ಬೆಂಗಳೂರು (ನ.18): ಮುಂಬೈನ ಬಿಲ್ಡರ್‌ ರಾಜು ಪಾಟೀಲ್‌ ಎಂಬುವರ ಕೊಲೆ ಪ್ರಕರಣದ ಸಂಬಂಧ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ನೀಡುವಂತೆ ನಗರದ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ರಾಜು ಪಾಟೀಲ ಹತ್ಯೆ ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರವಿರುವುದರಿಂದ ಆತನನ್ನು ವಿಚಾರಣೆ ನಡೆಸಲು ವಶಕ್ಕೆ ನೀಡಬೇಕು ಎಂದು ಮುಂಬೈ ಪೊಲೀಸರು, ನಗರದ 62ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

 ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಧೀಶರು ಆರೋಪಿಯನ್ನು ಹತ್ತು ದಿನಗಳ ಕಾಲ ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಪ್ರಸ್ತುತ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆಯಲಿದ್ದು, ತನಿಖೆಯ ಬಳಿಕ ಮತ್ತೆ ನ್ಯಾಯಾಂಗ ಬಂಧನಕ್ಕೆ ವಹಿಸಲಿದ್ದಾರೆ.

ಹಲವು ಕೊಲೆ, ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ಅಡಗಿದ್ದ ರವಿ ಪೂಜಾರಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈವರೆಗೆ ಎರಡು ಪ್ರಕರಣಗಳಲ್ಲಿ ಆತನ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.