Asianet Suvarna News Asianet Suvarna News

ಕಾರವಾರ: ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟ ಯುವತಿ ನಿಗೂಢ ಕಣ್ಮರೆ ಪ್ರಕರಣ

ಯವತಿಯ ಗೆಳೆಯರ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವ ಆಕೆಯ ಪೋಷಕರು ನಮ್ಮ ಮಗಳನ್ನು ಒಂದೋ ಕಿಡ್ನ್ಯಾಪ್ ಮಾಡಲಾಗಿದೆ, ಇಲ್ಲವೇ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Mysterious Disappearance Young Woman Caused Many Doubts in Karwar grg
Author
Bengaluru, First Published Aug 17, 2022, 10:56 AM IST

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಆ.17): ಅವಳು ಜುಲೈ 30ರಂದು ಗೆಳೆಯರ ಜತೆ ಜಲಪಾತ ವೀಕ್ಷಣೆ ಮಾಡಲು ತೆರಳಿದ್ದಳು. ಆದರೆ, ಸ್ಥಳದಲ್ಲಿ ಅದೇನಾಯ್ತೋ ಏನೋ ಜಲಪಾತದಲ್ಲಿ ಆಕೆ ನೀರಿಗೆ ಬಿದ್ದು ಮುಳುಗಿ ಹೋದಳು ಎಂದು ಆಕೆಯ ಗೆಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಕಾಣೆಯಾಗಿ ಇಷ್ಟು‌ ದಿನವಾದ್ರೂ ಆಕೆಯ ಸುಳಿವೂ ದೊರಕಿಲ್ಲ, ಮೃತದೇಹವೂ ಸಿಕ್ಕಿಲ್ಲ. ಯವತಿಯ ಗೆಳೆಯರ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವ ಆಕೆಯ ಪೋಷಕರು ನಮ್ಮ ಮಗಳನ್ನು ಒಂದೋ ಕಿಡ್ನ್ಯಾಪ್ ಮಾಡಲಾಗಿದೆ, ಇಲ್ಲವೇ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

ಹೌದು, ಹಲವು ದಿನಗಳ ಹಿಂದೆ ಶಿವಗಂಗಾ ಜಲಪಾತದಲ್ಲಿ ಬಿದ್ದು ಮುಳುಗಿ ಹೋದಳು ಎನ್ನಲಾದ ಯುವತಿಯ ಸುಳಿವು ಅಥವಾ ಮೃತದೇಹ ಈವರೆಗೂ ದೊರಕದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.‌‌ ಉತ್ತರಕನ್ನಡ ಜಿಲ್ಲೆಯ ಕುಮಟಾ ಕಸಗೆಯ ನಿವಾಸಿಗಳಾದ ಮಾದೇವ ರಾಮ ಅಂಬಿಗ ಹಾಗೂ ಕೇಶಿ ಮಾದೇವ ಅಂಬಿಗ ಅವರ ಎರಡನೇ ಪುತ್ರಿ ತ್ರಿವೇಣಿ ಅಂಬಿಗ (19) ಕಾಣೆಯಾಗಿರುವ ಪ್ರಕರಣ ಹಲವು ಸವಾಲುಗಳನ್ನು ಮುಂದಿರಿಸಿದೆ. 

1,000 ಕೋಟಿ ರೂ. ಮೌಲ್ಯದ ಮಿಯಾಂವ್ ಮಿಯಾಂವ್ ಡ್ರಗ್ಸ್ ವಶಪಡಿಸಿಕೋಮಡ ಗುಜರಾತ್‌ ಎಟಿಎಸ್‌

ಸಿದ್ಧಾಪುರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿನಿಯಾಗಿದ್ದ ತ್ರಿವೇಣಿ, ಜುಲೈ 30ರಂದು ಬೆಳಗ್ಗೆ ಪೋಷಕರಿಗೆ ಕರೆ ಮಾಡಿ ಗೆಳೆಯರ ಜತೆ ಉಂಚಳ್ಳಿ ಜಲಪಾತಕ್ಕೆ ಹೋಗುತ್ತೇವೆ ಎಂದು ಹೇಳಿದ್ದಳು. ಪೋಷಕರು ಪ್ರಾರಂಭದಲ್ಲಿ ಬೇಡವೆಂದರೂ ಬಳಿಕ ಮಗಳ ಒತ್ತಾಯಕ್ಕೆ ಜಾಗ್ರತೆಯಾಗಿ ಹೋಗಿ ಬಾ ಎಂದು ಅನುಮತಿ ನೀಡಿದ್ದರು. ಮಧ್ಯಾಹ್ನ 12.30ಕ್ಕೆ ಪೋಷಕರು ಕರೆ ಮಾಡಿದ್ದಾಗ ಯುವತಿಯ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಪೋಷಕರ ಅನುಮತಿ ಕೋರಿ ಹೋಗಿದ್ದ ಯುವತಿ ಅದಾಗಲೇ ನಾಪತ್ತೆಯಾಗಿದ್ದಳು. ಮರುದಿನ ಸಿದ್ಧಾಪುರ ಪೊಲೀಸ್ ಠಾಣೆಯಿಂದ ಯುವತಿಯ ಪೋಷಕರಿಗೆ ಕರೆ ಬಂದಿದ್ದು, ತ್ರಿವೇಣಿಯ ಗೆಳೆಯರು ನೀಡಿದ ದೂರಿನ ಪ್ರಕಾರ ಆಕೆ ಶಿವಗಂಗಾ ಜಲಪಾತದಲ್ಲಿ ನೀರಿಗೆ ಬಿದ್ದು ಮುಳುಗಿದ್ದಾಳೆ ಹೇಳಿದ್ದಾರೆ. 

ಪೊಲೀಸರಿಂದ ವಿಷಯ ತಿಳಿದ ಕೂಡಲೇ ಮಾದೇವ ಕುಟುಂಬದ ದುಃಖದ ಕಟ್ಟೆ ಒಡೆದಿದ್ದು, ತಕ್ಷಣ ಪೊಲೀಸರು ನೀಡಿದ ಮಾಹಿತಿಯನ್ವಯ ಶಿವಗಂಗಾ ಜಲಪಾತದತ್ತ ಧಾವಿಸಿದ್ದಾರೆ. ಅಂದು ರಾತ್ರಿಯಿಂದ ಬೆಳಗ್ಗಿನವರೆಗೆ ನಡೆದ ಹುಡುಕಾಟದಲ್ಲಿ ಯಾವುದೇ ಸುಳಿವು ದೊರಕಿರಲಿಲ್ಲ.‌ ಘಟನೆ ದಿನದ ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಾಯದ ಮೂಲಕ ಸುಮಾರು 20 ಕಿ.ಮೀ.‌ವ್ಯಾಪ್ತಿಯಲ್ಲಿ ಹುಡುಕಾಡಿದರೂ ಈವರೆಗೆ ಯುವತಿಯ ಯಾವುದೇ ಸುಳಿವಾಗಲೀ, ಅಥವಾ ಆಕೆಯ ಮೃತದೇಹವಾಗಲೀ ಈವರೆಗೆ ಸಿಕ್ಕಿಲ್ಲ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಪುತ್ರನೂ ಇರೋದ್ರಿಂದ ಪೊಲೀಸರೇ ಸರಿಯಾಗಿ ತನಿಖೆ ನಡೆಸದೇ ಮುಚ್ಚಿ ಹಾಕಲು ಯತ್ನ ನಡೆಸುತ್ತಿದ್ದಾರೆ ಅನ್ನೋ ಆರೋಪಗಳೂ ಕೇಳಿಬರುತ್ತಿದೆ. ಇವೆಲ್ಲದರ ನಡುವೆ ತನ್ನ ಮಗಳನ್ನು ಹೇಗಾದರೂ ಮಾಡಿ ಕರೆತನ್ನಿ ಎಂದು ತ್ರಿವೇಣಿ ತಾಯಿ ಕಣ್ಣೀರು ಹಾಕಿದ್ದಾರೆ.

ಅಂದಹಾಗೆ, ಯುವತಿ ಮುಳುಗಿದ್ದಾಳೆ ಎನ್ನಲಾದ ಸ್ಥಳಕ್ಕೆ ಹೋಗಿದ್ದ ಪೊಲೀಸರು ನೀರಿನ ಒಳಗೆ ಮುಳುಗದೆ ಮೇಲಿಂದ ಮೇಲೆ ಮಾತ್ರ ಹುಡುಕಾಡಿದ್ದಾರೆ. ಕೋತಿ ಮಂಜನ ತಂಡವನ್ನು ಕೂಡಾ ಕರೆಯಿಸಿದ್ದರಾದ್ರೂ ನೀರಿನಲ್ಲಿ ಅಂಡರ್ ಕರೆಂಟ್ ಇದೆ ಹಾಗೂ ಕೆಸರುಮಯವಾಗಿದೆ ಎಂದು ಕೋತಿ ಮಂಜ ತಂಡ ಕೂಡಾ ಮುಳುಗಿರಲಿಲ್ಲ. ನಂತರದ ದಿನಗಳಲ್ಲೂ ಪೊಲೀಸರು ನೀರಿನ ಒಳಗಡೆ ಮುಳುಗಿ ಹುಡುಕಾಡದೇ ಮೇಲಿಂದ ಮೇಲೆ ಮಾತ್ರ ಹುಡುಕಾಟ ನಡೆಸಿದ್ದಾರೆ ಎಂದು ಪೋಷಕರು ದೂರಿದ್ದಾರೆ. 

