದಾರಿ ಮಧ್ಯೆ ಬರುತ್ತದೆ ಎಂದು ಚಾಲಕ ಕರೆದೊಯ್ದಿದ್ದಾನೆ. ಅಂಬುಲೆನ್ಸ್ ಹೊನ್ನಾಳಿ ಗೆ ಹೋಗುವುದರೊಳಗೆ ಉಸಿರಾಟದ ತೊಂದರೆಯಾಗಿ ಮಗು ಕೊನೆಯುಸಿರೆಳೆದಿದೆ. ಇದರಿಂದ ಆಕ್ರೋಶಗೊಂಡ ಮಗುವಿನ ಪೋಷಕರು , ಸಂಬಂಧಿಗಳು ಆ ಗ್ರಾಮಸ್ಥರು ಆಸ್ಪತ್ರೆ ಬಳಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ಮಾಡಿದ ಪೋಷಕರು ಆಸ್ಪತ್ರೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಗು ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ. ಸರಿಯಾದ ಸಮಯದಲ್ಲಿ ಆಕ್ಸಿಜನ್ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು. ಪೋಷಕರ ಜೊತೆ ಆ ಊರಿನ ಗ್ರಾಮಸ್ಥರು ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದಾರೆ.
THO, DHO ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೋಷಕರು
ಟಿಹೆಚ್ಒ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮಗು ಸಂಬಂಧಿಕರು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ. ಸರಿಯಾದ ಸಮಯಕ್ಕೆ 108 ಆಂಬ್ಯುಲೆನ್ಸ್ ಬರುತ್ತಿಲ್ಲ. ಇದ್ದ ಅಂಬುಲೆನ್ಸ್ ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಡಿಹೆಚ್ಓ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರ ಪಟ್ಟು ಹಿಡಿದು ಎರಡು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ನಂತರ ಬಸವಪಟ್ಟಣ ಸ್ಟೇಷನ್ ಗೆ ಪೋಷಕರು ದೂರು ನೀಡಿದ್ದಾರೆ.