Asianet Suvarna News Asianet Suvarna News

ಇನ್‌ಸ್ಟಾ ಪೋಸ್ಟ್ ಲೈಕ್ ಮಾಡಿ ಆದಾಯ ಗಳಿಸಿ, ಮೆಸೇಜ್‌ಗೆ ಮರುಳಾಗಿ 37 ಲಕ್ಷ ಕಳೆದುಕೊಂಡ ಯುವಕ!

ವ್ಯಾಟ್ಸ್ಆ್ಯಪ್ ಮೂಲಕ, ಇನ್‌ಸ್ಟಾಗ್ರಾಂ ಮೂಲಕ ಉದ್ಯೋಗ, ಮನೆಯಲ್ಲೇ ಕುಳಿತು ಆದಾಯ ಗಳಿಸಿ ಅನ್ನೋ ಸಂದೇಶ ಹಲವರಿಗೆ ಬಂದಿರುತ್ತದೆ. ಇದೊಂದು ಅತೀ ದೊಡ್ಡ ದಂಧೆ. ಸೆಲೆಬ್ರೆಟಿಗಳ ಇನ್‌ಸ್ಟಾಗ್ರಾಂ ಪೋಸ್ಟ್ ಲೈಕ್ ಮಾಡಿದರೆ ಸಾಕು, ಪ್ರತಿ ಪೋಸ್ಟ್‌ ಲೈಕ್‌ಗೆ ಇಂತಿಷ್ಟು ಹಣ. ಈ ಸಂದೇಶಕ್ಕೆ ಮರುಳಾದ ಯುವಕ ಬರೋಬ್ಬರಿ 37 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.
 

Mumbai Man loses Rs 37 lakh from popular job scam Instagram post likes fraud ckm
Author
First Published Jul 28, 2023, 3:59 PM IST

ಮುಂಬೈ(ಜು.28) ಸಾಮಾಜಿಕ ಜಾಲತಾಣಗಳು, ವ್ಯಾಟ್ಸ್ಆ್ಯಪ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್ ಮೂಲಕ ಬರವು ಮೆಸೇಜ್, ಜಾಹೀರಾತುಗಳಿಗೆ ಮರುಳಾಗಬೇಡಿ. ಶೇಕಡಾ 99 ರಷ್ಟು ಇಂತಹ ಸಂದೇಶಗಳು, ಜಾಹೀರಾತುಗಳು ಸ್ಕ್ಯಾಮ್. ಇತ್ತೀಚೆಗೆ ನೀವು ಸೆಲೆಬ್ರೆಟಿಗಳ ಅಥವಾ ನಾವು ಹೇಳುವ ವ್ಯಕ್ತಿಗಳ ಇನ್‌ಸ್ಟಾಗ್ರಾಂಗಳ ಪೋಸ್ಟ್ ಲೈಕ್ಸ್ ಮಾಡಿದರೆ ಸಾಕು ಮನೆಯಲ್ಲಿ ಕುಳಿತು ಆದಾಯಗಳಿಸಿ ಅನ್ನೋ ಉದ್ಯೋಗ ಆಫರ್ ಭಾರಿ ಟ್ರೆಂಡ್ ಆಗಿದೆ. ಪ್ರತಿ ಪೋಸ್ಟ್‌ಗೆ 70 ರೂಪಾಯಿ, 100 ರೂಪಾಯಿ ನೀಡುತ್ತೇವೆ. ಒಂದು ದಿನ ಕನಿಷ್ಠ 5 ರಿಂದ 10 ಪೋಸ್ಟ್ ಲೈಕ್ ಮಾಡಬೇಕು ಅನ್ನೋ ಇಷ್ಟವಾಗುವ ಷರತ್ತು ಹಾಕುತ್ತಾರೆ. ಈ ಮಾತಿಗೆ ಮರುಳಾದ 32ರ ಹರೆಯದ ವ್ಯಕ್ತಿಯೊಬ್ಬರು 37 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ.