ಇನ್ನು ಯುವತಿ ತನ್ನದೇ ತರಗತಿಯ ವಿದ್ಯಾರ್ಥಿಗಳ‌ ಜತೆ ಶಿವಗಂಗಾ ಜಲಪಾತಕ್ಕೆ ಹೋಗಿದ್ದಳಂತೆ. ಪ್ರಾರಂಭದಲ್ಲಿ ಉಂಚಳ್ಳಿ ಜಲಪಾತಕ್ಕೆ ಎಂದಿದ್ದರಿಂದ ಯುವತಿ ಕೂಡಾ ಅದನ್ನೇ ಪೋಷಕರ ಬಳಿ ತಿಳಿಸಿದ್ದಳು. ತ್ರಿವೇಣಿ ಸೇರಿ ತರಗತಿಯ ಇಬ್ಬರು ಯುವತಿಯರು ಹಾಗೂ ಪೊಲೀಸ್ ಅಧಿಕಾರಿಯ ಪುತ್ರ ಸರ್ಫರಾಜ್, ಶ್ರೀಪಾದ ಹಾಗೂ ಇನ್ನೋರ್ವ ಯುವಕ ಸೇರಿ 6 ಮಂದಿ ತೆರಳಿದ್ದರು. ಖುದ್ದಾಗಿ ಶ್ರೀಪಾದ ಎಂಬಾತನೇ ತ್ರಿವೇಣಿಯನ್ನು ಬೈಕ್‌ನಲ್ಲಿ ಕೂರಿಸಿ ಉಳಿದ ಗೆಳೆಯರ ಜತೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ದುರ್ಘಟನೆಯ ಬಳಿಕ ಯುವತಿಯ ಪೋಷಕರು ಜಲಪಾತದತ್ತ ತೆರಳಿದ ಪುತ್ರಿಯ ಸಹಪಾಠಿಗಳಲ್ಲಿ ಏನಾಯ್ತು ಎಂದು ಕೇಳಿದಾಗ ಅವರು ತಡಬಡಾಯಿಸಿ ಕ್ಷಣಕ್ಕೊಂದು ಉತ್ತರ ನೀಡಿದ್ದಾರೆ. ಪ್ರಾರಂಭದಲ್ಲಿ ಕೇಳೋವಾಗ ವಿದ್ಯಾರ್ಥಿಗಳು ಮೊದಲು ತ್ರಿವೇಣಿ ಬಿದ್ದದ್ದು ನೋಡಿಲ್ಲ, ಪ್ರವಾಸಿಗರು ಮಾತ್ರ ನೋಡಿದ್ದಾಗಿ ತಿಳಿಸಿದ್ದರು. 

₹500 ಸಾಲ ಕೊಡಲು ನಕಾರ: ತಲೆ ಕಡಿದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಸ್ನೇಹಿತ

ಎರಡನೇ ಬಾರಿ ಕೇಳಿದಾಗ ನಾವು ಮೂರು ಮೂರು ಜನ ಕೈ- ಕೈ ಹಿಡಿದುಕೊಂಡು ಹೋಗಿದ್ದೆವು ಎಂದು ಹೇಳಿದ್ರು. ಮೂರನೇ ಬಾರಿಗೆ ಯುವತಿ ನೀರಿನಲ್ಲಿ ನಮ್ಮ ಎದುರೇ ಬಿದ್ದಿದ್ದಾಳೆ ಎಂದು ಹೇಳಿದ್ದಾರೆ. ಇದರಿಂದ ಯುವತಿಯ‌ ಸಹಪಾಠಿಗಳ ಮೇಲೆ ಸಂಶಯ ಮೂಡಿದ್ದು, ಅವರ ಮೇಲೆ ಪ್ರಕರಣ ದಾಖಲಿಸುವಂತೆ ತ್ರಿವೇಣಿ ಪೋಷಕರು ಒತ್ತಾಯಿಸಿದ್ದಾರೆ. ಆದರೆ, ಪೊಲೀಸರು ಮಾತ್ರ ಇದಕ್ಕೆ ಹಿಂದೇಟು ಹಾಕಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ನನ್ನ ಮಗಳನ್ನು ಒಂದೋ ಕಿಡ್ನ್ಯಾಪ್ ಮಾಡಿದ್ದಾರೆ, ಇಲ್ಲವೇ, ಮರ್ಡರ್ ಮಾಡಿದ್ದಾರೆ ಅನ್ನೋದು ನಮ್ಮ ಸಂಶಯ. ನಮಗೆ ನ್ಯಾಯ ಬೇಕು ಎಂದು ತ್ರಿವೇಣಿ ಪೋಷಕರು ಆಗ್ರಹಿಸಿದ್ದಾರೆ. 

ಒಟ್ಟಿನಲ್ಲಿ ಗೆಳೆಯರೊಂದಿಗೆ ಜಲಪಾತ ವೀಕ್ಷಣೆಗೆ ತೆರಳಿರುವ ಯುವತಿ ಹಲವು ದಿನಗಳಿಂದ ಕಾಣೆಯಾಗಿರುವ ಪ್ರಕರಣ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣದ ನೈಜ ವಿಚಾರ ಹೊರ ತರಬೇಕಿದೆ.
 

Follow Us:
Download App:
  • android
  • ios