ಮೂಡಾ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೂಡಾ ಸಿಬ್ಬಂದಿ ಕೀರ್ತನ್‌. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಂಗಳೂರು(ಜೂ.03): ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ಸಿಬ್ಬಂದಿಯೊಬ್ಬರು ಉರ್ವಸ್ಟೋರಿನ ಮೂಡಾ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿಯನ್ನು ಪಡೀಲ್‌ ಮೂಲದ ಕೀರ್ತನ್‌ (30) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಕೀರ್ತನ್‌ ಅವರು ಕಚೇರಿಗೆ ಬಂದು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದರು. ಸ್ವಲ್ಪ ಸಮಯದ ನಂತರ ಕೀರ್ತನ್‌ ನಾಪತ್ತೆಯಾಗಿದ್ದು ಚಹಾ ಕುಡಿಯಲು ಹೊರಗೆ ಹೋಗಿರಬಹುದು ಎಂದು ಕಚೇರಿ ಸಿಬ್ಬಂದಿ ಭಾವಿಸಿದ್ದರು. ಆದರೆ ಮಧ್ಯಾಹ್ನ 12 ಗಂಟೆಯಾದರೂ ವಾಪಸ್‌ ಬಂದಿರಲಿಲ್ಲ.

ಬೆಂಗಳೂರು: ಪಿಜಿಯಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು, ಕಾರಣ ನಿಗೂಢ?

ನಂತರ ಕಚೇರಿ ಸಿಬ್ಬಂದಿ ಆತನ ಮೊಬೈಲ್‌ ಸ್ಥಳವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಅದು ಮುಡಾ ಆವರಣದಲ್ಲಿತ್ತು. ಕೀರ್ತನ್‌ಗಾಗಿ ಹುಡುಕಾಟ ನಡೆಸಿದಾಗ ಸ್ಟೋರ್‌ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಉರ್ವ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.