ಕಾಂಟ್ರಾಕ್ಟ್ ಉದ್ಯೋಗದಲ್ಲಿದ್ದ ಥಾಣೆಯ ವ್ಯಕ್ತಿಯ ಅವಧಿ ಅಂತ್ಯಗೊಳ್ಳುತ್ತಿತ್ತು.ಹೀಗಾಗಿ ಬೇರೆ ಕೆಲಸ ಹುಡುಕುತ್ತಿದ್ದ. ಎರಡು ಉದ್ಯೋಗ ವೆಬ್‌ಸೈಟ್‌ನಲ್ಲಿ ಬಯೋಡೇಟಾವನ್ನು ಅಪ್‌ಡೇಟ್ ಮಾಡಿದ್ದ. ಫೋನ್ ನಂಬರ್, ಇಮೇಲ್ ಐಡಿ ಸೇರಿದಂತೆ ತನ್ನ ವೈಯುಕ್ತಿಕ ಮಾಹಿತಿಗಳನ್ನು ಅಪ್‌ಡೇಟ್ ಮಾಡಿದ್ದ. ಬಯೋಡೇಟಾ ಅಪ್‌ಡೇಟ್ ಮಾಡಿದ ಕೆಲ ದಿನಗಳಲ್ಲೇ ವ್ಯಾಟ್ಸ್ಆ್ಯಪ್‌ಗೆ ಸಂದೇಶವೊಂದು ಬಂದಿದೆ.

ಹೆಚ್ಚಾಗ್ತಿದೆ ಸೈಬರ್‌ ಕ್ರೈಂ ಕೇಸ್‌: ಮನೆಯಲ್ಲೇ ಕುಳಿತು ಆನ್‌ಲೈನ್ ವಂಚನೆ ವಿರುದ್ಧ ದೂರು ನೀಡಲು ಹೀಗೆ ಮಾಡಿ..

ಪಾರ್ಟ್ ಟೈಮ್ ಉದ್ಯೋಗ, ಮನೆಯಲ್ಲೇ ಕುಳಿತು ಸೆಲೆಬ್ರೆಟಿಗಳ ಇನ್‌ಸ್ಟಾಗ್ರಾಂ ಪೋಸ್ಟ್ ಲೈಕ್ ಮಾಡಿದರೆ ಸಾಕು. ಪ್ರತಿ ಪೋಸ್ಟ್ ಲೈಕ್ಸ್‌ಗೆ 70 ರೂಪಾಯಿ. ದಿನದಲ್ಲಿ ಕನಿಷ್ಠ 2,000 ರಿಂದ 3,000 ರೂಪಾಯಿ ಆದಾಯಗಳಿಸಿ ಅನ್ನೋ ಸಂದೇಶ ವ್ಯಕ್ತಿಯನ್ನು ಮರಳು ಮಾಡಿತು. ತಕ್ಷಣವೇ ತನ್ನ ಮಾಹಿತಿ ನೀಡಿ ಪಾರ್ಟ್ ಟೈಮ್ ಕೆಲಸ ಮಾಡುವುದಾಗಿ ಸೂಚಿಸಿದ. ನೀವು ಲೈಕ್ಸ್ ಮಾಡಿದ ಬಳಿಕ ಸ್ಕ್ರೀನ್ ಶಾಟ್ ಶೇರ್ ಮಾಡಲು ಸೂಚಿಸಿದ್ದಾರೆ. ಇದಕ್ಕಾಗಿ ಟೆಲಿಗ್ರಾಂ ಆ್ಯಪ್‌ನಲ್ಲಿ ಗ್ರೂಪ್‌ಗೆ ಸೇರಿಸಿದ್ದಾರೆ. 

