ನವದೆಹಲಿ[ಜ.19]: ದೇಶದಲ್ಲಿ 2018ನೇ ಇಸವಿಯಲ್ಲಿ ರೈತರಿಗಿಂತ ನಿರುದ್ಯೋಗಿಗಳು ಹಾಗೂ ಸ್ವಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ದಾಖಲೆಗಳಿಂದ ಬಹಿರಂಗವಾಗಿದೆ.

12,936 ನಿರುದ್ಯೋಗಿಗಳು ಹಾಗೂ 13,149 ಸ್ವ ಉದ್ಯೋಗಿಗಳು ಈ ಸಾಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 10,349 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಸ್ವಉದ್ಯೋಗಿಗಳು ಹಾಗೂ ನಿರುದ್ಯೋಗಿಗಳ ಸಂಖ್ಯೆಯು ಆತ್ಮಹತ್ಯೆಯಲ್ಲಿ ರೈತರನ್ನು ಮೀರಿಸಿದಂತಾಗಿದೆ. ದಿನವೊಂದಕ್ಕೆ ಸರಾಸರಿ 35 ನಿರುದ್ಯೋಗಿಗಳು ಹಾಗೂ 36 ಸ್ವಉದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

2018ರಲ್ಲಿ ಒಟ್ಟಾರೆ, 1,34,349 ಆತ್ಮಹತ್ಯೆ ಪ್ರಕರಣಗಳು ನಡೆದಿವೆ. 2017ಕ್ಕೆ ಹೋಲಿಸಿದರೆ ಇದರ ಸಂಖ್ಯೆ ಶೇ.3.6 ಅಧಿಕ. ಒಂದು ವರ್ಷದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ ಆತ್ಮಹತ್ಯೆ ಪ್ರಮಾಣ ಶೇ.0.3ರಷ್ಟುಇದರಿಂದ ಹೆಚ್ಚಾದಂತಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.

ಮಹಿಳೆಯರ ಆತ್ಮಹತ್ಯೆ ಅಂಕಿ-ಸಂಖ್ಯೆ ಗಮನಿಸಿದಾಗ, ಒಟ್ಟಾರೆ 42,391 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದು, ಇವರಲ್ಲಿ 22,937 ಗೃಹಿಣಿಯರು.

ಒಟ್ಟಾರೆ ಆತ್ಮಹತ್ಯೆಗೈದವರಲ್ಲಿ 1,707 ಸರ್ಕಾರಿ ನೌಕರರು (ಶೇ.1.3), 8246 ಖಾಸಗಿ ನೌಕರರು (ಶೇ.6.1), 2022 ಸರ್ಕಾರಿ ಸ್ವಾಮ್ಯದ ಕಂಪನಿಗಳ ನೌಕರರು (ಶೇ.1.5), 10159 ವಿದ್ಯಾರ್ಥಿಗಳು (ಶೇ.7.6) ಹಾಗೂ 12936 ನಿರುದ್ಯೋಗಿಗಳು (ಶೇ.9.6) ಇದ್ದಾರೆ.

ಇನ್ನು 13,149 ಸ್ವ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಒಟ್ಟಾರೆ ಆತ್ಮಹತ್ಯೆಯಲ್ಲಿನ ಇವರ ಪಾಲು ಶೇ.9.8.

ಅದೇ ರೀತಿ 10,349 ಕೃಷಿ ವೃತ್ತಿಯಲ್ಲಿದ್ದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 5,763 ಕೃಷಿಕರಾಗಿದ್ದರೆ, 4,586 ಕೃಷಿ ಕಾರ್ಮಿಕರಿದ್ದಾರೆ. ಒಟ್ಟಾರೆ ಆತ್ಮಹತ್ಯೆಯಲ್ಲಿ ಇವರ ಸಂಖ್ಯೆ ಶೇ.7.7.

ಕರ್ನಾಟಕ ನಂ.5:

ರಾಜ್ಯವಾರು ಆತ್ಮಹತ್ಯೆ ಅಂಕಿ-ಅಂಶ ನೋಡಿದಾಗ ದೇಶದಲ್ಲೇ ಕರ್ನಾಟಕ 5ನೇ ಸ್ಥಾನ ಪಡೆದಿದೆ. ನಂ.1 ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 17,972 ಆತ್ಮಹತ್ಯೆ ನಡೆದಿದ್ದರೆ, ನಂತರದ ಸ್ಥಾನಗಳಲ್ಲಿ ತಮಿಳುನಾಡು (13,896), ಪಶ್ಚಿಮ ಬಂಗಾಳ (13,255), ಮಧ್ಯಪ್ರದೇಶ (11,775) ಹಾಗೂ ಕರ್ನಾಟಕ (11,561) ಇವೆ.