Vijayapura; ಬ್ಯಾಂಕ್ ಒಡೆಯಲಿಲ್ಲ, ದರೋಡೆ ಮಾಡಲಿಲ್ಲ ಆದ್ರೂ ಬ್ಯಾಂಕ್ ಲೂಟಿ!
- ವಿಜಯಪುರ ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಗೆ ಪಂಗನಾಮ!
- ನಕಲಿ ದಾಖಲೆ ನೀಡಿ 3 ಕೋಟಿಗು ಅಧಿಕ ಲೂಟಿ!
- ಯಾರದ್ದೋ ಆಸ್ತಿ ಮೇಲೆ ಸಾಲ ಮಾಡಿ ಪರಾರಿಯಾದ ಕಿಲಾಡಿ ಕಳ್ಳರು!
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜುಲೈ. 02): ಇತ್ತೀಚಿನ ದಿನಗಳಲ್ಲಿ ಕೆಲವು ಸೊಸೈಟಿಗಳು, ಫೈನಾನ್ಸ್ ಗಳು ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ಮೋಸ ಮಾಡಿ ಓಡಿಹೋಗುತ್ತಿವೆ. ಆದ್ರೆ ಇಲ್ಲೊಂದು ಕಿಲಾಡಿ ಟೀಂ ಖೊಟ್ಟಿ ದಾಖಲೆ ಸೃಷ್ಠಿಸಿ ಬ್ಯಾಂಕ್ ಒಂದರಲ್ಲಿ ಕೋಟಿಗಟ್ಟಲೇ ಸಾಲ ತೆಗೆದುಕೊಂಡು ಬ್ಯಾಂಕ್ ಗೆ ಉಂಡೆನಾಮ ತಿಕ್ಕಿದೆ. ಬ್ಯಾಂಕ್ ನವರಿಗೇ ಯಾಮಾರಿಸಿ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಕೋಟಿ ರೂಪಾಯಿ ನಾಮ ಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಬ್ಯಾಂಕ್ ನವರಿಗೆ ಯಾಮಾರಿಸಿದ ಕಿಲಾಡಿ ವಂಚಕರು!
ಖೊಟ್ಟಿ ದಾಖಲೆಗಳನ್ನು ನೀಡಿ ಬ್ಯಾಂಕ್ ನಿಂದ ಮೂರು ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದಲ್ಲಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮಹಿಳಾ ಶಾಖೆ, ಹಾಗೂ ಕೇಂದ್ರ ಕಚೇರಿ ಶಾಖೆಯಲ್ಲಿ ಎಂಟು ಪ್ರಕರಣಗಳು ಬೆಳಕಿಗೆ ಬಂದಿದೆ. ಸ್ಥಿರಾಸ್ತಿಯನ್ನು ಅಡವಿಟ್ಟುಕೊಂಡು ಕೃಷಿಯೇತರ ಸಾಲ ಒದಗಿಸುವ ಬ್ಯಾಂಕ್ ಇವರಿಗೂ ಸಹ 2020ರ ಫೆಬ್ರುವರಿಯಲ್ಲಿ ಸಾಲ ನೀಡಿದೆ. ಆದ್ರೆ ಸಾಲ ಪಡೆದವರು ಮಾತ್ರ ಕಂತು ಕಟ್ಟದೆ, ಬ್ಯಾಂಕ್ ನವರ ಸಂಪರ್ಕಕ್ಕೆ ಬಾರದೆ ನಾಪತ್ತೆಯಾಗಿದ್ದಾರೆ. ಈ ವೇಳೆ ಸಾಲ ಪಡೆದವರ ಹೆಸರಿಗೆ ಬ್ಯಾಂಕ್ ನವರು ನೊಟೀಸ್ ಕಳಿಸಿದಾಗ ಹಾಗೂ ವಸೂಲಿಗೆಂದು ಅವರ ಮನೆಗಳಿಗೆ ಹೋಗಿದ್ದ ವೇಳೆ ಸತ್ಯಾಂಶ ಗೊತ್ತಾಗಿದೆ.
ಖೊಟ್ಟಿ ದಾಖಲೆ ನೀಡಿ ಯಾಮಾರಿಸಿದ ಗ್ಯಾಂಗ್!
ಬೇರೊಬ್ಬರ ಹೆಸರಿನಲ್ಲಿನ ಖೊಟ್ಟಿ ದಾಖಲೆಗಳನ್ನು ನೀಡಿ ಈ ಆಸಾಮಿಗಳು ಸಾಲ ಪಡೆದು ಎಸ್ಕೇಪ್ ಆಗಿದ್ದಾರೆ. ಇದೇ ರೀತಿ ಎಷ್ಟು ಪ್ರಕರಣಗಳು ಆಗಿವೆ ಎಂದು ತಪಾಸಣೆ ನಡೆಸಿದಾಗ ಒಟ್ಟು ಎಂಟು ಜನ ಆರೋಪಿಗಳು ಸೇರಿ ಎಂಟು ಬೇರೆ ಬೇರೆ ಹೆಸರಿನಲ್ಲಿನ ಆಸ್ತಿಯ ನಕಲಿ ದಾಖಲೆ ನೀಡಿ ವಿಡಿಸಿಸಿ ಬ್ಯಾಂಕ್ ನಿಂದ 3ಕೋಟಿ 15ಲಕ್ಷ ಕೃಷಿಯೇತರ ಸಾಲ ಪಡೆದು ವಂಚಿಸಿದ್ದಾರೆ.
ಗಾಂಧಿಚೌಕ್ ಠಾಣೆಯಲ್ಲಿ ದೂರು ದಾಖಲು!
ನಕಲಿ ದಾಖಲೆಗಳನ್ನು ನೀಡಿ ವಿಡಿಸಿಸಿ ಬ್ಯಾಂಕ್ ಗೆ ವಂಚಿಸಿರುವ ವಿಚಾರ ಗೊತ್ತಾಗುತ್ತಿದ್ದಂತೆ ಬ್ಯಾಂಕ್ ಅಧಿಕಾರಿಗಳು ಗಾಂಧಿಚೌಕ ಠಾಣೆಯಲ್ಲಿ ಮೇ1ರಂದು ವಂಚನೆ ಕೇಸ್ ದಾಖಲಿಸಿದ್ದಾರೆ. ಸೈಯದ್ ಆರೀಫ್, ಹನಮಂತ ಮುಂಜಾನೆ, ಸೈಫುದ್ದೀನ್ ಶೇಖ್, ವೆಂಕಟೇಶ ಕೋಪರ್ಡೆ, ನಜೀರಅಹಮ್ಮದ ಶೇಖ್, ಗಜಾನಂದ ಬೀಸಣಕಿ, ರಾಘವೇಂದ್ರ ಚವನ ಹಾಗೂ ಭಾರತಿ ಇಂಡಿ ಇವರೆಲ್ಲ ಖೊಟ್ಟಿ ದಾಖಲೆ ನೀಡಿ ಸಾಲ ಪಡೆದಿದ್ದಾರೆ. ಸಾಲಗಾರರು ಹಾಗೂ ಅವರಿಗೆ ಸಾಲ ಪಡೆಯಲು ಜಾಮೀನು ನೀಡಿದ್ದ ಒಟ್ಟು 22 ಜನ್ರ ಮೇಲೆ ದೂರು ದಾಖಲಾಗಿದೆ.
ಬ್ಯಾಂಕ್ ಅಧಿಕಾರಿಗಳನ್ನೆ ವಂಚಿಸಿ ಪರಾರಿ!
ವಂಚನೆ ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿಗಳ ಬಲೆಗೆ ಜಾಲ ಬೀಸಿದ್ದಾರೆ. ಸುಳ್ಳು ಸುಳ್ಳು ದಾಖಲೆ ನೀಡಿ ವಂಚಿಸಿದ್ದರಿಂದ ಆರೋಪಿಗಳ ಹೆಡೆಮುರಿ ಕಟ್ಟಲು ಸ್ವಲ್ಪ ಸಮಯ ಬೇಕಾಗುತ್ತದೆ. ಖಂಡಿತವಾಗಿ ಇವರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚುರುಕುಕೊಂಡ ತನಿಖೆ!
ಕೆಲವರು ಬೇರೆ ಯಾರದ್ದೋ ಹೆಸರಿನ ಆಸ್ತಿಯನ್ನು ಡೂಪ್ಲಿಕೇಟ್ ಮಾಡಿ ಸಾಲ ಪಡೆದಿದ್ರೆ ಇನ್ನು ಕೆಲವರು ಆಸ್ತಿಗಳೇ ಇಲ್ಲದ ಸರ್ವೇ ನಂಬರ್ ಹಾಕಿ ಗೋಲಮಾಲ್ ಮಾಡಿದ್ದಾರೆ. ಇಷ್ಟೆ ಅಲ್ಲದೆ ಇದೇ ಆರೋಪಿಗಳು ಇನ್ನೂ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಇದೇ ರೀತಿ ಸಾಲ ಪಡೆದು ವಂಚಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಆ ತನಿಖೆಯೂ ಮುಂದುವರೆದಿದೆ.
ಸಿಬ್ಬಂದಿಗೆ ಗೇಟ್ ಪಾಸ್ ನೀಡಿದ ಬ್ಯಾಂಕ್!
ವಿಜಯಪುರ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ್ ಮಾಧ್ಯಮಗಳಿಗೆ ಈ ಕುರಿತಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವಂಚನೆ ನಡೆದಿರೋದು ನಿಜವಿದೆ. ಈ ಪ್ರಕರಣ ಬಯಲಿಗೆ ಬಂದ ಬಳಿಕ ಇಬ್ಬರು ಸಿಬ್ಬಂದಿಗಳಿಗು ಗೇಟ್ ಪಾಸ್ ನೀಡಿದ್ದೇವೆ ಎಂದಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಕರಣವು ದಾಖಲಾಗಿದ್ದು ತನಿಖೆ ನಡೆಯುತ್ತಲಿದೆ. ಸತ್ಯಾಸತ್ಯತೆಗಳು ಬಯಲಿಗೆ ಬರಲಿವೆ. ಶೀಘ್ರದಲ್ಲೆ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಲಿದೆ ಎಂದಿದ್ದಾರೆ.