ಈ ಗ್ರೂಪ್‌ನಲ್ಲಿ ಬಿಟ್‌ಕಾಯಿನ್ ಟ್ರೇಡಿಂಗ್ ಕುರಿತು ಸೂಚಿಸಲಾಗಿದೆ. ಇದಕ್ಕಾಗಿ ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್‌ನ್ನು ವ್ಯಕ್ತಿಗೆ ದಂಧೆಕೋರರು ನೀಡಿದ್ದಾರೆ. ಸಣ್ಣ ಹಣ ಹೂಡಿಕೆ ಮಾಡಿದ ಆದಾಯ ಪಡೆಯಿರಿ ಎಂದು ಸೂಚಿಸಲಾಗಿತ್ತು. ಇದರಂತೆ ವ್ಯಕ್ತಿ ಬಿಟ್‌ಕಾಯಿನ್ ವೆಬ್‌ಸೈಟ್ ಲಾಗಿನ್ ಆಗಿ 9,000 ರೂಪಾಯಿ ಹೂಡಿಕೆ ಮಾಡಿದ್ದಾನೆ. ಮರುದಿನವೇ 9,980 ರೂಪಾಯಿ ಆದಾಯ ಪಡೆದಿದ್ದಾನೆ. ಇದೇ ವೇಳೆ ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚು ಆದಾಯ ಪಡೆಯಲು ಸಾಧ್ಯ. ನಿಮಗೆ ಸಾಧ್ಯವಾದರೆ ಹೆಚ್ಚು ಹೂಡಿಕೆ ಮಾಡಿ ಎಂದು ಸೂಚಿಸಿದ್ದಾರೆ. ಹೀಗಾಗಿ 30,000 ರೂಪಾಯಿ ಹೂಡಿಕೆ ಮಾಡಿದ್ದಾನೆ.ಈ ಹೂಡಿಕೆ ಮಾಡಿದ ಕೆಲ ದಿನಗಳಲ್ಲಿ 8,208 ರೂಪಾಯಿ ಆದಾಯ ಪಡೆದಿದ್ದಾನೆ. ಬಿಟ್‌ಕಾಯಿನ್ ವೆಬ್‌ಸೈಟ್‌ನಲ್ಲಿ ತನ್ನ 30,000 ರೂಪಾಯಿ ಬಿಟ್‌ಕಾಯಿನ್ ಹಾಗೇ ಇದೆ ಎಂದು ತೋರಿಸುತ್ತಿತ್ತು.

ಸೈಬರ್‌ ವಂಚಕರಿಂದ ಹಣ ವಾಪಸ್‌ ಪಡೆಯೋಕೆ ಗುಡ್‌ ಐಡಿಯಾ! ಗೋಲ್ಡನ್‌ ಅವರ್‌ನಲ್ಲಿ ಈ ಕೆಲಸ ಮಾಡಿ

ಇತ್ತ ಮತ್ತೊಂದು ಟೆಲಿಗ್ರಾಂ ಗ್ರೂಪ್‌ಗೆ ಈ ವ್ಯಕ್ತಿಯನ್ನು ಸೇರಿಸಲಾಗಿತ್ತು. ಬಳಿಕ ವಿಐಪಿ ಗ್ರೂಪ್‌ಗೆ ಸುಸ್ವಾಗತ ಎಂಬ ಸಂದೇಶವನ್ನು ಕಳುಹಿಸಲಾಗಿತ್ತು. ನೀವು ಹೆಚ್ಚು ಹಣ ಹೂಡಿಕೆ ಗ್ರೂಪ್‌ನಲ್ಲಿದ್ದೀರಿ. ಇಲ್ಲಿರುವ ವಿಐಪಿ ವ್ಯಕ್ತಿಗಳು ಲಕ್ಷ ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿ ಒಂದೇ ದಿನದಲ್ಲಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ನೀವು ಹೂಡಿಕೆ ಮಾಡಿ ಆದಾಯಗಳಿಸಿ ಶುಭವಾಗಲಿ ಎಂಬ ಸಂದೇಶದಿಂದ ಥಾಣೆಯ ವ್ಯಕ್ತಿ ಮತ್ತಷ್ಟು ಪುಳಕಿತನಾಗಿದ್ದ. ಕೆಲವೇ ದಿನಗಳಲ್ಲಿ ಭಾರಿ ಮೊತ್ತ ಆದಾಯ ಪಡೆಯಲು ಸಾಧ್ಯ ಎಂದುಕೊಂಡು ತನ್ನ ಪಿಎಫ್ ಹಣ, ಗೆಳೆಯರಿಂದ ಸಾಲ ಪಡೆದು ಒಟ್ಟು 37 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾನೆ. 

ಮರದಿನ ವೆಬ್‌ಸೈಟ್ ನೋಡಿದರೆ ತನ್ನ ಹಣವೂ ಕಾಣುತ್ತಿಲ್ಲ, ಬಿಟ್‌ಕಾಯಿನ್ ಕೂಡ ಇಲ್ಲ. ಆಗಲೇ ತಾನು ಮೋಸಹೋಗಿದ್ದೇನೆ ಎಂದು ಅರಿವಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಸೈಬರ್ ಪೊಲೀಸರು ತನಿಖೆಗೆ ನಡೆಸುವ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios