ಹಣದ ಅವ್ಯವಹಾರ: ಕಾರಿನಲ್ಲಿ ಬೇರೊಬ್ಬನ ಕುಳ್ಳಿರಿಸಿ ಬೆಂಕಿ ಹಚ್ಚಿ ಕೊಂದ ಪ್ರಕರಣ ಬಯಲಿಗೆ!
ಹಣದ ಅವ್ಯವಹಾರದಿಂದ ಕಾರಿನಲ್ಲಿ ಕುಳ್ಳಿರಿಸಿ ಭೀಕರ ಸ್ಥಿತಿಯಲ್ಲಿ ಸುಟ್ಟು ಹಾಕಿ ಕೊಂದಿದ್ದ ಪ್ರಕರಣವನ್ನು ಪೊಲೀಸರು ಸಿನೀಮಿಯ ರೀತಿಯಲ್ಲಿ ತನಿಖೆ ನಡೆಸಿ ಬಯಲಿಗೆಳೆದಿದ್ದಾರೆ
ಬೈಂದೂರು (ಜು.15): ಇಲ್ಲಿಗೆ ಸಮೀಪದ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಕುಳ್ಳಿರಿಸಿ ಸುಟ್ಟು ಹಾಕಿರುವ ಪ್ರಕರಣ (Crime) ಬಯಲಿಗೆ ಬಂದಿದೆ. ಮೃತವ್ಯಕ್ತಿಯ ದೇಹವು ಬಹುತೇಕ ಸುಟ್ಟು ಕರಕಲಾಗಿದ್ದು, ಈ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು (Police) ಸಿನೀಮಿಯ ರೀತಿಯಲ್ಲಿ ಬಯಲಿಗೆಳೆದಿದ್ದಾರೆ
ಹಣದ ವಿಚಾರದಲ್ಲಿ ತನ್ನ ಅವ್ಯವಹಾರ ಮುಚ್ಚಿಹಾಕಲು ತಾನೇ ಮರಣ ಹೊಂದಿದ್ದೇನೆ ಎಂದು ಸಮಾಜವನ್ನು ನಂಬಿಸಲು ಬೇರೊಬ್ಬ ವ್ಯಕ್ತಿಗೆ ಕಂಠಪೂರ್ತಿ ಕುಡಿಸಿ ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಂದ ಭೀಬತ್ಸ ಪ್ರಕರಣ ಇದಾಗಿದೆ.
ಕಾರ್ಕಳದ ಮೇಸ್ತ್ರಿ ಆನಂದ ದೇವಾಡಿಗ (55) ಕೊಲೆಗೀಡಾದವರು. ಸದಾನಂದ ಶೇರುಗಾರ್ ಹಾಗೂ ಈ ಕೊಲೆಗೆ ಸಹಕರಿಸಿದ ಮಹಿಳೆ ಶಿಲ್ಪಾ ಪೂಜಾರಿ ಬಂಧಿತ ಆರೋಪಿಗಳು.
ಪ್ರಕರಣದ ತನಿಖೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ, ಗುರುವಾರ ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಸುಟ್ಟು ಹೋದ ಕಾರಿನ ಚಾಸೀಸ್ ನಂಬರ್‌ನ್ನು ಫೋರೆನ್ಸಿಕ್ ತಜ್ಞರ ಸಹಾಯದಿಂದ ಗುರುತಿಸಿದ್ದು, ಅದರ ಆಧಾರದಲ್ಲಿ, ಮೃತರನ್ನು ಕಾರಿನ ಮಾಲಕ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರೆಗಾರ್ ಎಂದು ಗುರುತಿಸಿದ ಬಳಿಕ ಪ್ರಕರಣ ಬಯಲಾಗಿದೆ.
ಪ್ರಕರಣದ ಹಿನ್ನೆಲೆ: ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಸದಾನಂದ ಶೇರೆಗಾರ ಜಾಗ ಮತ್ತು ಹಣದ ವಿಚಾರದಲ್ಲಿ ತನ್ನ ಅವ್ಯವಹಾರವನ್ನು ಮುಚ್ಚಿಹಾಕಲು ಈ ಅಮಾನವೀಯ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ: ಚಂದ್ರಶೇಖರ್ ಗುರೂಜಿ ಹತ್ಯೆ ದಿನ ಹೊಟೇಲ್‌ನಲ್ಲಿ ನಡೆದಿದ್ದೇನು..?
ಮಂಗಳವಾರ, ತನಗೆ ಆಪ್ತಳಾಗಿದ್ದ ಶಿಲ್ಪ ಪೂಜಾರಿ ಎಂಬ ಮಹಿಳೆಯ ಸಹಕಾರದಿಂದ, ಈಕೆಯ ಸ್ನೇಹಿತ, ಕಾರ್ಕಳದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಆನಂದ ದೇವಾಡಿಗ ಅವರನ್ನು ಮಧ್ಯಾಹ್ನದ ನಂತರ ಕಾರ್ಕಳದ ಬಾರೊಂದಕ್ಕೆ ಕರೆಯಿಸಿಕೊಂಡು ಕಂಠಪೂರ್ತಿ ಕುಡಿಸಿದರು. ರಾತ್ರಿ ಆಗುತ್ತಿದ್ದಂತೆ ಆನಂದ ದೇವಾಡಿಗನನ್ನು ಪುಸಲಾಯಿಸಿ, ನಿದ್ರೆ ಮಾತ್ರೆ ನುಂಗಿಸಿ ಬೈಂದೂರಿಗೆ ಕರೆದುಕೊಂಡು ಬಂದು ಒತ್ತಿನೆಣೆ ಸಮೀಪ ಇರುವ ಹೇನ್‌ಬೇರು ನಿರ್ಜನ ಪ್ರದೇಶದಲ್ಲಿ ಕಾರು ತಂದು ನಿಲ್ಲಿಸಿದ್ದಾರೆ. ನಿದ್ರೆ ಮಾತ್ರೆಯ ಮಂಪರಿನಲ್ಲಿದ್ದ ಆನಂದ ದೇವಾಡಿಗ ಇವರಿಗೆ ಕಾರಿನ ಒಳಗೆ ಇರುವಾಗಲೇ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: ಆರ್‌ಎಂಡಿ, ವಿಮಲ್ ಹೆಸರಲ್ಲಿ ನಕಲಿ ಪಾನ್ ಮಸಾಲ ಮಾರುತ್ತಿದ್ದವರ ಬಂಧನ
ಆರೋಪಿಗಳ ಪರಾರಿ ಯತ್ನ: ಕಾರಿಗೆ ಬೆಂಕಿ ಹಾಕಿ ಅಲ್ಲಿಂದ ತಲೆಮರೆಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ಆರೋಪಿಗಳು ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟ್ಟಿದ್ದರು. ಬೆಂಗಳೂರಿಗೆ ಹೊರಟ್ಟಿದ್ದ ಬಸ್ಸು ಮಾರ್ಗ ಮಧ್ಯದಲ್ಲೇ ಹಾಳಾಗಿದ್ದು, ಮತ್ತೆ ಮೂಡುಬಿದಿರೆಗೆ ವಾಪಾಸಾಗಿದ್ದಾರೆ. ಗುರುವಾರ ಬೆಳಗ್ಗೆ ಮೂಡುಬಿದಿರೆಯಿಂದ ಕಾರ್ಕಳಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆಗೆ ಸಹಕರಿಸಿದ ಸದಾನಂದ ಶೇರೆಗಾರ್‌ರ ಸಂಬಂಧಿಗಳಾದ ನಿತಿನ್ ದೇವಾಡಿಗ, ಸಚಿನ್ ದೇವಾಡಿಗ ಆರೋಪಿಗಳನ್ನು ಮೊದಲೇ ಬೈಂದೂರು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದಿದ್ದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿರುವ ಪ್ರಿಯಕರನಿಗೆ ಗುಪ್ತಾಂಗದಲ್ಲಿ ಗಾಂಜಾ ಎಣ್ಣೆ ಇಟ್ಟು ಸಪ್ಲೈ!
ಮಂಗಳವಾರ ಮಧ್ಯರಾತ್ರಿ 12.30ರ ಸುಮಾರಿಗೆ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್‌ನಲ್ಲಿ ಈ ಕಾರು ಬೈಂದೂರು ಕಡೆಗೆ ಚಲಿಸುವುದು, ಟೋಲ್ ಗೇಟ್‌ನಲ್ಲಿ ಮಹಿಳೆಯೋರ್ವಳು ಕಾರಿನಿಂದ ಇಳಿದು ಟೋಲ್‌ಗೆ ಹಣ ನೀಡಿರುವುದು ಅಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು ತನಿಖೆಗೆ ಸಹಕಾರಿಯಾಯಿತು.
ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಠಾಣಾಧಿಕಾರಿ ಪವನ್ ನಾಯಕ್ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶ್ರೀನಿವಾಸ್, ಸುಜೀತ್, ಶಾಂತರಾಮ ಶೆಟ್ಟಿ, ನಾಗೇಂದ್ರ, ಮೋಹನ್, ಕೃಷ್ಣ, ಶ್ರೀಧರ್, ಚಂದ್ರ ಗಂಗೊಳ್ಳಿ, ಪ್ರಿನ್ಸ್ ಶಿರೂರು, ಚಾಲಕ ಚಂದ್ರಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.