*ಐಬಿಎಂನಲ್ಲಿ ಕೆಲಸದಾಸೆ ತೋರಿಸಿ ಧೋಖಾ*ಮಾಜಿ ಉದ್ಯೋಗಿಯಿಂದ ಹಣ ಪಡೆದು ವಂಚನೆ*ನಕಲಿ ನೇಮಕಾತಿ ಪತ್ರ ನೀಡಿ ಟೋಪಿ

ಬೆಂಗಳೂರು (ಜ. 25): ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿ ಐಬಿಎಂ (IBM) ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ, ಆ ಕಂಪನಿಯ ಮಾಜಿ ನೌಕರನೊಬ್ಬ ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಹಾರಾಷ್ಟ್ರದ ಪುಣೆ ಮೂಲದ ಸಂಜೀವ್‌ ಗಂಗರಾಮ್‌ ಬಂಧಿತ. ಆರೋಪಿಯಿಂದ ನಕಲಿ ದಾಖಲೆಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್‌ನಲ್ಲಿ ತಮ್ಮ ಕಂಪನಿ ಹೆಸರು ಬಳಸಿ ಜನರಿಗೆ ಕೆಲವರು ವಂಚಿಸುತ್ತಿದ್ದಾರೆ ಎಂದು ಸಂಪಿಗೆಹಳ್ಳಿ ಠಾಣೆಯಲ್ಲಿ ಮಾನ್ಯತಾ ಟೆಕ್‌ ಪಾರ್ಕ್ನಲ್ಲಿರುವ ಐಬಿಎಂ ಕಂಪನಿಯ ಶಾಖೆಯ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಅದರನ್ವಯ ತನಿಖೆ ನಡೆಸಿದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಸಂಜೀವ್‌ ಬಿಕಾಂ ಪದವೀಧರನಾಗಿದ್ದು, ಪತ್ನಿ ಮತ್ತು ಮಕ್ಕಳ ಜತೆ ಪುಣೆಯಲ್ಲಿ ನೆಲೆಸಿದ್ದಾನೆ. ಈ ಮೊದಲು ಐಬಿಎಂ ಕಂಪನಿಯಲ್ಲಿ ನಾಲ್ಕು ವರ್ಷಗಳು ಕೆಲಸ ಮಾಡಿದ್ದ ಆತ, ನಂತರ ಆ ಕಂಪನಿಯ ನೌಕರಿ ಬಿಟ್ಟಿದ್ದ. ಎರಡು ವರ್ಷಗಳಿಂದ ಐಬಿಎಂ ಹೆಸರು ಬಳಸಿಕೊಂಡು ಜನರಿಗೆ ಟೋಪಿ ಹಾಕಿ ಆತ ಹಣ ಸಂಪಾದಿಸುವ ಕೃತ್ಯಕ್ಕಿಳಿದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ:Amazon ಹೆಸರಲ್ಲಿ ಧೋಖಾ: ಮಾಜಿ ಉದ್ಯೋಗಿ ಬಂಧನ!

45 ಜನರಿಗೆ ಟೋಪಿ!: ಒಎಲ್‌ಎಕ್ಸ್‌ ಸೇರಿದಂತೆ ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್‌ನಲ್ಲಿ ಐಬಿಎಂ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಸಂಜೀವ್‌ ಜಾಹೀರಾತು ಪ್ರಕಟಿಸಿ, ಆಸಕ್ತರು ಸಂಪರ್ಕಿಸುವಂತೆ ತನ್ನ ಮೊಬೈಲ್‌ ಸಂಖ್ಯೆ ಕೊಟ್ಟಿದ್ದ. ಬಳಿಕ ತನ್ನ ಸಂರ್ಪಕಿಸಿದವರಿಗೆ ನಕಲಿ ಉದ್ಯೋಗ ನೇಮಕಾತಿ ಪತ್ರ ಕಳುಹಿಸಿ ಆತ, ನೀವು ಕಂಪನಿಗೆ ಆಯ್ಕೆಯಾಗಿದ್ದೀರಿ. ವರ್ಕ್ ಫ್ರಮ್‌ ಹೋಂ ಕಾರಣಕ್ಕೆ ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ಕೊಡಲು ನೀವು ಇಂತಿಷ್ಟುಹಣ ಪಾವತಿಸಬೇಕು ಎನ್ನುತ್ತಿದ್ದ. ಈ ಮಾತು ನಂಬಿದವರಿಂದ .50 ರಿಂದ 80 ಸಾವಿರದ ವರೆಗೆ ಹಣ ಪಡೆದಿದ್ದಾನೆ.

