Crime News: ಕಳೆದ ನಾಲ್ಕು ವರ್ಷಗಳಲ್ಲಿ 13 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ ವ್ಯಕ್ತಿಯನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 

ಹೈದರಾಬಾದ್‌ (ಜು. 22): ಎರಡು ತೆಲುಗು ರಾಜ್ಯಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 13 ಮಹಿಳೆಯರನ್ನು ಮದುವೆಯಾಗಿದ್ದ ವ್ಯಕ್ತಿಯನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿ 35 ವರ್ಷದ ಅಡಪ ಶಿವಶಂಕರ್ ಬಾಬು ಎಂದು ಗುರುತಿಸಲಾದ ವ್ಯಕ್ತಿ ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗಿ ಅವರ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ. ಆರೋಪಿಯು ವಿವಾಹ ವಿಚ್ಛೇದನ ಪಡೆದ ಶ್ರೀಮಂತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿದ್ದ. ನಕಲಿ ವಿಚ್ಛೇದನ ಪತ್ರಗಳನ್ನು ತಯಾರಿಸಿ ತನ್ನ ಬಳಿಯೇ ಇಟ್ಟುಕೊಂಡು ವಿಶ್ವಾಸ ಮೂಡಿಸಿ ವಂಚಿಸುತ್ತಿದ್ದ.

ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗಚಿಬೌಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಹೈದರಾಬಾದ್, ರಾಚಕೊಂಡ, ಸಂಗಾರೆಡ್ಡಿ, ಗುಂಟೂರು, ವಿಜಯವಾಡ ಮತ್ತು ಅನಂತಪುರದಲ್ಲಿ ಪ್ರಕರಣಗಳು ದಾಖಲಾಗಿವೆ. ಶಿವಶಂಕರ್ ಬಾಬು 25 ಲಕ್ಷ ರೂಪಾಯಿ ನಗದು ಹಾಗೂ 7 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಪಡೆದು ವಾಪಸ್ ನೀಡುತ್ತಿಲ್ಲ ಎಂದು ಸಂತ್ರಸ್ತ ಮಹಿಳೆಯೊಬ್ಬರು ರಾಮಚಂದ್ರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಮಹಿಳೆಯ ದೂರಿನ ಮೇರೆಗೆ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. ಬಾಬು 2021ರಲ್ಲಿ ಮ್ಯಾಟ್ರಿಮೋನಿ ಸೈಟ್ ಮೂಲಕ ತನ್ನನ್ನು ಸಂಪರ್ಕಿಸಿದ್ದ ಎಂದು ಸಂತ್ರಸ್ತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತನ್ನ ಹೆತ್ತವರು ಬಹಳ ಹಿಂದೆಯೇ ತೀರಿಕೊಂಡಿದ್ದಾರೆ ಮತ್ತು ತಾನು ಪ್ರತಿಷ್ಠಿತ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಮಹಿಳೆಗೆ ತಿಳಿಸಿದ್ದ. ಅಲ್ಲದೇ ತನ್ನ ಮಾಸಿಕ ವೇತನ 2 ಲಕ್ಷ ರೂ. ತಾನು ವಿಚ್ಛೇದಿತನಾಗಿದ್ದು, ಸೂಕ್ತ ಪತ್ನಿಯನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾನೆ.

ಮದ್ವೆಯಾಗಲು ಹುಡುಗಿಯ ಆಧಾರ್‌ ಕಾರ್ಡ್‌ನಲ್ಲಿ ವಯಸ್ಸು ತಿದ್ದುಪಡಿ, ನಾಲ್ವರು ಅರೆಸ್ಟ್

ಮಾತುಕತೆ ಬಳಿಕ ಪೋಷಕರು ಮಗಳಿಗೆ ಆರೋಪಿಯೊಂದಿಗೆ ಮದುವೆಗೆ ಒಪ್ಪಿಗೆ ನೀಡಿದ್ದರು. ಅಮೆರಿಕಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಆರೋಪಿ ಪೋಷಕರಿಂದ ಸುಮಾರು 25 ಲಕ್ಷ ರೂ ಪಡೆದಿದ್ದ. ಆದರೆ ಹಲವು ದಿನಗಳ ನಂತರವೂ ಅಮೆರಿಕಕ್ಕೆ ಹೋಗುವ ಯಾವುದೇ ಯೋಜನೆ ಇಲ್ಲದಿದ್ದಾಗ, ಪೋಷಕರು ಹಣವನ್ನು ಹಿಂತಿರುಗಿಸುವಂತೆ ಕೇಳಿದರು.

ಬಾಬು ಪೋಷಕರಿಗೆ ನಾನಾ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದ. ನಂತರ ರಾಮಚಂದ್ರಾಪುರ ಪೊಲೀಸರನ್ನು ಮಹಿಳೆ ಹಾಗೂ ಪೋಷಕರು ಸಂಪರ್ಕಿಸಿದ್ದಾರೆ. ಪೊಲೀಸರು ಬಾಬುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತನಿಗೆ ಈಗಾಗಲೇ ಮದುವೆಯಾಗಿರುವುದು ತಿಳಿದು ಬೆಚ್ಚಿಬಿದ್ದಿದ್ದಾಳೆ. ಆರೋಪಿ ಇನ್ನೊಬ್ಬ ಮಹಿಳೆಯೊಂದಿಗೆ ಠಾಣೆಗೆ ಬಂದಿದ್ದ, ಹಣ ಹಿಂದಿರುಗಿಸುವುದಾಗಿ ಪೊಲೀಸರಿಗೆ ಹೇಳಿದ್ದ.

ಸಂತ್ರಸ್ತೆ ಇನ್ನೊಬ್ಬ ಮಹಿಳೆಯನ್ನು ರಹಸ್ಯವಾಗಿ ಭೇಟಿಯಾಗಿ ಆರೋಪಿ ಬಗ್ಗೆ ವಿಚಾರಿಸಿದ್ದಾರೆ. ನಂತರ ಅದೇ ಕಾಲೋನಿಯ ಮತ್ತೊಬ್ಬ ಮಹಿಳೆ ಬಾಬು ಎಂಬಾತನನ್ನು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹಗಲು ಪಾಳಿ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಸಂತ್ರಸ್ತ ಮಹಿಳೆಯರನ್ನು ವಂಚಿಸಿ ಪ್ರತಿಯೊಬ್ಬರ ಜತೆ ಕಾಲ ಕಳೆಯುತ್ತಿದ್ದ. ಆದರೆ ಬಾಬು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಯಾರಿಂದಲೂ ಹಣ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಪೊಲೀಸರ ತನಿಖೆ ಮುಂದುವರೆದಿದೆ.