Mantri Developers MD Susheel Mantri Arrest: ಮಂತ್ರಿ ಡೆವೆಲಪರ್ಸ್‌ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಸುಶೀಲ್‌ ಮಂತ್ರಿ ಮತ್ತವರ ಮಗನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ಧಾರೆ. ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಸುಶೀಲ್‌ ಮಂತ್ರಿ ಜಾಮೀನಿನ ಮೇಲೆ ಹೊರಬಂದಿದ್ದರು.

ಬೆಂಗಳೂರು: ದೇಶದ ಪ್ರತಿಷ್ಟಿತ ಡೆವೆಲಪರ್ಸ್‌ ಸಂಸ್ಥೆ ಮಂತ್ರಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್‌ ಮಂತ್ರಿ ಮತ್ತವರ ಮಗ ಪ್ರತೀಕ್‌ ಮಂತ್ರಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಿಐಡಿ ಅಧಿಕಾರಿಗಳಿಂದ ಸುಶೀಲ್ ಮಂತ್ರಿ ಮತ್ತು ಪ್ರತೀಕ್‌ ಮಂತ್ರಿಯನ್ನು ಬಂಧಿಸಿದ್ಧಾರೆ. ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡದಿಂದ ವಿಚಾರಣೆ ನಡೆಸುತ್ತಿದೆ. ವಂಚನೆ ಪ್ರಕರಣದಲ್ಲಿ ಸುಶೀಲ್ ಮಂತ್ರಿ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಸಿಐಡಿ ವಿಚಾರಣೆ ನಡೆಸಿ ಸೆಪ್ಟೆಂಬರ್ 12 ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಹಿಂದೆ ಮನಿಲ್ಯಾಂಡ್ರಿಂಗ್ ಕೇಸ್ ನಲ್ಲಿ ಇಡಿ ಅಧಿಕಾರಿಗಳು ಸುಶೀಲ್ ಮಂತ್ರಿಯನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದಿದ ಸುಶೀಲ್ ಮಂತ್ರಿಯನ್ನು ಈಗ ಸಿಐಡಿ ಅಧಿಕಾರಿಗಳು ವಂಚನೆ ಪ್ರಕರಣದಲ್ಲಿ ಬಂಧಿಸಿದ್ದಾರೆ. 

ಸೋಮವಾರ ಮತ್ತೆ ಸುಶೀಲ್ ಮಂತ್ರಿಯನ್ನು ಸಿಐಡಿ‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಸಿಐಡಿಯ ಆರ್ಥಿಕ ಅಪರಾಧಗಳ ವಿಂಗ್ ನಿಂದ ತಂದೆ ಮಗನ ಬಂಧನವಾಗಿದೆ. ಜೂನ್ 25 ರಂದು ಜಾರಿ ನಿರ್ದೇಶನಾಲಯ ಸುಶೀಲ್ ಮಂತ್ರಿ ಅವರನ್ನು ಖಾಸಗಿ ಲೇವಾದೇವಿ ಪ್ರಕರಣ ಸಂಬಂಧ ಬಂಧಿಸಿತ್ತು.

ದೂರುದಾರರ ಪ್ರತಿಕ್ರಿಯೆ:

ವಂಚನೆಗೊಳಗಾದ ಧನಂಜಯ್ ಪದ್ಮನಾಭ ಪ್ರತಿಕ್ರಿಯೆ ನೀಡಿದ್ದು, "ಮಂತ್ರಿ ಡೆವಲಪರ್ಸ್ ಕಂಪೆನಿಯಿಂದ ಮಂತ್ರಿ ಸೆರೆನಟಿ, ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ ಗಳಲ್ಲಿ ವಂಚನೆಯಾಗಿದೆ. ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದ ಪ್ರಾಜೆಕ್ಟ್ ಗಳಲ್ಲಿ ವಂಚನೆಯಾಗಿದೆ. ಸಾಕ್ಣ್ಯಾಧಾರ,ದಾಖಲೆಗಳ ಸಂಗ್ರಹಕ್ಕೆ ಸಿಐಡಿ ಅಧಿಕಾರಿಗಳು ಕರೆಸಿದ್ದರು. 2013ರಲ್ಲಿ ಹಣ ಪಡೆದುಕೊಂಡು 2016 ಫ್ಲಾಟ್ ನೀಡುವುದಾಗಿ ಹೇಳಿದ್ರು. 2020 ರಲ್ಲಿ ಸುಬ್ರಮಣ್ಯಪುರ, ಹೆಣ್ಣೂರು ಠಾಣೆಗಳಲ್ಲಿ ಕೇಸ್ ದಾಖಲಿಸಿದ್ರು, ಯಾವುದೇ ಕ್ರಮ ಆಗಿರಲಿಲ್ಲ. ನಮಗೆ ಮನೆ ಸಿಕ್ಕಿಲ್ಲ, ನಾವು ಹೂಡಿಕೆದಾರರಲ್ಲ, ಮನೆ ಗ್ರಾಹಕರು. 70-80 ಲಕ್ಷ ಹಣ ಪಾವತಿಸಿದ್ದೇವೆ, ರೇರಾ ಕೆಲಸವನ್ನು ಮಾಡದೆ ಇರುವುದರಿಂದ ನಮಗೆ ಈ ಪರಿಸ್ಥಿತಿ. ಕರ್ನಾಟಕದಲ್ಲಿ ಮಂತ್ರಿ ಡೆವಲಪರ್ಸ್ UDS, (ಮನೆಯಲ್ಲಿ ಭಾಗ) ಸೇಲ್ ಡೀಡ್ ನಲ್ಲಿ ನೀಡಬೇಕು. ಅನ್ ಲೈನ್ ಮೂಲಕ ಫ್ಲಾಟ್ ಬುಕ್ ಮಾಡಿದ್ವಿ, ಅಂಡರ್ ಕನ್ಸಟ್ರಕ್ಷನ್ ಅಂಪಾರ್ಟ್ ಮೆಂಟ್ ಹೂಡಿಕೆ ಮಾಡಿದ್ದೇವೆ. 3 ಸಾವಿರ ಫ್ಲಾಟ್ ಗಳಲ್ಲಿ ವೆಬ್ ಸಿಟಿ, ಮಂತ್ರಿ ಸಿಟಿ, ಸೆರೆನಿಟಿ ಫ್ಲಾಟ್ ಗಳಲ್ಲಿ ವಂಚನೆ ಆಗಿದೆ. ನಮಗೆ ನ್ಯಾಯಾ ಸಿಗುವ ವರೆಗೆ ಹೋರಾಟ ಮುಂದುವರೆಸುತ್ತೇವೆ," ಎಂದು ತಿಳಿಸಿದ್ದಾರೆ.

ಏನಿದು ವಂಚನೆ ಪ್ರಕರಣ:

ಫ್ಲ್ಯಾಟ್‌ ಕೊಡಿಸುವುದಾಗಿ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಸಂಸ್ಥೆ ಮಂತ್ರಿ ಡೆವಲಪರ್ಸ್‌ ಸಂಸ್ಥೆ ಸಾರ್ವಜನಿಕರಿಂದ ಕೋಟ್ಯಂತರ ರುಪಾಯಿ ಹಣ ಪಡೆದುಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಐವರು ಗ್ರಾಹಕರು ಕಂಪನಿಯ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಮಂತ್ರಿ ಡೆವಲಪರ್ಸ್‌ ಪ್ರೈ.ಲಿ.ನ ನಿರ್ದೇಶಕರಾದ ಸುಶೀಲ್‌ ಪಾಂಡುರಂಗ ಮಂತ್ರಿ, ಪ್ರತೀಕ್‌ ಸುಶೀಲ್‌ ಮಂತ್ರಿ, ಸ್ನೇಹಲ್‌ ಸುಶೀಲ್‌ಮಂತ್ರಿ, ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಲಿ.ಅಧಿಕಾರಿಗಳು, ಮಂತ್ರಿ ವೆಬ್‌ ಸಿಟಿ ಗೃಹ ವಸತಿ ಯೋಜನೆಯ ಜಾಗದ ಮಾಲಿಕರು ಸೇರಿ 18 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಐವರು ನೀಡಿರುವ ಪ್ರಕರಣದಲ್ಲಿ ಸುಮಾರು ಮೂರು ಕೋಟಿ ವಂಚನೆಯಾಗಿದೆ. ಇದೇ ರೀತಿ ನೂರಾರು ಜನರಿಗೆ ವಂಚನೆ ಆಗಿದೆ ಎಂದು ಹೇಳಲಾಗಿತ್ತು. ಸದ್ಯಕ್ಕೆ ಐವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ಕಳೆದ ಎರಡು ವರ್ಷದ ಹಿಂದೆ ಮಂತ್ರಿ ಡೆವಲಪರ್ಸ್‌ ಪ್ರೈ.ಲಿ.ನವರು ಪ್ಲ್ಯಾಟ್‌ ಕೊಡುವುದಾಗಿ ಜಾಹೀರಾತು ನೀಡಿದ್ದರು. ರಿಯಲ್‌ ಎಸ್ಟೇಟ್‌ನಲ್ಲಿ ಪ್ರತಿಷ್ಠಿತ ಕಂಪನಿಯಾಗಿದ್ದರಿಂದ ನೂರಾರು ಮಂದಿ ಪ್ಲ್ಯಾಟ್‌ ಖರೀದಿಸಿದ್ದರು.

