ಬೆಂಗಳೂರು: ಸೈಬರ್ ವಂಚನೆಯಲ್ಲಿ ಗಳಿಸಿದ್ದ ಹಣ ಕ್ಯಾಸಿನೋದಲ್ಲಿ ಕಳೆದ..!
ಆಂಧ್ರಪ್ರದೇಶದ ಮನೋಜ್ ಎಂಬಿಎ ಪದವೀಧರನಾಗಿದ್ದು, ಯಲಹಂಕ ಸಮೀಪದ ತನ್ನ ಕುಟುಂಬದ ಜತೆ ನೆಲೆಸಿದ್ದಾನೆ. ಸುಲಭವಾಗಿ ಹಣ ಸಂಪಾದನೆಗೆ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ಮೋಸದ ಜಾಲದ ಜತೆ ಕೈ ಜೋಡಿಸಿದ್ದ ಆತ, ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಿತರಾದ ಸೈಬರ್ ವಂಚಕರ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದಿದ್ದ.

ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಅ.15): ದೇಶ ವ್ಯಾಪ್ತಿ ಅಧಿಕ ಲಾಭಾಂಶದಾಸೆ ತೋರಿಸಿ ಜನರಿಗೆ ಮಹಾ ಮೋಸ ಮಾಡಿ ₹854 ಕೋಟಿ ದೋಚಿದ್ದ ಸೈಬರ್ ವಂಚಕರ ಗ್ಯಾಂಗ್ ಲೀಡರ್, ಆ ಹಣದಲ್ಲಿ ₹30 ಲಕ್ಷವನನ್ನು ಗೋವಾದ ಕ್ಯಾಸಿನೋದಲ್ಲಿ ಆಡಿ ಕಳೆದಿದ್ದಾನೆ. ರೆಸಾರ್ಟ್ ಹಾಗೂ ಸಾಫ್ಟ್‌ವೇರ್ ಕಂಪನಿಗೆ ಲಕ್ಷಾಂತರ ರುಪಾಯಿ ಬಂಡವಾಳ ಹೂಡಿಕೆ ಮಾಡಿರುವುದು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸೈಬರ್ ವಂಚನೆ ಜಾಲದಲ್ಲಿ ಬೆಂಗಳೂರಿನ ಯಲಹಂಕದ ನಿವಾಸಿ ಮನೋಜ್ ಅಲಿಯಾಸ್ ಜಾಕ್ ಪ್ರಮುಖ ಸೂತ್ರಧಾರನಾಗಿದ್ದು, ಆತನ ಹಣಕಾಸು ವ್ಯವಹಾರಗಳನ್ನು ಶೋಧಿಸಿದಾಗ ವಿವಿಧ ಉದ್ದಿಮೆಗಳಿಗೆ ಬಂಡವಾಳ ಹೂಡಿಕೆ ಸಂಗತಿ ಪತ್ತೆಯಾಗಿದೆ. ಈ ಆಸ್ತಿಗಳ ಜಪ್ತಿ ಬಗ್ಗೆ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಸಿನಿಮೀಯ ರೀತಿಯಲ್ಲಿ ಬಳ್ಳಾರಿಯಲ್ಲಿ ಅಪಹರಣ ಕೊಪ್ಪಳದಲ್ಲಿ ಅತ್ಯಚಾರ!
ಕೋಟಿ ಕೋಟಿ ದೋಚಿದ್ದು ಸಿಕ್ಕಿದ್ದು ಅಲ್ಪ ಆದಾಯ:
ಸೈಬರ್ ವಂಚನೆ ಕೃತ್ಯದಲ್ಲಿ ಬೃಹತ್ ಮೊತ್ತ ಸಂಪಾದಿಸಿದರೂ ಕಮಿಷನ್ ರೂಪದಲ್ಲಿ 5ರಿಂದ 6 ಕೋಟಿ ರುಪಾಯಿ ಮಾತ್ರ ಮನೋಜ್ ಪಾಲಿಗೆ ದಕ್ಕಿದೆ. ಈ ಹಣವನ್ನು ತನ್ನ ಸ್ನೇಹಿತರ ಪಾಲುದಾರಿಕೆಯಲ್ಲಿ ಇತರೆ ವ್ಯವಹಾರಗಳಿಗೆ ತೊಡಗಿಸಿ ಆತ ಸಕ್ರಮವಾಗಿಸಿಕೊಂಡಿದ್ದ. ಎರಡು ವರ್ಷಗಳ ಅವಧಿಯಲ್ಲಿ ಈತನ ಬ್ಯಾಂಕ್ ಖಾತೆಗಳಲ್ಲಿ ನಡೆದಿರುವ ಆರ್ಥಿಕ ವಹಿವಾಟಿನ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ಗಳಿಂದ ವಿವರ ಪಡೆಯಲಾಗುತ್ತಿದೆ. ಇದುವರೆಗೆ ಬೆಂಗಳೂರಿನಲ್ಲಿ ರೆಸಾರ್ಟ್‌ಗೆ ₹17 ಲಕ್ಷ, ಆಂಧ್ರಪ್ರದೇಶದಲ್ಲಿ ಸಾಫ್ಟ್‌ವೇರ್ ಕಂಪನಿಗೆ ₹40 ಲಕ್ಷ, ಗೋವಾದ ಕ್ಯಾಸಿನೋದಲ್ಲಿ ₹30 ಲಕ್ಷ ಕಳೆದಿದ್ದಾನೆ. ಗಾರ್ಮೆಂಟ್ಸ್ ಕಾರ್ಖಾನೆಗೆ ₹50 ಲಕ್ಷ ಸೇರಿದಂತೆ ಒಟ್ಟು ₹1.07 ಕೋಟಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ. ಇನ್ನುಳಿದ ಹಣದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ತಂಡಕ್ಕೆ ಮನೋಜ್ ನಾಯಕ
ಆಂಧ್ರಪ್ರದೇಶದ ಮನೋಜ್ ಎಂಬಿಎ ಪದವೀಧರನಾಗಿದ್ದು, ಯಲಹಂಕ ಸಮೀಪದ ತನ್ನ ಕುಟುಂಬದ ಜತೆ ನೆಲೆಸಿದ್ದಾನೆ. ಸುಲಭವಾಗಿ ಹಣ ಸಂಪಾದನೆಗೆ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ಮೋಸದ ಜಾಲದ ಜತೆ ಕೈ ಜೋಡಿಸಿದ್ದ ಆತ, ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಿತರಾದ ಸೈಬರ್ ವಂಚಕರ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದಿದ್ದ.
