ರಾಯಚೂರು ಜಿಲ್ಲೆಯ ದೇವದುರ್ಗ ಬಸ್ ನಿಲ್ದಾಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆಗೆ ಹೋಗಿದ್ದ ಬಾಲಕಿಯನ್ನು ಹಿಂಬಾಲಿಸಿ ಕಾಮುಕನೊಬ್ಬ ಈ ಕೃತ್ಯ ಎಸಗಿದ್ದಾನೆ. ಸ್ಥಳೀಯರು ಕಾಮುಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ದೇವದುರ್ಗ (ಜ.17): ಕಲಬುರಗಿ, ಬಳ್ಳಾರಿಯಲ್ಲಿ ದುಷ್ಕರ್ಮಿಗಳಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ನಡೆದಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಬಸ್ ನಿಲ್ದಾಣದ ಬಳಿ ಮೂತ್ರ ವಿಸರ್ಜನೆಗೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನ ಹಿಂಬಾಲಿಸಿ ಕಾಮುಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಬಸ್ ನಿಲ್ದಾಣದಲ್ಲಿ ನಿನ್ನೆ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೇವದುರ್ಗ ಮೂಲದ ನಾಗು(35) ಎಂಬಾತನಿಂದ ಕೃತ್ಯ. ನಿನ್ನೆ ಪೋಷಕರೊಂದಿಗೆ ದೇವದುರ್ಗ ಬಸ್ ನಿಲ್ದಾಣಕ್ಕೆ ಬಂದಿದ್ದ ಬಾಲಕಿ. ಬಸ್ ನಿಲ್ದಾಣದ ಬಳಿಯ ಜಾಲಿಗಿಡಗಳ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದಳು. ಈ ವೇಳೆ ಅಲ್ಲೇ ಹೊಂಚು ಹಾಕಿ ಕೂತಿದ್ದ ಕಾಮುಕ. ಬಾಲಕಿ ಮೂತ್ರ ವಿಸರ್ಜನೆಗೆ ತೆರಳುತ್ತಿದ್ದಂತೆ ಹಿಂಬಾಲಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದಾಳೆ. ಅದೃಷ್ಟವಶಾತ್ ಕಿರುಚಾಟ ಕೇಳಿ ದಾವಿಸಿ ಬಂದ ಪೋಷಕರು, ಸಾರ್ವಜನಿಕರು ಬಾಲಕಿಯನ್ನ ರಕ್ಷಣೆ ಮಾಡಿದ್ದಾರೆ. ಕಾಮುಕ ಯುವಕನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ
ಬಸ್ ಸ್ಟಾಪ್‌ನಲ್ಲೇ ಇರ್ತಾರೆ ಕಾಮುಕರು!
ರಾಯಚೂರು, ದೇವದುರ್ಗ, ಮಾನ್ವಿ ಪಟ್ಟಣದ ಬಸ್ ನಿಲ್ದಾಣಗಳಲ್ಲಿ ಪುಂಡುಪೋಕರಿಗಳು ಹಾವಳಿ ಹೆಚ್ಚಾಗಿದೆ. ಬೆಳಗ್ಗೆ ಸಂಜೆ ಶಾಲಾ ಸಮಯದಲ್ಲಿ ವಿದ್ಯಾರ್ಥಿನಿಯರು, ಬಾಲಕಿಯರನ್ನ ಟಾರ್ಗೆಟ್ ಮಾಡಿಕೊಂಡು ಹೊಂಚು ಹಾಕಿ ತಿರುಗಾಡುವುದು, ಚುಡಾಯಿಸುವುದು ಹೆಚ್ಚಳವಾಗಿದೆ. ಕಾಮುಕರಿಂದಾಗಿ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿನಿಯರು ಹೆದರುವಂತಾಗಿದೆ.
ಬಯಲೇ ಶೌಚಾಲಯ!
ರಾಯಚೂರು ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳಲ್ಲಿನ ಬಹುತೇಕ ಶೌಚಾಲಯಗಳು ಗಬ್ಬು ನಾರುತ್ತಿವೆ. ಕೆಲವೆಡೆ ಶೌಚಾಲಯಗಳೇ ಇಲ್ಲ. ಇದರಿಂದ ಮಹಿಳೆಯರು ಮಕ್ಕಳ ಅಕ್ಕಪಕ್ಕದ ಜಾಲಿಗಿಡ ಗಂಟೆಗಳ ಮರೆಯಲ್ಲಿ ಮೂತ್ರ ವಿಸರ್ಜನೆಗೆ ತೆರಳುವುದು ಅನಿವಾರ್ಯ ಕರ್ಮವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಾಮುಕರು ಮಹಿಳೆಯರು ಮೂತ್ರ ವಿಸರ್ಜನೆಗೆ ತೆರಳುವು ಜಾಗದಲ್ಲೇ ಹೊಂಚುಹಾಕಿ ಕೂತಿರುತ್ತಾರೆ. ವಿಡಿಯೋ ಮಾಡುವುದು, ಚುಡಾಯಿಸುವುದು ದಿನನಿತ್ಯ ನಡೆಯುತ್ತಲೇ ಇವೆ.
ಕುಂದಾನಗರಿಯ ಬೆಚ್ಚಿಬೀಳಿಸಿದ ಸಾಮೂಹಿಕ ಅತ್ಯಾಚಾರ, ರೇಪಿಸ್ಟ್‌ಗಳ ಪ್ಲ್ಯಾನ್‌ಗೆ ಪೊಲೀಸರೇ ಶಾಕ್!
ಸಿಸಿಟವಿ ಇಲ್ಲ, ಪೊಲೀಸ್ ಗಸ್ತು ಇಲ್ಲ
ಬಸ್ ನಿಲ್ದಾಣ ಸುತ್ತಮುತ್ತ ಆಯಾಕಟ್ಟಿನ ಜಾಗದಲ್ಲಿ ಸಿಸಿಟಿವಿಗಳೇ ಇಲ್ಲ. ಇದು ಕಾಮುಕರಿಗೆ, ಕಳ್ಳರಿಗೆ ವರವಾಗಿದೆ. ಶಕ್ತಿ ಯೋಜನೆ ಬಂದ ಬಳಿಕ ಮಹಿಳೆಯರ ಓಡಾಟ ಹೆಚ್ಚಳವಾಗಿದೆ. ನೂಕುನುಗ್ಗಲಿನ ಬಸ್‌ನಲ್ಲಿ ಪ್ರಯಾಣಿಕ ಸೋಗಿನಲ್ಲಿ ಬರುವ ಕಾಮುಕರು, ಕಳ್ಳರಿಂದ ದಿನನತ್ಯ ದುಷ್ಕೃತ್ಯ ನಡೆಯುತ್ತಲಿವೆ.ಸಿಸಿಟಿವಿ ಇಲ್ಲದಿರುವುದರಿಂದ ಕಳ್ಳತನ, ದೌರ್ಜನ್ಯ ನಡೆದರೂ ದುರ್ಷರ್ಮಿಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ.
