ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅರೆಸ್ಟ್!
ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ ಆರೋಪದಡಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನ ರಾತ್ರೋರಾತ್ರಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು (ಅ.08): ಚಿರತೆ ಚಿತ್ರ ಬಳಸಿ ಗರ್ಭಿಣಿಗೆ ಅವಹೇಳನ ಆರೋಪದಡಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನ ರಾತ್ರೋರಾತ್ರಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಜಪೆ ಠಾಣೆ ಪೊಲೀಸರಿಂದ ಸುನೀಲ್ ಬಜಿಲಕೇರಿ ಬಂಧನವಾಗಿದ್ದು, ಫೇಸ್‌ಬುಕ್‌ನಲ್ಲಿ ಗರ್ಭಿಣಿ ಬಗ್ಗೆ ಅವಹೇಳನಕಾರಿ ಬರಹ ಬರೆದಿದ್ದರು ಎನ್ನಲಾಗಿದೆ. 'ನಮೀಬಿಯಾ ಚೀತಾಗೆ ಸೀಮಂತ ಯಾವಾಗ?' ಅಂತ ಪೋಸ್ಟ್ ಮಾಡಿ ಗರ್ಭಿಣಿಯ ಫೋಟೋಗೆ ಚೀತಾದ ಮುಖ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಗರ್ಭಿಣಿ ಮತ್ತು ಭಾರತೀಯ ಸಂಸ್ಕೃತಿಗೆ ಅವಹೇಳನ ಅಂತ ಎಡಪದವು ಗ್ರಾಮದ ಮಹಿಳೆ ಪೊಲೀಸ್ ದೂರು ನೀಡಿದ್ದರು.
ಹೀಗಾಗಿ ಸುನೀಲ್ ಬಜಿಲಕೇರಿ ಬಂಧನವಾಗಿದೆ. ಬಿಜೆಪಿ ಮತ್ತು ಸರ್ಕಾರದ ವಿರುದ್ದ ಟೀಕೆ ಮಾಡ್ತಿದ್ದ ಸುನೀಲ್ ಬಜಿಲಕೇರಿ, ತನ್ನ ಸಾಮಾಜಿಕ ತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದಿದ್ದ ಚೀತಾದ ಹೆಸರಲ್ಲಿ ಮತ್ತೆ ಅವಹೇಳನದ ಪೋಸ್ಟ್ ಮಾಡಿದ್ದು, ಇದರಿಂದ ಭಾರತೀಯ ಸಂಸ್ಕೃತಿ ಮತ್ತು ಮಹಿಳೆಯರಿಗೆ ಅಪಮಾನವಾಗಿದೆ ಅಂತ ದೂರಲಾಗಿದೆ. ಈ ಹಿಂದೆ ಹಿಂದೂ ಸಂಘಟನೆಯಲ್ಲಿದ್ದು, ಸದ್ಯ ಸಂಘಟನೆಗಳಿಂದ ಹೊರಬಂದಿರುವ ಸುನೀಲ್ ಬಿಜೆಪಿ ನಾಯಕರ ವಿರುದ್ದ ನಿತ್ಯ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡ್ತಾರೆ.
ಪಿಎಫ್‌ಐ ಕುಕೃತ್ಯ ಹಿಂದೆ ಸರ್ವೀಸ್ ತಂಡದ ಕೈವಾಡ: ಸಂಘಟನೆಯ ಮುಖಂಡರ ಭದ್ರತೆಗೆಂದು ಸ್ಥಾಪನೆ
ನಳಿನ್ ಕಟೀಲ್ ಅವಹೇಳನ ಕೇಸ್‌ನಲ್ಲೂ ಅರೆಸ್ಟ್ ಆಗಿದ್ದ ಸುನೀಲ್!: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂದರ್ಶನದ ವಿಡಿಯೋದ ಆಡಿಯೋವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸುನಿಲ್ ಬಜಿಲಕೇರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಎಂಆರ್ಪಿಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಡೆಗಣಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇನ್ನು ಹಿಂದುತ್ವ ಅಲ್ಲ, ಬಂಧುತ್ವಕ್ಕಾಗಿ ಹೋರಾಟ ಎಂದು ಸುನೀಲ್ ಘೋಷಿಸಿದ್ದರು. ಫೇಸ್ ಬುಕ್ನಲ್ಲಿ ಸಕ್ರಿಯವಾಗಿರುವ ಹಿಂದೂ ಸಂಘಟನೆಯ ಕಾರ್ಯಕರ್ತೆಯೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಸುನಿಲ್ ಬಜಿಲಕೇರಿಗೆ ತರಾಟೆಗೆ ತೆಗೆದುಕೊಂಡಿದ್ದರು.
ಪರೇಶ್ ಮೇಸ್ತಾ ಸಾವು ಕೇಸ್: ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ, ಖಾದರ್
ಇದೇ ಯುವತಿ ಮಂಗಳೂರಿನ ಖಾಸಗಿ ಚಾನೆಲ್ನಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನದ ವೇಳೆ ಲೈವ್ ಫೋನ್ ಇನ್ ಕರೆ ಮಾಡಿ ನಳಿನ್ ಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು. ಇದಾದ ಬಳಿಕ ಸುನಿಲ್ ಬಜಿಲಕೇರಿಗೆ ತರಾಟೆಗೆ ತೆಗೆದುಕೊಂಡ ಯುವತಿಯ ಆಡಿಯೋವನ್ನು ಚಾನೆಲ್ನ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನಕ್ಕೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಯುವತಿ ಲೈವ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಳೆ ಎಂಬ ರೀತಿಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಸುನಿಲ್ ಬಜಿಲಕೇರಿಯನ್ನು ಬಂಧಿಸಿದ್ದರು. ಇದೀಗ ಮತ್ತೆ ಸಾಮಾಜಿಕ ತಾಣದ ಪೋಸ್ಟ್ ಕಾರಣಕ್ಕೆ ಸುನೀಲ್ ಬಂಧನವಾಗಿದೆ.