ಬೆಂಗಳೂರು(ಸೆ.28): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರ ಜಾಮೀನು ಅರ್ಜಿಗಳ ತೀರ್ಪನ್ನು ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ ಇಂದು(ಸೋಮವಾರ) ಪ್ರಕಟಿಸಲಿದೆ.

ರಾಗಿಣಿ ಮತ್ತು ಸಂಜನಾ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕಳೆದ ಶುಕ್ರವಾರ (ಸೆ.25) ಪೂರ್ಣಗೊಳಿಸಿರುವ ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಂ.ಸೀನಪ್ಪ ಅವರು ಸೋಮವಾರ ತೀರ್ಪು ಪ್ರಕಟಿಸಲಿದ್ದಾರೆ.

ಅಕ್ರಮ ಹಣ ವರ್ಗಾವಣೆ: ರಾಗಿಣಿ, ಸಂಜನಾಗೆ ಇ.ಡಿ. ಗ್ರಿಲ್..!

ಇದೇ ವೇಳೆ ಪ್ರಕರಣದ ಇತರೆ ಆರೋಪಿಗಳಾದ ಶಿವಪ್ರಕಾಶ್‌ ಮತ್ತು ವಿನಯ್‌ ಕುಮಾರ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮತ್ತೋರ್ವ ಆರೋಪಿ ರಾಹುಲ್‌ ತೋನ್ಸೆಯ ಜಾಮೀನು ಅರ್ಜಿಯ ತೀರ್ಪನ್ನು ಸಹ ನ್ಯಾಯಾಲಯ ಪ್ರಕಟಿಸಲಿದೆ.

ಇದರೊಂದಿಗೆ ಹಲವು ದಿನಗಳಿಂದ ಜೈಲು ವಾಸ ಮಾಡುತ್ತಿರುವ ರಾಗಿಣಿ ಮತ್ತು ಸಂಜನಾ ಅವರ ಜಾಮೀನು ಭವಿಷ್ಯ ಸೋಮವಾರ ತೀರ್ಮಾನವಾಗಲಿದೆ. ಒಂದೊಮ್ಮೆ ನ್ಯಾಯಾಲಯ ಜಾಮೀನು ಮಂಜೂರು ಮಾಡದೆ ಹೋದರೆ ಜೈಲು ವಾಸ ಮುಂದುವರೆಯುತ್ತದೆ. ನಂತರ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.