ಇತ್ತೀಚಿಗೆ ಆರೋಪಿ ನೀಡಿದ ನೇಮಕಾತಿ ಪತ್ರ ನಂಬಿ ಮಾನ್ಯತಾ ಟೆಕ್‌ ಪಾರ್ಕ್ನಲ್ಲಿರುವ ಐಬಿಎಂ ಕಂಪನಿಗೆ ಕೆಲಸಕ್ಕೆ ಸಂತ್ರಸ್ತರೊಬ್ಬರು ತೆರಳಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ. ಇದುವರೆಗೆ 45 ಜನರಿಗೆ ಸಂಜೀವ್‌ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಈ ಪೈಕಿ ನಾಲ್ವರು ಸಂತ್ರಸ್ತರನ್ನು ಸಂಪರ್ಕಿಸಿ ದೂರು ಪಡೆದಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Loan Fraud: 100 ಕೋಟಿ ಸಾಲದಾಸೆ ತೋರಿಸಿ 1.8 ಕೋಟಿ ಧೋಖಾ: ಕಂಗಾಲಾದ ಉದ್ಯಮಿ..!

ಇನ್ಫೋಸಿಸ್‌ನಲ್ಲಿ ಉದ್ಯೋಗದ ಆಸೆ ತೋರಿಸಿ ರೂ. 4.32 ಲಕ್ಷ ವಂಚನೆ: ಇನ್ಫೋಸಿಸ್ ಕಂಪನಿ (Infosys) ಹೆಸರಿನಲ್ಲಿ ಕರೆ ಮಾಡಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯಯೊಬ್ಬರನ್ನು ನಂಬಿಸಿ ₹4.32 ಲಕ್ಷ ಪಡೆದು ವಂಚಿಸಲಾಗಿದೆ. ಗೊರಗುಂಟೆ ಪಾಳ್ಯದ ಎಂ.ವಿನಿತ್‌(24) ಎಂಬುವವರು ಸೈಬರ್‌ ಚೋರರಿಂದ (Cyber Crime) ವಂಚನೆಗೆ ಒಳಗಾಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಉತ್ತರ ಸಿಇಎನ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಸೈಬರ್‌ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

ಇತ್ತೀಚೆಗೆ ವಿನೀತ್‌ ಅವರ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ, ತಾನು ಇಸ್ಫೋಸಿಸ್‌ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಕಂಪನಿಯಲ್ಲಿ ಕೆಲಸ ಖಾಲಿ ಇದ್ದು, ನಿಮಗೆ ಕೆಲಸ ನೀಡುವುದಾಗಿ ಹೇಳಿ ನಂಬಿಸಿದ್ದಾನೆ. ಈತನ ಮಾತು ನಂಬಿದ ವಿನೀತ್‌ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಕೆಲಸ ಸೇರಲು ಕೆಲ ಶುಲ್ಕಗಳನ್ನು (Fee) ಪಾವತಿಸಬೇಕು ಎಂದು ವಿವಿಧ ಹಂತಗಳಲ್ಲಿ ವಿನೀತ್‌ ಅವರಿಂದ ಬರೋಬ್ಬರಿ .4.30 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.