ಇದನ್ನೂ ಓದಿ: ದಿಲ್ಲಿ ಏರ್‌ಪೋರ್ಟ್‌ನಲ್ಲಿ ಮಂತ್ರಿ ಡೆವಲಪರ್ಸ್ ಮಾಲೀಕನ ಪತ್ನಿಗೆ ತಡೆ!

ಫ್ಲ್ಯಾಟ್‌ ನೀಡುವ ಮೊದಲೇ ಸಂಸ್ಥೆ ಗ್ರಾಹಕರ ಬಳಿ ಹಂತ-ಹಂತವಾಗಿ ಎರಡು ವರ್ಷಗಳ ಹಿಂದೆಯೇ ಹಣ ಕಟ್ಟಿಸಿಕೊಂಡಿದೆ. ಅಲ್ಲದೆ, ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಲಿ. ಅಧಿಕಾರಿಗಳು ಮಂತ್ರಿ ಡೆವಲಪರ್ಸ್‌ ಅವರೊಂದಿಗೆ ಜೊತೆಗೂಡಿ ಆರ್‌ಬಿಐ ನಿಯಮ ಉಲ್ಲಂಘಿಸಿ ಸಾಲದ ಹಣವನ್ನು ಮಂತ್ರಿವೆಬ್‌ ಸಿಟಿ ಗೃಹ ವಸತಿ ಯೋಜನೆಗೆ ಹಂತ-ಹಂತವಾಗಿ ನಿರ್ಮಾಣವಾದಂತೆ ಸ್ಲಾಬ್‌ ರೀತಿಯಲ್ಲಿ ನೀಡದೆ, ಶೇ.98ರಷ್ಟುಲೋನ್‌ ಹಣವನ್ನು ಸಂಸ್ಥೆಗೆ ಒಮ್ಮೆಲೆ ವರ್ಗಾವಣೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ನೋಟು ಅಮಾನ್ಯೀಕರಣವಾದ ಬಳಿಕ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ ಎಂಬುದು ಗ್ರಾಹಕರ ಆರೋಪ. ವಂಚನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮಂತ್ರಿ ಡೆವಲಪರ್ಸ್ ನಿಂದ ಕೊಟ್ಯಂತರ ರು. ವಂಚನೆ : ಕೇಸ್ ದಾಖಲು

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಸುಶೀಲ್‌ ಮಂತ್ರಿ ಮತ್ತು ಪ್ರತೀಕ್‌ ಮಂತ್ರಿಯನ್ನು ಬಂಧಿಸಿದ್ದಾರೆ. ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಕಡಿಮೆ ಬೆಲೆಗೆ ಫ್ಲಾಟ್‌ ಕೊಡುವ ಸುಳ್ಳು ಭರವಸೆ ನೀಡಿ ಬೆಂಗಳೂರಿನಲ್ಲಿ ಜನರನ್ನು ಪದೇ ಪದೇ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದರೂ ಜನ ಖರೀದಿಸಲು ಹೋಗಿ ಮೋಸ ಹೋಗುತ್ತಲೇ ಇದ್ದಾರೆ.