Asianet Suvarna News Asianet Suvarna News

ಬೆಂಗಳೂರು: ಪ್ರೀತಿಗೆ ಮನೆಯವರ ವಿರೋಧ, ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ, ಪ್ರೇಮಿ ಆತ್ಮಹತ್ಯೆ

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Married Woman Lover Commits Suicide in Bengaluru grg
Author
First Published Nov 7, 2023, 6:12 AM IST

ಬೆಂಗಳೂರು(ನ.07):  ತಮ್ಮ ಪ್ರೇಮಕ್ಕೆ ಕುಟುಂಬದವರಿಂದ ವಿರೋಧದ ಹಿನ್ನೆಲೆಯಲ್ಲಿ ಬೇಸರಗೊಂಡು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ (ವಿವಾಹಿತೆ) ಹಾಗೂ ಆಕೆಯ ಗೆಳೆಯ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರಿಯಮ್ಮ ಅಗ್ರಹಾರ ನಿವಾಸಿ ಸೌಮಿನಿ ದಾಸ್‌ (21) ಹಾಗೂ ಅಭಿಲ್‌ ಅಬ್ರಾಹಂ (25) ಮೃತ ದುರ್ದೈವಿಗಳು. ದೊಡ್ಡ ಗುಬ್ಬಿ ಸಮೀಪದ ಡಿ ಮ್ಯಾಕ್ಸ್ ಸರ್ವೀಸ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಭಾನುವಾರ ಇಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಫ್ಲ್ಯಾಟ್‌ನಲ್ಲಿ ಬೆಂಕಿ ಕಂಡು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯಲ್ಲಿ ಬೆಂದು ದಾಸ್‌ ಕೊನೆಯುಸಿರೆಳೆದಿದ್ದಾಳೆ. ಭಾಗಶಃ ಸುಟ್ಟು ಹೋಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಆತ ರಾತ್ರಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

8ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ; ಇತ್ತ ಮೊಬೈಲ್ ಬಿಟ್ಟು ಚೆನ್ನಾಗಿ ಓದು ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ!

ಪ್ರೇಮ ತಂದ ಸಾವು:

ಮೃತ ಸೌಮಿನಿ ದಾಸ್ ಪಶ್ಚಿಮ ಬಂಗಾಳ ರಾಜ್ಯದವಳಾಗಿದ್ದು, ಕರಿಯಮ್ಮ ಅಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ ಓದುತ್ತಿದ್ದಳು. ಎರಡು ವರ್ಷಗಳ ಹಿಂದೆಯೇ ಆಕೆಗೆ ವಿವಾಹವಾಗಿತ್ತು. ಇನ್ನು ನರ್ಸ್‌ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿ ದಾಸ್‌ಗೆ ಪರಿಚಯವಾಗಿದೆ. ಕಾಲೇಜಿಗೆ ರಜೆ ಅಥವಾ ಬಿಡುವಿನ ವೇಳೆಯಲ್ಲಿ ಅಬ್ರಾಹಂ ಏಜೆನ್ಸಿಯಲ್ಲಿ ಸೌಮಿನಿ ದಾಸ್ ಕೆಲಸ ಮಾಡುತ್ತಿದ್ದಳು. ಮೂರು ತಿಂಗಳ ಹಿಂದೆ ತಮ್ಮ ಪತಿಗೆ ಅಬ್ರಾಹಂನನ್ನು ತಾವು ಒಂದೇ ಏಜೆನ್ಸಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಆಕೆ ಪರಿಚಯಿಸಿದ್ದಳು.

ದಾಬಸ್‌ಪೇಟೆ: ವನಕಲ್ಲು ಮಲ್ಲೇಶ್ವರ ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಕಾಲ ಕ್ರಮೇಣ ಇಬ್ಬರು ಆತ್ಮೀಯ ಒಡನಾಡಿಗಳಾಗಿದ್ದು, ಪ್ರೇಮಾಂಕುರವಾಗಿದೆ. ಹೀಗಿರುವಾಗ ಇತ್ತೀಚಿಗೆ ತನ್ನೂರು ಕೊಲ್ಕತ್ತಾಗೆ ಹೋಗಿದ್ದ ಸೌಮಿನಿ ದಾಸ್‌, ಅಲ್ಲಿಂದ ಶನಿವಾರ ನಗರಕ್ಕೆ ಮರಳಿದ್ದಾಳೆ. ನಂತರ ದೊಡ್ಡಗುಬ್ಬಿ ಸಮೀಪದ ಡಿ ಮ್ಯಾಕ್ಸ್ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ 14 ದಿನಗಳಿಗೆ ಫ್ಲ್ಯಾಟ್‌ ಬಾಡಿಗೆ ಪಡೆದು ಅಬ್ರಾಹಂ ಹಾಗೂ ಸೌಮಿನಿ ದಾಸ್ ನೆಲೆಸಿದ್ದರು. ಇದೇ ವೇಳೆ ಆಕೆಗೆ ದಾಸ್ ಪತಿ ಕರೆ ಮಾಡಿದ್ದರು.

ಆಗ ಪ್ರೇಮದ ವಿಷಯ ಪ್ರಸ್ತಾಪವಾಗಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಇದಾದ ನಂತರ ಫ್ಲ್ಯಾಟ್‌ಗೆ ಪೆಟ್ರೋಲ್ ತಂದು ಮೈ ಮೇಲೆ ಸುರಿದುಕೊಂಡು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಸೌಮಿನಿ ದಾಸ್ ಹಾಗೂ ಅಬ್ರಾಹಂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚೀರಾಟ ಕೇಳಿ ನೆರೆಹೊರೆಯವರು ಕೂಡಲೇ ಬಾಗಿಲು ಮುರಿದು ರಕ್ಷಣೆಗೆ ಧಾವಿಸಿದ್ದಾರೆ. ಆ ವೇಳೆಗೆ ಅಗ್ನಿಗೆ ಸೌಮಿನಿ ದಾಸ್ ಆಹುತಿಯಾಗಿದ್ದಳು. ತೀವ್ರ ಸುಟ್ಟ ಗಾಯವಾಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆತ ಕೂಡಾ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios