ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ದತ್ತು ಪುತ್ರನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯ್‌ ಅಲಿಯಾಸ್‌ ಸುಜಯೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈತ ರಾಜ್ಯಪಾಲರ ಲೆಟರ್‌ಹೆಡ್‌ನಲ್ಲಿ ನಕಲಿ ಸಹಿ ಮಾಡಿ ವಿಐಟಿ ವಿವಿ ಕುಲಪತಿ ಹುದ್ದೆಗೆ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ..

ಬೆಂಗಳೂರು (ಫೆ.5): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ದತ್ತು ಪುತ್ರ, ಪ್ರಧಾನಮಂತ್ರಿಗಳ ಕಾರ್ಯದರ್ಶಿ ಎಂದು ಹೇಳಿಕೊಂಡು ಕರ್ನಾಟಕ ರಾಜ್ಯಪಾಲರ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರ ರೀತಿ ಸಹಿ ಮಾಡಿ ವಂಚಿಸುತ್ತಿದ್ದ ಸುಜಯ್‌ ಅಲಿಯಾಸ್‌ ಸುಜಯೇಂದ್ರ ವಿರುದ್ಧ ಲೋಕಭವನ ಎಫ್‌ಐಆರ್‌ ದಾಖಲಿಸಿದೆ. ಈ ಆರೋಪಿಯು ಹೆಲಿಕಾಪ್ಟರ್‌ ಮುಂದೆ ತಾನು ನಿಂತಿರುವ ಫೋಟೋಗಳನ್ನು ತೋರಿಸಿ ಏಮಾರಿಸುತ್ತಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿಯು ರಾಜ್ಯಪಾಲರ ಆದೇಶವನ್ನು ಅನಧಿಕೃತವಾಗಿ ಬಳಸಿಕೊಂಡು 2025ರ ಜೂನ್‌ನಲ್ಲಿ ವಿಐಟಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಕುಲಪತಿ ಹುದ್ದೆಯ ನೇಮಕಾತಿ ಪತ್ರವನ್ನು ಹೊರಡಿಸಿದ್ದ. ರಾಜ್ಯಪಾಲರ ಅಧಿಕೃತ ಲೆಟರ್‌ಹೆಡ್‌ ಅನ್ನೇ ಬಳಸಿಕೊಂಡು, ರಾಜ್ಯಪಾಲರ ನಕಲಿ ಸಹಿ ಮಾಡಿದ್ದ. ಈ ಸಂಬಂಧ 2026ರ ಜ.5ರಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಯ ಮನೆ ವಿಜಯನಗರ ವ್ಯಾಪ್ತಿಯಲ್ಲಿ ಇರುವುದರಿಂದ ಈ ಪ್ರಕರಣವನ್ನು ವಿಜಯನಗರ ಠಾಣೆಗೆ ವರ್ಗಾಯಿಸಲಾಗಿದೆ.

ಸುಜಯೇಂದ್ರ ವಿರುದ್ಧ ಈ ರೀತಿಯ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಕೇಂದ್ರ ಸಚಿವ ಅಮಿತ್‌ ಶಾ ಅವರ ವಿಶೇಷ ಅಧಿಕಾರಿ ಸೋಗಿನಲ್ಲಿ ಪ್ರತಿಷ್ಠಿತ ಮಠದ ಜಮೀನು ಕೊಡಿಸುವುದಾಗಿ ನಂಬಿಸಿ ಐಎಎಸ್‌ ಅಧಿಕಾರಿಯೊಬ್ಬರ ಸೋದರ ಸಂಬಂಧಿಗೆ 2.7 ಕೋಟಿ ರು. ಏಮಾರಿಸಿದ್ದ. ಜಮ್ಮು-ಕಾಶ್ಮೀರ ಮೂಲದ ವ್ಯಕ್ತಿ ದೂರು ನೀಡಿದ್ದರು. ಅದರ ಆಧಾರದ ಮೇಲೆ ಸುಜಯೇಂದ್ರನನ್ನು ಕೆಲ ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವು ರಾಜಕಾರಣಿಗಳು, ಮಠಾಧೀಶರ ಜತೆಗೆ ತೆಗೆಸಿಕೊಂಡಿರುವ ಫೋಟೋಗಳು ಪತ್ತೆಯಾಗಿದ್ದವು.