ಬಸ್‌ನಲ್ಲಿ ನಿಮ್ಮ ಪರ್ಸ್, ಮೊಬೈಲ್ ಹೀಗೂ ಮಾಯವಾಗ್ಬೋದು. ನಿಮ್ಮ ಅರಿವಿಗೆ ಬರದೇ ಕಳ್ಳಿಯರು ಹೇಗೆ ಕೈಚಳಕ ತೋರ್ತಾರೆ ಎಂದು ಈ ವಿಡಿಯೋ ನೋಡಿ!
ಕಳ್ಳರು ಎಂದಾಕ್ಷಣ ಹೆಚ್ಚಾಗಿ ಎಲ್ಲರ ಕಣ್ಣೆದುರಿಗೆ ಬರುವವರು ಪುರುಷರು. ಆದರೆ ಅವರಿಗಿಂತಲೂ ಖತರ್ನಾಕ್ ಕಳ್ಳಿಯರು ಇದ್ದಾರೆ. ಅದರಲ್ಲಿಯೂ ಮಗು ಎತ್ತಿಕೊಂಡು ಬಸ್ ಹತ್ತುವ ಕಳ್ಳಿಯರು ಮಾತ್ರ ಬಾರಿ ಚಾಲಾಕಿ. ಮಗು ಎತ್ತಿಕೊಂಡ ಕಾರಣ, ಅವರ ಮೇಲೆ ಯಾರೂ ಅನುಮಾನ ಪಡುವುದಿಲ್ಲ. ಅದಕ್ಕಾಗಿಯೇ ಸದಾ ಅವರ ಬಳಿ ಮಗು ಇದ್ದೇ ಇರುತ್ತದೆ. ಭಿಕ್ಷೆ ಬೇಡುವವರು ಕೂಡ ಯಾವಾಗಲೂ ಮಗುವನ್ನು ಎತ್ತಿಕೊಂಡು ಕರುಣೆ ಗಿಟ್ಟಿಸಿಕೊಳ್ಳುತ್ತಾರಲ್ಲ, ಇವರದ್ದೂ ಅದೇ ರೀತಿ. ಬಸ್ ರಶ್ ಇದ್ದರಂತೂ ಇವರ ಪಾಲಿಗೆ ವರದಾನ. ಅಷ್ಟಕ್ಕೂ ರಶ್ ಇರೋ ಬಸ್ಸಿನಲ್ಲಿಯೇ ಇವರ ಕೈಚಳಕ ಶುರುವಾಗುತ್ತೆ. ಈಗಿನ ಕಾಲದಲ್ಲಿ ಗರ್ಭಿಣಿಯಾಗಲಿ, ವೃದ್ಧರಾಗಲಿ, ಮಗು ಎತ್ತಿಕೊಂಡು ಬಂದವರೇ ಆಗಲಿ... ಅವರಿಗೆ ಸೀಟು ಬಿಟ್ಟು ಕೊಡುವಷ್ಟು ಉದಾರತೆ ತುಂಬಾ ಕಮ್ಮಿ ಮಂದಿಗೆ ಇರುವುದು ಕೂಡ ಇವರಿಗೆ ಪ್ಲಸ್ ಪಾಯಿಂಟ್. ನೀವು ಒಂದು ವೇಳೆ ಒಳ್ಳೆಯ ಮನಸ್ಸಿನವರಾಗಿದ್ದು, ಸೀಟು ಬಿಟ್ಟುಕೊಟ್ಟರೂ ಅವರಿಗೆ ಅದು ಬೇಡ. ಇಂಥ ಭಯಂಕರ ಕಳ್ಳಿಯೊಬ್ಬಳ ಕರಾಮತ್ತು ಬಸ್ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಒಮ್ಮೆ ನೋಡಿಬಿಡಿ.