ಅನಂತರ ಮಾಸ್ಟರ್ ಮೈಂಡ್‌ಗಳ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ತನ್ನ ನಾಯಕತ್ವದಲ್ಲಿ ಪ್ರತ್ಯೇಕ ವಂಚಕರ ತಂಡವನ್ನು ಮನೋಜ್ ಕಟ್ಟಿದ್ದ. ‘ದಿ ವೈನ್ ಗ್ರೂಪ್’ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿದ್ದ ಆತ, ಈ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡುವುದಾಗಿ ಸಾರ್ವಜನಿಕರಿಗೆ ನಂಬಿಸಿ ಮಂಕೂಬೂದಿ ಎರೆಚಿದ್ದ. ಈ ವಂಚನೆ ಕೃತ್ಯದಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸುಮಾರು 5013 ಜನರು ₹854 ಕೋಟಿ ಕಳೆದುಕೊಂಡಿದ್ದರು.
ದುಬೈ-ಸಿಂಗಾಪುರಕ್ಕೆ ಕೋಟ್ಯಂತರ ಹಣ ರವಾನೆ
ಭಾರತೀಯರಿಗೆ ವಂಚಿಸಿದ ಸಂಪಾದಿಸಿದ ₹854 ಕೋಟಿ ಪೈಕಿ ಇದುವರೆಗೆ ₹5 ಕೋಟಿ ರು ಮಾತ್ರ ಪತ್ತೆಯಾಗಿದೆ. ಇನ್ನುಳಿದ ಹಣದಲ್ಲಿ ಬಹುಪಾಲು ಮೊತ್ತವು ಅಕ್ರಮವಾಗಿ ಸಿಂಗಾಪುರ ಹಾಗೂ ದುಬೈ ಸೇರಿದಂತೆ ವಿದೇಶಗಳಿಗೆ ವರ್ಗಾವಣೆಯಾಗಿದೆ. ಅಲ್ಲದೆ ದೊಡ್ಡ ಪ್ರಮಾಣದ ಮೊತ್ತವು ಬಿಟ್ ಕಾಯಿನ್ ಮೂಲಕ ಸಕ್ರಮವಾಗಿದೆ ಎಂದು ಸೈಬರ್ ಪೊಲೀಸರು ಹೇಳಿದ್ದಾರೆ.
ಧಾರವಾಡ: ಬಸ್ ಡಿಕ್ಕಿ ಹೊಡೆದು ಅಪಘಾತ; ಬಾಲಕ ಸಾವು
ಸೈಬರ್ ವಂಚನೆಯಿಂದ ಸಂಪಾದಿಸಿದ ಹಣವನ್ನು ಮಾಸ್ಟರ್ ಮೈಂಡ್‌ಗಳಿಗೆ ಮನೋಜ್ ಹಾಗೂ ಆತನ ಐವರು ಸಹಚರರು ರವಾನಿಸಿದ್ದಾರೆ. ಇದಕ್ಕೆ ಇಂತಿಷ್ಟು ಕಮಿಷರ್ ಪಾವತಿಯಾಗಿದೆ. ಈ ಹಣವು ವಿವಿಧ ಬ್ಯಾಂಕ್ ಖಾತೆಗಳ ಮೂಲಕವೇ ವಹಿವಾಟು ನಡೆದಿದ್ದು, ಆ ಇಬ್ಬರು ಮಾಸ್ಟರ್ ಮೈಂಡ್‌ಗಳ ಮೂಲಕ ಆ ಹಣವು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಆರೋಪಿಗಳಿಗೆ ಸೇರಿದ 84 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಸುಮಾರು ₹5 ಕೋಟಿ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿಗಳು ಪತ್ತೆಯಾದರೆ ಹಣದ ಮೂಲ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ತಡೆಯಾಜ್ಞೆ: ಇಬ್ಬರಿಗೆ ಜಾಮೀನು
ಈ ಸೈಬರ್ ವಂಚನೆ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಎಫ್‌ಐಆರ್‌ಗಳ ಪೈಕಿ ಒಂದು ಎಫ್‌ಐಆರ್ ತನಿಖೆಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಇನ್ನು ಬಂಧಿತ ಆರು ಆರೋಪಿಗಳ ಪೈಕಿ ಇಬ್ಬರಿಗೆ ಜಾಮೀನು ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.