Asianet Suvarna News Asianet Suvarna News

ಸಾಮೂಹಿಕ ಅತ್ಯಾಚಾರ ನಡೆಸಿದ್ದು ಹೌದು: ಮೈಸೂರು ರೇಪಿಸ್ಟ್‌ಗಳ ತಪ್ಪೊಪ್ಪಿಗೆ!

* ಆರೋಪಿಗಳು 10 ದಿನ ಪೊಲೀಸ್‌ ಕಸ್ಟಡಿಗೆ, ಅಜ್ಞಾತ ಸ್ಥಳದಲ್ಲಿ ವಿಚಾರಣೆ

* ಮೈಸೂರು ರೇಪಿಸ್ಟ್‌ಗಳ ತಪ್ಪೊಪ್ಪಿಗೆ

* ಸಾಮೂಹಿಕ ಅತ್ಯಾಚಾರ ನಡೆಸಿದ್ದು ಹೌದು: ಒಪ್ಪಿಕೊಂಡ ಪಂಚ ರಕ್ಕಸರು

Mysore gang rape 5 Accused confess to heinous crime pod
Author
Bangalore, First Published Aug 30, 2021, 7:21 AM IST

ಮೈಸೂರು(ಆ.30): ಜನಾಕ್ರೋಶಕ್ಕೆ ಕಾರಣವಾಗಿದ್ದ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಐದು ಮಂದಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಆ.24ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ನಿರ್ಜನ ಪ್ರದೇಶದಲ್ಲಿ ತಾವು ನಡೆಸಿದ ರಾಕ್ಷಸಿ ಕೃತ್ಯದ ವಿವರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಹಿಂದೆಯೂ ಇದೇ ರೀತಿಯ ಹಲವು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಪೊಲೀಸರಿಗಿದ್ದು, ಅವರಿಂದ ಇನ್ನಷ್ಟುಮಾಹಿತಿ ಕಲೆಹಾಕುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ತಮಿಳುನಾಡು ರಾಜ್ಯದ ತಿರುಪ್ಪೂರು ಮೂಲದ 17 ವರ್ಷದ ಬಾಲಕ, ಜೋಸೆಫ್‌ (28), ಪ್ರಕಾಶ್‌ ಅಲಿಯಾಸ್‌ ಅರವಿಂದ್‌ ( 21), ಮುರುಗೇಶನ್‌ (22) ಮತ್ತು ಭೂಪತಿ (25) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ತಮಿಳುನಾಡಿಗೆ ತೆರಳಿರುವ ಪೊಲೀಸರ ತಂಡ ಶೋಧ ಮುಂದುವರೆಸಿದೆ. ಈ ನಡುವೆ ಅತ್ಯಾಚಾರ ಕೃತ್ಯದಲ್ಲಿ 7ನೇ ವ್ಯಕ್ತಿಯೂ ಇರುವ ಬಗ್ಗೆ ಆರೋಪಿಗಳು ಸುಳಿವು ನೀಡಿದ್ದು, ಈ ಕುರಿತು ಪೊಲೀಸರು ಇನ್ನಷ್ಟೇ ಮಾಹಿತಿ ಬಹಿರಂಗಪಡಿಸಬೇಕಿದೆ.

ಇವರ ಪೈಕಿ ಭೂಪತಿ ಎಂಬಾತ 8 ತಿಂಗಳ ಹಿಂದೆ ಗಂಧದ ಮರ ಕಳ್ಳತನ ಮಾಡಿ ಮೈಸೂರಿನ ಪೊಲೀಸರಿಗೆ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದ. ನಂತರ ಜಾಮೀನು ಪಡೆದು ಹೊರಬಂದ ಮೇಲೆ ಮತ್ತೆ ಅಪರಾಧ ಎಸಗಲು ಆರಂಭಿಸಿದ್ದ. ಇವನ ಜೊತೆ ಸೇರಿಕೊಂಡು ಇನ್ನುಳಿದವರು ರೋಡ್‌ ರಾಬರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

10 ದಿನ ಪೊಲೀಸ್‌ ಕಸ್ಟಡಿ:

ಮೊಬೈಲ್‌ ಟವರ್‌ ಲೋಕೇಶನ್‌ ಹಾಗೂ ಅವರು ಮಾತನಾಡುತ್ತಿದ್ದ ತಮಿಳು ಭಾಷೆ ಆಧಾರದ ಮೇಲೆ ಬೆನ್ನತ್ತಿ ಹೋದ ಪೊಲೀಸರಿಗೆ ತಮಿಳುನಾಡಿನ ತಿರುಪ್ಪೂರು ಸುತ್ತಮುತ್ತಲ ಗ್ರಾಮ ಹಾಗೂ ತಾಳವಾಡಿಯಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗಿನ ಜಾವ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 5 ಮಂದಿ ಆರೋಪಿಗಳನ್ನು ಮೈಸೂರಿಗೆ ಕರೆತಂದಿರುವ ಪೊಲೀಸರು, ಮೂರನೇ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು 10 ದಿನ ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ಆರೋಪಿಗಳನ್ನು ಸದ್ಯ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆ.24ರಂದು ಮಾತ್ರವಲ್ಲದೆ ಇದೇ ರೀತಿ ಹಿಂದೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಮಾರ್ಗದರ್ಶನ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್‌ ಗುಂಟಿ ನೇತೃತ್ವದಲ್ಲಿ ನಡೆದಿರುವ ಆರೋಪಿಗಳ ವಿಚಾರಣೆಯಲ್ಲಿ ಎಸಿಪಿಗಳಾದ ಶಶಿಧರ್‌, ಶಿವಶಂಕರ್‌, ಆಲನಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್‌ ರವಿಶಂಕರ್‌ ಮತ್ತಿತರರು ಪಾಲ್ಗೊಂಡಿದ್ದಾರೆ.

Follow Us:
Download App:
  • android
  • ios