ಸಾಮಾನ್ಯವಾಗಿ ಮಹಿಳೆಯರು ವ್ಯಾನಿಟಿ ಬ್ಯಾಗ್ ಹಾಕಿಕೊಂಡಿರುತ್ತಾರೆ. ಆ ಬ್ಯಾಗ್ ಭುಜಕ್ಕೆ ನೇತುಹಾಕಿಕೊಂಡರೆ, ಅದು ಸದಾ ಹಿಂಭಾಗದಲ್ಲಿಯೇ ಇರುತ್ತದೆ. ಇಂಥ ಸಮಯಕ್ಕೇ ಹೊಂಚುಹಾಕುವ ಈ ಮಗುವನ್ನು ಹಿಡಿದುಕೊಳ್ಳುವ ಕಳ್ಳ ಅಮ್ಮಂದಿರು ನಿಧಾನವಾಗಿ ಹೇಗೆ ಪರ್ಸ್ನಿಂದ ದುಡ್ಡನ್ನು ಕದಿಯುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ಸುಲಭದಲ್ಲಿ ನೋಡಬಹುದಾಗಿದೆ. ಕೈಯಲ್ಲಿ ಮಗು ಇರುವ ಕಾರಣ, ಅದನ್ನು ಅತ್ತ ಇತ್ತ ಮಾಡಿದಂತೆ ಮಾಡಿದರೆ, ಬಸ್‌ನಲ್ಲಿ ಇರುವವರಿಗೂ ಇವರು ಏನು ಮಾಡುತ್ತಾರೆ ಎಂದು ತಿಳಿಯುವುದೇ ಇಲ್ಲ. ಅಷ್ಟಕ್ಕೂ ಬಸ್ ರಶ್ ಇದ್ದಾಗ ಅವರದ್ದೇ ಕಷ್ಟ ಅವರಿಗೆ ಆಗಿರುತ್ತದೆ, ಇನ್ನು ಬೇರೆಯವರು ಏನು ಮಾಡುತ್ತಾರೆ ಎಂದು ನೋಡುವುದಾದರೂ ಹೇಗೆ? ಇದೇ ಕಾರಣಕ್ಕೆ ಕಳ್ಳಿಯರು ನಿಧಾನವಾಗಿ ಪರ್ಸ್ ಎಗರಿಸುತ್ತಿದ್ದಾರೆ.
ಈ ವಿಡಿಯೋ ನೋಡಿದ ಮೇಲೆ ಮಹಿಳೆಯರಷ್ಟೇ ಅಲ್ಲ, ಎಲ್ಲರೂ ಹೇಗೆ ಹುಷಾರಾಗಿ ಇರಬೇಕು ಎನ್ನುವುದು ತಿಳಿಯುತ್ತದೆ. ಅಂದಹಾಗೆ ಇವಳೇನೂ ಫ್ರೀ ಬಸ್‌ನಲ್ಲಿ ಬಂದ ಕರ್ನಾಟಕದ ಮಹಿಳೆ ಅಲ್ಲ, ಬದಲಿಗೆ ಈ ಘಟನೆ ನಡೆದಿರುವುದು ಒಡಿಶಾದ ಬಾಲಸೋರ್‌ನಲ್ಲಿ. ಅಲ್ಲಿಯ ಸಿಟಿ ಬಸ್‌ನಿಂದ ಕಳ್ಳಿಯೊಬ್ಬಳು ಬಸ್‌ನಲ್ಲಿ ಎದುರಿಗೆ ನಿಂತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ಒಳಗೆ ಕೈಹಾಕಿ, ಮೊಬೈಲನ್ನೋ, ಪರ್ಸ್ ಅನ್ನೊ ಎಗರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಕಳ್ಳತನದ ಸಂಪೂರ್ಣ ಘಟನೆ ಬಸ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ಮಹಿಳೆ ಬೇರೊಬ್ಬ ಮಹಿಳೆಯಿಂದ ಮೊದಲು ಪರ್ಸ್ ಎಗರಿಸಿದ್ದಾಳೆ, ಆ ಬಳಿಕ ಎದುರಿಗೆ ಇರೋ ಮಹಿಳೆಯ ಬ್ಯಾಗ್‌ನಿಂದ ಮೊಬೈಲ್ ತೆಗೆಯುತ್ತಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅದನ್ನು ಕದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಈ ಘಟನೆಯು ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಪ್ರಯಾಣಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಇಂತಹ ಘಟನೆಗಳನ್ನು ಕಡಿಮೆ ಮಾಡಲು ಜನರು ಜಾಗರೂಕರಾಗಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಅದರಲ್ಲಿಯೂ ಬಸ್ ರಶ್ ಇದ್ದ ಸಂದರ್ಭದಲ್ಲಿ ಮಹಿಳೆಯರು ತಮ್ಮ ಬ್ಯಾಗ್ ಅನ್ನು ತಮ್ಮ ಎದುರಿಗೆ ಇಟ್ಟುಕೊಳ್ಳುವುದು ಒಳಿತು. ಕೈಯಲ್ಲಿ ಗಟ್ಟಿಯಾಗಿ ಎದುರಿಗೆ ಹಿಡಿದುಕೊಂಡು ನಿಂತಷ್ಟೂ ಒಳ್ಳೆಯದು. ಇಲ್ಲದಿದ್ದರೆ, ಬರುವವರಲ್ಲಿ ಯಾರು ಒಳ್ಳೆಯವರು, ಯಾರು ಕಳ್ಳರು ಎಂದು ತಿಳಿಯುವುದೇ ಕಷ್ಟ. ಒಂದು ವೇಳೆ ನಿಮಗೆ ಕದ್ದಿರುವುದು ತಿಳಿಯುವ ಹೊತ್ತಿಗೆ ಅವರು ಬಸ್ ಇಳಿದು ಪರಾರಿಯಾಗಿದ್ದರೆ ಆಮೇಲೆ ಗೋಳಾಡಿ ಪ್ರಯೋಜನವಿಲ್ಲ.
