Gadag News: ಅಧಿಕ ಬಡ್ಡಿ, ಸೈಟ್ ಹೆಸರಲ್ಲಿ ಜನರಿಗೆ ಕಲರ್ ಕಲರ್ ಟೋಪಿ ಹಾಕಿದ್ದ ಆರೋಪಿ ಅರೆಸ್ಟ್!
Gadag News: ಅಧಿಕ ಬಡ್ಡಿ, ನಿವೇಶನ ಕೊಡುವುದಾಗಿ ನಂಬಿಸಿ ಜನರಿಗೆ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗದಗ (ಜು. 20): ಅಧಿಕ ಬಡ್ಡಿ, ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದ ಆರೋಪಿ ವಿಜಯ ರಾಘವೇಂದ್ರ ಶಿಂಧೆಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಎಸ್ ಪಿ, ನಗರದ ರಾಜೀವ್ ಗಾಂಧಿ ಬಡಾವಣೆ ನಿವಾಸಿ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಮಾಲೀಕ ವಿಜಯ ಶಿಂಧೆ ಜನರಿಗೆ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದ. ಆರೋಪಿ 25 ಮಂದಿಯಿಂದ ಸುಮಾರು ₹5 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದ. ಈತನಿಂದ ಮೋಸ ಹೋದವರು ಯಾರಾದರೂ ಇದ್ದಲ್ಲಿ ಮುಂದೆ ಬಂದು ದೂರು ನೀಡಬೇಕು’ ಎಂದು ಮನವಿ ಮಾಡಿದರು.
‘ಫೈನಾನ್ಸ್‌ನಲ್ಲಿ ಹಣ ಮತ್ತು ಚಿನ್ನವನ್ನು ಠೇವಣಿ ಮಾಡಿದರೆ ಉತ್ತಮ ಲಾಭ ನೀಡಲಾಗುವುದು ಎಂದು ನಂಬಿಸಿ 2020 ಅಕ್ಟೋಬರ್ 1ರಂದು ಸಂತೋಷ ಪ್ರಭಾಕರ ಮುಟಗಾರ ಅವರಿಂದ ವಿಜಯ ರಾಘವೇಂದ್ರ ಶಿಂದೆ ₹10 ಲಕ್ಷ ಹಾಗೂ 407 ಗ್ರಾಂ ಚಿನ್ನವನ್ನು ತೆಗೆದುಕೊಂಡಿದ್ದರು. ಆದರೆ ಈವರೆಗೆ ಹಣವನ್ನು ಹಿಂದಿರುಗಿಸಿಲ್ಲ. ಹಣವನ್ನು ನೀಡಬೇಕೆಂದು ಕೇಳಿದರೆ ಸತಾಯಿಸಿದ್ದಾರೆ. 15 ದಿನ, ತಿಂಗಳು ನಂತರ ಕೊಡುವೆ ಎಂದು ಹಣ ಮತ್ತು ಚಿನ್ನವನ್ನು ಮರಳಿ ಕೊಡದೇ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತೋಷ ಮುಟಗಾರ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು’ ಎಂದು ಅವರು ತಿಳಿಸಿದರು.
‘ಡಿಸಿಆರ್‌ಬಿ ಡಿಎಸ್‍ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ಮಹಾಂತೇಶ ಟಿ., ಸಿಬ್ಬಂದಿಯಾದ ಎ.ಪಿ.ದೊಡ್ಡಮನಿ, ಎಂ.ವಿ.ಹೂಲಹಳ್ಳಿ, ಎಸ್.ಜಿ.ಹರ್ಲಾಪೂರ, ಸಿ.ಎಲ್.ದೊಡ್ಡಮನಿ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಿ ಫೈನಾನ್ಸ್ ಮಾಲೀಕನ ಪತ್ತೆ ಕಾರ್ಯ ಆರಂಭಿಸಲಾಯಿತು. ಜುಲೈ 17ರಂದು ವಿಜಯ ಶಿಂದೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ’ ಎಂದು ಅವರು ವಿವರಿಸಿದರು.́
ಇದನ್ನೂ ಓದಿ: ಮೈಸೂರು: ಕೆಲಸ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ: ಆನ್‌ಲೈನ್ ದೋಖಾ ಮಾಡುತ್ತಿದ್ದ ಮೂವರು ಅರೆಸ್ಟ್
ವಿಜಯ ಶಿಂದೆ ವಿರುದ್ಧ ಕಲಂ 21 ಬಡ್ಸ್ ಕಾಯ್ದೆ (ಬ್ಯಾನಿಂಗ್ ಆಫ್ ಅನ್‌ರೆಗ್ಯುಲೇಡೆಟ್ ಡೆಪಾಸಿಟ್ ಸ್ಕೀಮ್ಸ್ ಆ್ಯಕ್ಟ್ 2019 ) ಅಡಿ ತನಿಖೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಷ್ಟು ಜನರಿಂದ ಹಣ ಮತ್ತು ಚಿನ್ನವನ್ನು ಸಂಗ್ರಹಿಸಿದ್ದ ಎಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.
ಒಸಿ, ಮಟ್ಕಾ, ಗ್ಯಾಂಬ್ಲಿಂಗ್ ಮತ್ತಿತರ ಕೃತ್ಯಗಳ ತಡೆಗೆ ವಿಶೇಷ ಕ್ರಮಕೈಗೊಳ್ಳಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ವ್ಯಕ್ತಿಗಳನ್ನು ಗಡೀಪಾರು ಮಾಡಲು ಕ್ರಮವಹಿಸಲಾಗಿದೆ ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜು ತಿಳಿಸಿದರು.