ಬೆಂಗಳೂರು: ಬೀಗ ಹಾಕಿದ ಮನೆಗಳಲ್ಲಿ ಚಿನ್ನ ದೋಚುತ್ತಿದ್ದ ನೇಪಾಳಿ ಗ್ಯಾಂಗ್
35 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ, ಐವರ ಬಂಧನ, 2017ರಿಂದಲೂ ಸುಲಭವಾಗಿ ಹಣ ಸಂಪಾದಿಸಲು ಕಳ್ಳತನ ಮಾಡುತ್ತಿದ್ದ ನೇಪಾಳಿಗಳು.
ಬೆಂಗಳೂರು(ಏ.01): ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ‘ನೇಪಾಳಿ ಗ್ಯಾಂಗ್’ವೊಂದನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ನೇಪಾಳ ದೇಶದ ಮೋಹನ್ ಬಿಸ್ವಕರ್ಮ ಅಲಿಯಾಸ್ ಮೋಹನ್ ಸಿಂಗ್, ಜನಕ್ ಜೈಶಿ ಅಲಿಯಾಸ್ ಜನಕ್ ಜೋಶಿ, ಬಿಬೇಕ್ ರಾಜ್ ದೇವಕೂಟ, ಸೀತರಾಮ್ ಜೈಸಿ ಹಾಗೂ ಕಮಲ ಬಿಕೆ ಅಲಿಯಾಸ್ ಕಮಲ ಸಿಂಗ್ ಬಂಧಿತರಾಗಿದ್ದು, ಆರೋಪಿಗಳಿಂದ ಚಿನ್ನ, ಬೆಳ್ಳಿ ಹಾಗೂ ಬೈಕ್ ಸೇರಿದಂತೆ .35.80 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಮಾ.3ರಂದು ಎಎಂಎಸ್ ಬಡಾವಣೆ ನಿವಾಸಿ ನಂದನ್ ಕುಮಾರ್ ಮನೆ ಬೀಗ ಮುರಿದು 989.58 ಗ್ರಾಂ ತೂಕದ ಚಿನ್ನಾಭರಣ ಹಾಗೂ 6.5 ಕೇಜಿ ಬೆಳ್ಳಿ ವಸ್ತುಗಳನ್ನು ಕಿಡಿಗೇಡಿಗಳು ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ವಸಂತ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಕೆ.ಎಲ್.ಪ್ರಭು ಹಾಗೂ ಹನಮಂತ ಉಪ್ಪಾರ ತಂಡವು, ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ನೇಪಾಳಿ ಗ್ಯಾಂಗನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು: ಯುವತಿಯ ಮೇಲೆ ನಾಲ್ವರು ಕಾಮುಕರಿಂದ ಗ್ಯಾಂಗ್ ರೇಪ್, ಬೆಚ್ಚಿಬಿದ್ದ ಸಿಲಿಕಾನ್ ಸಿಟಿ..!
ಕಳ್ಳತನಕ್ಕಾಗಿಯೇ ಬರುತ್ತಿದ್ದ ತಂಡ
ಈ ಐವರು ಆರೋಪಿಗಳು ವೃತ್ತಿಪರ ಖದೀಮರಾಗಿದ್ದು, ಇವರ ಮೇಲೆ ಮಹಾರಾಷ್ಟ್ರ ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. 2017ರಿಂದ ಹಲವು ಬಾರಿ ಮನೆಗಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿ ಬಳಿಕ ಜಾಮೀನು ಪಡೆದು ಹೊರ ಬಂದು ಆರೋಪಿಗಳು ದುಷ್ಕೃತ್ಯ ಮುಂದುವರೆಸಿದ್ದರು. ಸುಲಭವಾಗಿ ಹಣ ಸಂಪಾದನೆ ಮನೆಗಳಿಗೆ ಕನ್ನ ಹಾಕುವುದನ್ನು ವೃತ್ತಿಯಾಗಿಸಿಕೊಂಡಿದ್ದ ಈ ನೇಪಾಳಿ ಗ್ಯಾಂಗ್, ಕಳ್ಳತನ ಸಲುವಾಗಿಯೇ ನೇಪಾಳ ದೇಶದಿಂದ ಭಾರತದ ಪ್ರಮುಖ ನಗರಗಳಿಗೆ ಬರುತ್ತಿತ್ತು. ಹಗಲು ಹೊತ್ತಿನಲ್ಲಿ ಜನ ವಸತಿ ಪ್ರದೇಶದಲ್ಲಿ ಸಂಚಾರ ನಡೆಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಇರುಳಿನಲ್ಲಿ ಕನ್ನ ಹಾಕುತ್ತಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ವಿದ್ಯಾರಣ್ಯಪುರದ ನಂದನ್ ಕುಮಾರ್ ಮನೆಗೆ ಕನ್ನ ಹಾಕಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಂದು ಕೆಲಸದ ನಿಮಿತ್ತ ತಮ್ಮ ಕುಟುಂಬದ ಜತೆ ದೊಡ್ಡಬಳ್ಳಾಪುರಕ್ಕೆ ನಂದನ್ ತೆರಳಿದ್ದರು. ಆ ವೇಳೆ ಅವರ ಮನೆಗೆ ಬೀಗ ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಆರೋಪಿಗಳ ಬಂಧನದಿಂದ ಮುಂಬೈನ್ ಚಾರ್‌ಕೋಪ್, ಬೆಂಗಳೂರಿನ ಮಹದೇವಪುರ, ಆರ್.ಟಿ.ನಗರ, ಕೋರಮಂಗಲ, ಯಲಹಂಕ ಉಪನಗರ, ವಿದ್ಯಾರಣ್ಯಪುರ ಠಾಣೆಗಳಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.