Asianet Suvarna News Asianet Suvarna News

ಕೋರ್ಟ್‌ನಲ್ಲಿ ಸರ್ಕಾರಿ ನೌಕರಿ ಕೊಡಿಸೋದಾಗಿ ರೈತನ ಮಗನಿಗೆ ₹1.80 ಲಕ್ಷ ವಂಚನೆ; ಹಣ ಕೇಳಿದ್ರೆ ಗತಿ ಕಾಣಿಸುವೆ ಎಂದ ದುರುಳ!

ರೈತರೊಬ್ಬರ ಮಗನಿಗೆ ನ್ಯಾಯಾಲಯದಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ₹1.80 ಲಕ್ಷ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Money fraud by believing that they will be given a government post at Bengaluru rav
Author
First Published Feb 9, 2024, 12:13 PM IST

ಬೆಂಗಳೂರು (ಫೆ.9) : ರೈತರೊಬ್ಬರ ಮಗನಿಗೆ ನ್ಯಾಯಾಲಯದಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ₹1.80 ಲಕ್ಷ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ದುಂಡಯ್ಯ(63) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಗೌರಿಬಿದನೂರಿನ ಪದ್ಮರಾಜ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನಲ್ಲೇ ಕಾರ್ ಡ್ರೈವರ್ ಜೊತೆ ಲವ್; ಮನೆಯವ್ರು ವಿರೋಧಿಸಿದ್ದಕ್ಕೆ ಬಾಲಕಿ ಆತ್ಮಹತ್ಯೆ!

ಏನಿದು ಪ್ರಕರಣ?:

ದೂರುದಾರ ದುಂಡಯ್ಯ 2021ನೇ ಸಾಲಿನಲ್ಲಿ ವಿಧಾನಸೌಧದ ಬಳಿ ಇರುವ ಮಾಹಿತಿ ಆಯೋಗದ ಬಳಿಗೆ ಬಂದಿದ್ದರು. ಈ ವೇಳೆ ಪದ್ಮರಾಜ್‌ ಎಂಬಾತ ಸಿಕ್ಕಿ ಪರಿಚಯ ಮಾಡಿಕೊಂಡಿದ್ದಾನೆ. ‘ನಾನು ಮಾಹಿತಿ ಆಯೋಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನ್ಯಾಯಾಲಯಗಳಲ್ಲಿ ಕೆಲಸಗಳು ಖಾಲಿಯಿವೆ. 10ನೇ ತರಗತಿ ಪಾಸ್‌ ಆದವರಿಗೆ ಕೆಲಸ ಕೊಡಿಸುತ್ತೇನೆ. ಮೂರು ಲಕ್ಷ ರುಪಾಯಿ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಯಾರಾದರೂ ಇದ್ದರೆ ತಿಳಿಸಿ’ ಎಂದು ಹೇಳಿದ್ದಾನೆ.

₹1.80 ಲಕ್ಷ ಪಡೆದ:

ಆಗ ದುಂಡಯ್ಯ ತನ್ನ ಮಗನಿಗೆ ಆ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ನಾನು ಬಡವನಾಗಿದ್ದು, ₹3 ಲಕ್ಷ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಪದ್ಮರಾಜ್‌, ‘ನೀವು ₹2 ಲಕ್ಷ ಕೊಡಿ ಸಾಕು. ನಿಮ್ಮ ಮಗನಿಗೆ ಕೆಲಸ ಕೊಡಿಸುತ್ತೇನೆ’ ಎಂದಿದ್ದಾನೆ. ಇದೇ ವೇಳೆ ಯಾವುದೋ ಅಧಿಕಾರಿಗೆ ಫೋನ್‌ ಮಾಡುವ ಹಾಗೆ ಅಪರಿಚಿತನಿಗೆ ಕರೆ ಮಾಡಿ, ‘ನಮ್ಮ ದುಂಡಯ್ಯನ ಮಗನಿಗೆ ನ್ಯಾಯಾಲಯದಲ್ಲಿ ಒಂದು ಕೆಲಸ ಕೊಡಬೇಕು’ ಎಂದು ಹೇಳಿ ನಂಬಿಕೆ ಹುಟ್ಟಿಸಿದ್ದಾನೆ. ಬಳಿಕ ದುಂಡಯ್ಯ ಅವರು ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ₹1.80 ಲಕ್ಷ ಸಾಲ ಪಡೆದು ಪದ್ಮರಾಜ್‌ಗೆ ಆ ಹಣವನ್ನು ನೀಡಿದ್ದಾರೆ.

2 ವರ್ಷ ಅಲೆದಾಡಿಸಿದ:

ಕೆಲ ದಿನಗಳ ಬಳಿಕ ಕೆಲಸದ ಬಗ್ಗೆ ಪದ್ಮರಾಜ್‌ನನ್ನು ಪ್ರಶ್ನಿಸಿದಾಗ ಇಂದು-ನಾಳೆ ಎಂದು ಸುಮಾರು ಎರಡು ವರ್ಷಗಳ ಕಾಲ ಸಬೂಬು ಹೇಳಿ ದುಂಡಯ್ಯನನ್ನು ಅಲೆದಾಡಿಸಿದ್ದಾನೆ. ಬಳಿಕ ಕೆಲಸ ಕೊಡಿಸಿ, ಇಲ್ಲವೇ ನನ್ನ ಹಣ ವಾಪಾಸ್‌ ಕೊಡಿ ಎಂದು ದುಂಡಯ್ಯ ಕೇಳಿದ್ದಾರೆ. ಈ ವೇಳೆ ಪದ್ಮರಾಜ್‌ ಒಂದು ಲಕ್ಷ ರು. ಮೊತ್ತದ ಚೆಕ್‌ ಬರೆದುಕೊಟ್ಟಿದ್ದಾನೆ. ಆ ಚೆಕ್‌ ಅನ್ನು ದುಂಡಯ್ಯ ಬ್ಯಾಂಕ್‌ಗೆ ಹಾಕಿದ್ದಾಗ ಚೆಕ್‌ ಬೌನ್ಸ್‌ ಆಗಿದೆ.

ತುಮಕೂರು: ಬಿಸಿಯೂಟ ಸೇವಿಸಿ ಇಬ್ಬರು ಶಿಕ್ಷಕರು ಸೇರಿ 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥ!

‘ಹಣ ಕೇಳಿದರೆ ಗತಿ ಕಾಣಿಸುವೆ’

ಬಳಿಕ ದುಂಡಯ್ಯ ಕರೆ ಮಾಡಿದಾಗ ಪದ್ಮರಾಜ್‌ ಕರೆ ಸ್ವೀಕರಿಸಿಲ್ಲ. ಬಳಿಕ ಆತನನ್ನು ಭೇಟಿ ಮಾಡಿ ಹಣದ ಬಗ್ಗೆ ಪ್ರಶ್ನಿಸಿದಾಗ, ‘ಯಾರು ನೀನು? ನಾನು ನಿನಗೆ ಯಾವುದೇ ಹಣ ಕೊಡಬೇಕಿಲ್ಲ. ಮತ್ತೊಮ್ಮೆ ನೀನು ನನಗೆ ಹಣ ಕೇಳಿದರೆ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.

ಹೀಗಾಗಿ ದುಂಡಯ್ಯ ಅವರು ವಂಚಕ ಪದ್ಮರಾಜ್‌ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios